ಹೊಸದುರ್ಗ: ತಾಲೂಕಿನ ಬ್ರಹ್ಮವಿದ್ಯಾನಗರದ ಭಗೀರಥ ಪೀಠ ಮಹಾಸಂಸ್ಥಾನ ಜಗದ್ಗುರು ಚಿನ್ಮೂಲಾದ್ರಿ ಶಿಲಾಪುರಿ ಮಹಾಸಂಸ್ಥಾನದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿಯವರ 21 ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ ಫೆ. 9 ಮತ್ತು 10 ರಂದು ಭಗೀರಥ ಪೀಠದ ಆವರಣದಲ್ಲಿ ಜರುಗಲಿದೆ. ಮಹೋತ್ಸವಕ್ಕೆ ಸಿದ್ಧತೆ ಭರದಿಂದ ಸಾಗಿದೆ.
ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಸಾಮೂಹಿಕ ವಿವಾಹ, ಜಾನಪದ ಸಾಹಿತ್ಯ, ಕಲಾ ಮೇಳ, ಸಾಂಸ್ಕೃತಿಕ ಉತ್ಸವ, ದತ್ತಿ ಉಪನ್ಯಾಸ, ಭಗೀರಥ ಜಯಂತ್ಯುತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಸಮಾರಂಭಕ್ಕೆ ರಾಜ್ಯದ ವಿವಿಧೆಡೆಗಳಿಂದ ಭಕ್ತರು ಆಗಮಿಸಲಿದ್ದು ಹಲವಾರು ವೇದಿಕೆಗಳನ್ನು ನಿರ್ಮಿಸಲಾಗಿದೆ. ಭಕ್ತರ ಅನುಕೂಲಕ್ಕಾಗಿ ಎರಡು ದಿನಗಳ ಕಾಲ ಪ್ರಸಾದ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡಲಾಗಿದೆ. ಫೆ. 9 ರಂದು ಬೆಳಿಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಾನಪದ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಜಾನಪದ ಕಲಾಮೇಳವನ್ನು ಭೂತೇಶ್ವರ ದೇವಸ್ಥಾನದಿಂದ ಶ್ರೀ ಭಗೀರಥ ಪೀಠದವರೆಗೆ ಆಯೋಜಿಸಲಾಗಿದೆ. ಬೆಳಿಗ್ಗೆ 11 ಗಂಟೆಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಅಧ್ಯಕ್ಷತೆಯಲ್ಲಿ ಶ್ರೀ ಲೇಪಾಕ್ಷಿ ಸ್ವಾಮೀಜಿ ವೇದಿಕೆಯಲ್ಲಿ ನಡೆಯುವ ಗೋಷ್ಠಿಯನ್ನು ಜಿಪಂ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್ ಉದ್ಘಾಟಿಸುವರು.
ಜಾನಪದ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕರಿಯಪ್ಪ ಮಾಳಿಗೆ ಉಪನ್ಯಾಸ ನೀಡುವರು. ಮಧ್ಯಾಹ್ನ 1 ಗಂಟೆಗೆ ನಡೆಯುವ ಜಗದ್ಗುರು ಲೇಪಾಕ್ಷಿ ಸ್ವಾಮೀಜಿ ದತ್ತಿ ಉಪನ್ಯಾಸ ಮಾಲಿಕೆಯ ಗೋಷ್ಠಿ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಮಂಜುನಾಥ್ ವಹಿಸುವರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ| ದೊಡ್ಡಮಲ್ಲಯ್ಯ ಉದ್ಘಾಟಿಸಲಿದ್ದು, ಬಾ. ಮೈಲಾರಪ್ಪ ಪ್ರಾಸ್ತಾವಿಕವಾಗಿ ಮಾತನಾಡುವರು. ಸಾಹಿತಿ ನಿರಂಜನ ದೇವರಮನೆ ಉಪನ್ಯಾಸ ನೀಡುವರು. ನಂತರ ಸಾಂಸ್ಕೃತಿಕ ವೈಭವ ನಡೆಯಲಿದೆ. ಫೆ. 9 ರಂದು ಸಂಜೆ ನಡೆಯುವ ಧಾರ್ಮಿಕ ಸಮಾರಂಭದ ಸಾನ್ನಿಧ್ಯವನ್ನು ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಡಾ| ಶಾಂತವೀರ ಸ್ವಾಮೀಜಿ, ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ, ಶ್ರೀ ಬಸವ ಮಾಚಿದೇವ ಸ್ವಾಮೀಜಿ, ಶ್ರೀ ರೇಣುಕಾನಂದ ಸ್ವಾಮೀಜಿ, ಶ್ರೀ ಬಸವಕುಮಾರ ಸ್ವಾಮೀಜಿ ವಹಿಸುವರು.
ಅಧ್ಯಕ್ಷತೆಯನು ಮಾಜಿ ಸಚಿವ, ಶಾಸಕ ಪುಟ್ಟರಂಗ ಶೆಟ್ಟಿ ವಹಿಸಲಿದ್ದು, ಉದ್ಘಾಟನೆಯನ್ನು ಕೆಪಿಎಸ್‌ಸಿ ಅಧ್ಯಕ್ಷ ಶ್ರೀಕಾಂತ್ ರಾಯಚೂರು ನೆರವೇರಿಸುವರು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ರಚ್. ಬಿಲ್ಲಪ್ಪ ಭಗೀರಥ ಸಂಕಲ್ಪ, ಪ್ರಯತ್ನ, ಯಶಸ್ಸು ವಿಷಯದ ಕುರಿತು ಉಪನ್ಯಾಸ ನೀಡುವರು. ಕಡೂರು ಕ್ಷೇತ್ರದ ಮಾಜಿ ಶಾಸಕ ವೈ.ಎಸ್.ವಿ. ದತ್ತ ವಿಶೇಷ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಶಾಸಕರು, ಸಂಸದರು, ಮಾಜಿ ಶಾಸಕರುಗಳು ಭಾಗವಹಿಸುವರು.