Advertisement

ಉದ್ಯೋಗ ಖಾತ್ರಿ ಯೋಜನೆ ಮೂಲಕ ತೋಟಗಾರಿಕಾ ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ

01:02 PM Aug 27, 2020 | sudhir |

ಶಿಡ್ಲಘಟ್ಟ: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮೂಲಕ ತೋಟಗಾರಿಕಾ ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ರೈತರು ಸದುಪಯೋಗ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಫೌಝೀಯಾ ತರುನ್ನುಮ್‌ ಸಲಹೆ ನೀಡಿದರು.

Advertisement

ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ನರೇಗಾ ಯೋಜನೆಯಡಿ ಅಭಿವೃದ್ಧಿಗೊಳಿಸಿರುವ ತೋಟಗಾರಿಕೆ ಕ್ಷೇತ್ರಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿಗಾಗಿ ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸ ಲಾಗಿದೆ. ಜೊತೆಗೆ ಈ ಯೋಜನೆಯಡಿ ರೈತರಿಗೆ ಅನುಕೂಲ ಕಲ್ಪಿಸಲು ಬದು ಮತ್ತು ಕೃಷಿ ಹೊಂಡಗಳನ್ನು
ನಿರ್ಮಿಸಿಕೊಳ್ಳಲು ಅಗತ್ಯ ಮಾರ್ಗದರ್ಶನ ಮತ್ತು ಸಹಕಾರ ನೀಡಲಾಗಿದೆ ಎಂದರು.

ವಿಶೇಷ ಆದ್ಯತೆ ನೀಡಿ: ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಸರ್ಕಾರದ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಅಧಿಕಾರಿಗಳು ನರೇಗಾ ಯೋಜನೆಯಿಂದ ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿ ತೋಟಗಾರಿಕೆ ಕ್ಷೇತ್ರಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಬೇಕು ಎಂದು ಹೇಳಿದರು.

ನರೇಗಾ ಯೋಜನೆಯಡಿ 3.5 ಲಕ್ಷ ಮಾನವ ದಿನ ಸೃಜಿಸಲಾಗಿದೆ. ಇದರ ಮೂಲಕ ತೋಟಗಾರಿಕೆ ಕ್ಷೇತ್ರಗಳನ್ನು
ಅಭಿವೃದ್ಧಿಗೊಳಿಸಲು ರೈತರಿಗೆ ಅಗತ್ಯ ತರಬೇತಿ ಮತ್ತು ಮಾರ್ಗದರ್ಶನ ಸಹ ನೀಡಲಾಗುತ್ತದೆ. ಕೋವಿಡ್‌-19 ಸಂಕಷ್ಟದಲ್ಲಿರುವ ರೈತರಿಗೆ ಈ ಯೋಜನೆ ಮೂಲಕ ಅತಿ ಹೆಚ್ಚು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ಜಾಗೃತಿ ಅಭಿಯಾನ ನಡೆಸಲಾಗುತ್ತದೆ ಎಂದು ಹೇಳಿದರು.ಕೇಂದ್ರ ಸರ್ಕಾರದ ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಮತ್ತು ಕೃಷಿ ಸಿಂಚಾಯಿ ಯೋಜನೆಗಳ ಮೂಲಕ ಜಿಲ್ಲೆಯ ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಜಿಲ್ಲೆಯಲ್ಲಿ ತೋಟಗಾರಿಕೆ ಕ್ಷೇತ್ರದಲ್ಲಿ ಸಹ ರೈತರು ಹೆಚ್ಚಿನ ಬೆಳೆಗಳನ್ನು ಬೆಳೆದು, ಆರ್ಥಿಕವಾಗಿ ಸದೃಢರಾಗಲು ಅಗತ್ಯ ಎಲ್ಲಾ
ರೀತಿಯ ನೆರವು ನೀಡಲು ಜಿಲ್ಲಾ ಪಂಚಾಯಿತಿ ಬದ್ಧವಾಗಿದೆ ಎಂದರು. ಚಿಕ್ಕಬಳ್ಳಾಪುರ ತಾಲೂಕಿನ ದೊಡ್ಡಪೈಲಗುರ್ಕಿ ಗ್ರಾಪಂನ ಮಾರ್ಗಾನಹಳ್ಳಿ ಗ್ರಾಮದಲ್ಲಿ ಗೋಡಂಬಿ ತೋಟ, ರೆಡ್ಡಿಹಳ್ಳಿ ಗ್ರಾಮದಲ್ಲಿ ದಾಳಿಂಬೆ ತೋಟವನ್ನು ಪರಿಶೀಲಿಸಿದರು.
ಗುಡಿಬಂಡೆ ತಾಲೂಕಿನ ತಿರುಮಣಿ ಗ್ರಾಮ ಪಂಚಾಯಿತಿಯ ಪೆಮ್ಮನಹಳ್ಳಿ ಗ್ರಾಮದಲ್ಲಿ ಪಪ್ಪಾಯಿ ತೋಟ, ಬೀಚಗಾನಹಳ್ಳಿ ಗ್ರಾಮದಲ್ಲಿ ತೋಟಗಾರಿಕೆ ಮತ್ತು ನರೇಗಾ ಯೋಜನೆ ಮೂಲಕ ನಿರ್ಮಿಸಿರುವ ಈರುಳ್ಳಿ ಶೇಖರಣಾ ಘಟಕ,  ಅದೇ ಗ್ರಾಮದಲ್ಲಿ ನಿರ್ಮಿಸಿರುವ ದನದ ದೊಡ್ಡಿ, ಸೋಮೇನಹಳ್ಳಿ ಗ್ರಾಪಂನ ಸೋಮೇನಹಳ್ಳಿ ಗ್ರಾಮದಲ್ಲಿ ಗುಲಾಬಿ ಗಿಡ ಮತ್ತು ಕ್ಯಾಪ್ಸಿಕಾಂ ತೋಟ ಪರಿಶೀಲಿಸಿದರು. ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕುಮಾರಸ್ವಾಮಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next