“ಕನ್ನಡ ಚಿತ್ರರಂಗದಲ್ಲಿ ಪ್ರತಿ ಎರಡು ದಶಕಕೊಮ್ಮೆ ಒಂದು ದೊಡ್ಡ ಬದಲಾವಣೆ ಆಗುತ್ತಿರುತ್ತದೆ. ಎಂಭತ್ತರಲ್ಲಿ, ಎರಡು ಸಾವಿರದಲ್ಲಿ ಈಗ ಎರಡು ಸಾವಿರದ ಇಪ್ಪತ್ತರಲ್ಲಿ, ಅಂಥ ಬದಲಾವಣೆಗಳಾಗುತ್ತಿದೆ. ಈ ಬದಲಾವಣೆ ಪ್ರತಿ ದಶಕಕ್ಕೊಮ್ಮೆ ಆಗಬೇಕು. ಆಗ ಕನ್ನಡ ಚಿತ್ರರಂಗ ವ್ಯಾಪ್ತಿ, ಇನ್ನಷ್ಟು ವಿಸ್ತಾರವಾಗುತ್ತದೆ’ ಇದು ಹಿರಿಯ ನಿರ್ದೇಶಕ ಟಿ. ಎಸ್ ನಾಗಾಭರಣ ಅಭಿಮತ.
ಇತ್ತೀಚೆಗೆ ನಡೆದ “ಹೊಸ ದಿನಚರಿ’ ಸಿನಿಮಾದ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಟಿ. ಎಸ್ ನಾಗಾಭರಣ, “ಕನ್ನಡ ಚಿತ್ರರಂಗ ಈಗ ವಿಶ್ವದೆಲ್ಲೆಡೆ ಸದ್ದು ಮಾಡುತ್ತಿದೆ. ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ಹೊಸ ದಿನಚರಿ’ ಸಿನಿಮಾದ ಟ್ರೇಲರ್ ನೋಡಿದ ನಂತರ ಈ ತಂಡದಿಂದಲೂ ಒಂದು ಒಳ್ಳೆಯ ಸಿನಿಮಾ ಬರುವ ನಿರೀಕ್ಷೆ ಮೂಡುತ್ತದೆ’ ಎಂದರು.
ಇನ್ನು “ಹೊಸ ದಿನಚರಿ’ ಸಿನಿಮಾದಲ್ಲಿ ದೀಪಕ್ ಸುಬ್ರಹ್ಮಣ್ಯ, ಚೇತನ್ ವಿಕ್ಕಿ, ಮಂದಾರ, ವರ್ಷ, ಬಾಬು ಹಿರಣ್ಣಯ್ಯ, ಅರುಣಾ ಬಾಲರಾಜ್, ವಿವೇಕ್ ದೇವ್, ಶ್ರೀಪ್ರಿಯಾ, ಸುಪ್ರೀತಾ ಗೌಡ, ಬೇಬಿ ಮಾನಿನಿ ಮೊದಲಾದವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕೀರ್ತಿ ಶೇಖರ್ ಹಾಗೂ ವೈಶಾಖ್ ಪುಷ್ಪಲತಾ ಜಂಟಿಯಾಗಿ “ಹೊಸ ದಿನಚರಿ’ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ.
“ಎಲ್ಲರ ಜೀವನದಲ್ಲೂ ಪ್ರೀತಿ ಇದ್ದೇ ಇರುತ್ತದೆ. ಆದರೆ ಪ್ರೀತಿಸಿದ ವ್ಯಕ್ತಿ ಕೊನೆಯವರೆಗೂ ಇರುತ್ತಾರಾ? ಅವರಿಲ್ಲದೇ ಬೇರೊಬ್ಬರು ಜೀವನದಲ್ಲಿ ಬಂದಾಗ ಏನಾಗುತ್ತದೆ? ಎಂಬುದೆ “ಹೊಸ ದಿನಚರಿ’ ಸಿನಿಮಾದ ಕಥಾಹಂದರ. ಈ ಹಿಂದೆ ಕೆಲವು ಕಿರುಚಿತ್ರಗಳು ಮಾಡಿರುವ ಅನುಭವವಿರುವ ನಾವು ಈ ಸಿನಿಮಾ ತೆರೆಗೆ ತರುತ್ತಿದ್ದೇವೆ. ಇಂದಿನ ಜನರೇಶನ್‌ಗೆ ಹತ್ತಿರವಾಗುವಂಥ ವಿಷಯ ಸಿನಿಮಾದಲ್ಲಿದ್ದು, “ಹೊಸ ದಿನಚರಿ’ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ’ ಎಂಬುದು ಚಿತ್ರತಂಡದ ಒಕ್ಕೊರಲ ಮಾತು.
ಚಿತ್ರಕ್ಕೆ ರಾಕಿ ಛಾಯಾಗ್ರಹಣ, ರಂಜಿತ್ ಸಂಕಲನ ಮತ್ತು ವೈಶಾಖ್ ವರ್ಮ ಸಂಗೀತವಿದೆ. ಮೃತ್ಯುಂಜಯ ಶುಕ್ಲ, ಅಲೋಕ್ ಚೌರಾಸಿಯಾ ಹಾಗೂ ಗಂಗಾಧರ ಸಾಲಿಮಠ “ಹೊಸ ದಿನಚರಿ’ ಸಿನಿಮಾಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.