ಪ್ರೀತಿಗೆ ನಾನಾ ಅರ್ಥಗಳಿರುತ್ತವೆ. ಅದನ್ನು ಯಾವುದೋ ಒಂದು ಆಯಾಮದಲ್ಲಿ ನೋಡಲಾಗದು. ಹಾಗೆ ನೋಡಿದರೆ, ಪ್ರೀತಿಯ ಅರ್ಥ ಕಿರಿದಾಗುತ್ತದೆ. ಪ್ರೀತಿ ಯಾವಾಗಲೂ ಹಿರಿದಾಗುತ್ತ ಹೋಗಬೇಕೆ ಹೊರತು ಕಿರಿದಾಗುತ್ತ ಹೋಗಬಾರದು. ಪ್ರೀತಿ ವಿಸ್ತರಿದಷ್ಟು ಅದು ಬದುಕನ್ನು ಇನ್ನಷ್ಟು ಆವರಿಸಿಕೊಂಡು ವರ್ಣಮಯವಾಗಿಸುತ್ತದೆ. ಅದೇ ಪ್ರೀತಿ ಬದುಕಿನ ಬೇರೆ ಬೇರೆ ಹಂತದಲ್ಲಿ ಹೇಗೆಲ್ಲ ಅನುಭವಕ್ಕೆ ಬರುತ್ತದೆ ಎಂಬುದನ್ನು ತೆರೆಮೇಲೆ ಹೇಳಿರುವ ಚಿತ್ರ ಹೊಸ ದಿನಚರಿ’ ವಯೋವೃದ್ಧ ದಂಪತಿ, ಯುವ ಜೋಡಿ, ಸಂಗಾತಿಗಾಗಿ ಹುಡುಕಾಡುವ ಕ್ಯಾಬ್ ಡ್ರೈವರ್, ತನ್ನ ಬೇರುಗಳನ್ನು ಹುಡುಕಿಕೊಂಡು ವಿದೇಶದಿಂದ ಬರುವ ಹುಡುಗಿ… ಹೀಗೆ ನಾಲ್ಕು ಬೇರೆ ಬೇರೆ ಹಿನ್ನೆಲೆಯ, ಬೇರೆ ಬೇರೆ ಮನಸ್ಥಿತಿಯ ವ್ಯಕ್ತಿಗಳ ಕಥೆಯನ್ನು ಒಂದಕ್ಕೊಂದು ಬೆಸೆದು ಅದೆಲ್ಲದರ ಸಾರವನ್ನು “ಹೊಸ ದಿನಚರಿ’ಯ ಮೂಲಕ ತೆರೆದಿಡಲಾಗಿದೆ.
ಇಲ್ಲಿ ಮಾಮೂಲಿ ಕಮರ್ಷಿಯಲ್ ಸಿನಿಮಾಗಳಂತೆ, ಆ್ಯಕ್ಷನ್ ಡ್ಯಾನ್ಸ್, ಮಾಸ್ ಡೈಲಾಗ್ಸ್ ಅಬ್ಬರವಿಲ್ಲ. ನಮ್ಮ ನಡುವೆಯೇ ನಡೆಯುವ ವಿಷಯಗಳನ್ನು ಆತುರವಿಲ್ಲದೆ ಸಿನಿಮಾದಲ್ಲಿ ಹೇಳಿರುವುದರಿಂದ, ಅದನ್ನು ಅಷ್ಟೇ ನಿಧಾನವಾಗಿ ಕೇಳುವ ತಾಳ್ಮೆ ಪ್ರೇಕ್ಷಕರಿಗೂ ಇರಬೇಕು. ಅಂಥದ್ದೊಂದು ತಾಳ್ಮೆಯಿದ್ದರೆ, ಖಂಡಿತವಾಗಿಯೂ “ಹೊಸ ದಿನಚರಿ’ಯಲ್ಲಿ ಒಂದಷ್ಟು ಹೊಸ ವಿಷಯಗಳ ಅನಾವರಣವಾಗುತ್ತದೆ.
ಇನ್ನು ಯಾವುದೇ ಸ್ಟಾರ್ ಕಲಾವಿದರಿಲ್ಲದಿದ್ದರೂ, ಸಿನಿಮಾದ ಕೆಲ ಪಾತ್ರಗಳು ಮನಸ್ಸನ್ನು ಮುಟ್ಟುವಂತಿದೆ. ಬಾಬು ಹಿರಣ್ಣಯ್ಯ, ಅರುಣಾ ಬಾಲರಾಜ್, ದೀಪಕ್ ಸುಬ್ರಹ್ಮಣ್ಯ, ಚೇತನ್ ವಿಕ್ಕಿ, ಮಂದಾರ, ಬೇಬಿ ಮನಿನಿ, ವರ್ಷ ಸುಸಾನ ಕುರಿಯನ್ ಹೀಗೆ ಬಹುತೇಕ ಕಲಾವಿದರು ತಮ್ಮ ಪಾತ್ರವನ್ನು ಸರಳವಾಗಿ, ಅಚ್ಚುಕಟ್ಟಾಗಿ ನಿಭಾಯಿಸಿ ಸೈ ಎನಿಸಿಕೊಳ್ಳುತ್ತಾರೆ. ಅತಿಯಾದ ವೈಭವಿಕರಣವಿಲ್ಲ ಕಾರಣ, ಬಹುತೇಕ ಎಲ್ಲ ಪಾತ್ರಗಳಿಗೂ ಸಮಾನ ಪ್ರಾಮುಖ್ಯತೆ ತೆರೆಮೇಲೆ ಸಿಕ್ಕಿದೆ.
ಉಳಿದಂತೆ ಇನ್ನಿತರ ಪಾತ್ರಗಳು, ಕಲಾವಿದರ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ. ತಾಂತ್ರಿಕವಾಗಿ ಚಿತ್ರದ ಗುಣಮಟ್ಟ ತೆರೆಮೇಲೆ ಗಮನ ಸೆಳೆಯುತ್ತದೆ. ಛಾಯಾಗ್ರಹಣ, ಸಂಕಲನ, ಲೈಟಿಂಗ್, ಹಿನ್ನೆಲೆ ಸಂಗೀತ, ಒಂದೆರಡು ಹಾಡುಗಳು ಸಿನಿಮಾದ ಹೈಲೈಟ್ಸ್ ಪಟ್ಟಿಗೆ ಸೇರುತ್ತದೆ.
ಒಟ್ಟಾರೆ ಆಧುನಿಕ ಬದುಕಿನ ದಿನಚರಿಯಲ್ಲಿ ಸೇರಿಕೊಂಡಿರುವ ಜಂಜಾಟಗಳು, ಸಂಬಂಧಗಳನ್ನು, ಹಂಬಲಗಳು ಎಲ್ಲವನ್ನು ಹೊಸದಾಗಿ ಹೇಳಿರುವ ಪ್ರಯತ್ನ ಪ್ರಶಂಸನಾರ್ಹ.
ಜಿ.ಎಸ್.ಕಾರ್ತಿಕ ಸುಧನ್