ಹೊಸದುರ್ಗ: ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬಲ ಬೆಲೆಯಲ್ಲಿ ಕಡಲೆಕಾಳು ಖರೀದಿಸಲಾಗುತ್ತಿದೆ. 10 ಕ್ವಿಂಟಲ್ ಗೆ ಸೀಮಿತವಾಗಿರುವ ಕಡಲೆಕಾಳು ಖರೀದಿಯನ್ನು 20 ಕ್ವಿಂಟಲ್‌ಗೆ ಹೆಚ್ಚಿಸಬೇಕೆಂಬ ರೈತರ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಶಾಸಕ ಗೂಳಿಹಟ್ಟಿ ಶೇಖರ್ ಭರವಸೆ ನೀಡಿದರು.
ಹೊಸದುರ್ಗ ರೋಡ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಜಿಲ್ಲಾ ಟಾಸ್ಕ್ಫೋರ್ಸ್ ಆಶ್ರಯದಲ್ಲಿ ಆಯೋಜಿಸಿದ್ದ ಕಡಲೆ ಖರೀದಿ ಕೇಂದ್ರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ರೈತರಿಂದ ರಾಜ್ಯ ಸರ್ಕಾರ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳ ಹಾಗೂ ನ್ಯಾಫೆಡ್ ಬೆಂಗಳೂರು ಸಹಯೋಗದಲ್ಲಿ 4875 ರೂ. ದರದಲ್ಲಿ ಕಡಲೆಕಾಳು ಖರೀದಿಗೆ ಸರ್ಕಾರ ಆದೇಶಿಸಿದೆ.
ಕೇವಲ 10 ಕ್ವಿಂಟಲ್‌ಗೆ ನಿಗದಿಪಡಿಸಿರುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಈ ಬಗ್ಗೆ ಸಂಬಂಧಿಸಿದ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದರು.
ಹೊಸದುರ್ಗ ರೋಡ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ದಾಸ್ತಾನು ಘಟಕವನ್ನು ಸ್ಥಾಪಿಸಲು ಗೋಡೌನ್ ನಿರ್ಮಾಣಕ್ಕೆ 20 ಲಕ್ಷ ರೂ.ಗಳನ್ನು ಶಾಸಕರ ಅನುದಾನದಲ್ಲಿ ನೀಡುತ್ತೇನೆ. ಮಾ. 21 ರಂದು ಮಲ್ಲಪ್ಪನಹಳ್ಳಿ ಹಾಗೂ ಆನಿವಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಪೌತಿ ಖಾತೆ ಆಂದೋಲನ ಹಾಗೂ ಜನಸಂಪರ್ಕ ಸಭೆಯನ್ನು ನಡೆಸಲಾಗುವುದು. ವಿದ್ಯುತ್, ಕೃಷಿ, ತೋಟಗಾರಿಕೆ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಆಲಿಸಲಾಗುವುದು ಎಂದು ತಿಳಿಸಿದರು.
ರೈತರ ಮನೆಬಾಗಿಲಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವ ಉದ್ದೇಶದಿಂದ ರಾಜ್ಯದಲ್ಲಿ ಮಾದರಿಯಾದ ಪೌತಿ ಖಾತೆ ಆಂದೋಲನ ನಡೆಯುತ್ತಿದೆ. ಸುಮಾರು 23 ಗ್ರಾಪಂಗಳ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮ ಜರುಗುತ್ತಿದ್ದು, ರೈತರಿಗೆ ಹಲವು ವರ್ಷಗಳಿಂದ ಮುತ್ತಾತಂದಿರ ಹೆಸರಿನಲ್ಲಿಯೇ ಇದ್ದ ಜಮೀನುಗಳನ್ನು ಕಾನೂನು ಪ್ರಕಾರ ಅವರ ಖಾತೆಗೆ ವರ್ಗಾಯಿಸಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಎಪಿಎಂಸಿ ಅಧ್ಯಕ್ಷ ಹೆಬ್ಬಳ್ಳಿ ಮಲ್ಲಿಕಾರ್ಜುನ್, ತಾಪಂ ಮಾಜಿ ಸದಸ್ಯ ಹೊನ್ನೆಕೆರೆ ಮರಿದಿಮ್ಮಪ್ಪ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮೋಹನ್, ಉಪಾಧ್ಯಕ್ಷ ಶಿವಣ್ಣ, ನಿರ್ದೇಶಕರಾದ ಓಂಕಾರಣ್ಣ ಶಿವಣ್ಣ ಇತರರು ಇದ್ದರು.