Advertisement

ತೋಟಗಾರಿಕೆಗೆ ಕೇಂದ್ರದಿಂದ ಹೆಚ್ಚಿನ ಆದ್ಯತೆ: ಸಚಿವ ನರೇಂದ್ರ ಸಿಂಗ್‌ ತೋಮರ್‌

11:42 PM Feb 22, 2023 | Team Udayavani |

ಬೆಂಗಳೂರು: ಕೇಂದ್ರ ಸರಕಾರ ತೋಟಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಹೇಳಿದ್ದಾರೆ.

Advertisement

ಹೆಸರುಘಟ್ಟದಲ್ಲಿ ಭಾರತೀಯ ತೋಟಗಾರಿಕ ಸಂಶೋಧನ ಸಂಸ್ಥೆ ಹಮ್ಮಿಕೊಂಡಿರುವ ನಾಲ್ಕು ದಿನಗಳ ರಾಷ್ಟ್ರೀಯ ತೋಟಗಾರಿಕ ಮೇಳಕ್ಕೆ ಬುಧವಾರ ಆನ್‌ಲೈನ್‌ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಕೇಂದ್ರ ಸರಕಾರ ತೋಟಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಕಾಳಜಿ ತೋರಿದ್ದು ಈ ಸಾಲಿನ ಬಜೆಟ್‌ನಲ್ಲಿ 1.25 ಲಕ್ಷ ಕೋಟಿ.ರೂ. ಅನುದಾನ ಮೀಸರಿಲಿಸಿದೆ ಎಂದು ತಿಳಿಸಿದರು.

ಕಳೆದ 15 ವರ್ಷಗಳಲ್ಲಿ ದೇಶದಲ್ಲಿ ತೋಟಗಾರಿಕೆ ಬೆಳೆಗಳ ಉತ್ಪಾದನೆ ಶೇ. 38.5ರಷ್ಟು ಹೆಚ್ಚಳವಾಗಿದೆ. ತೋಟಗಾರಿಕಾ ಬೆಳೆಗಳ ಉತ್ಪಾದನೆಯ ತ್ವರಿತ ಹೆಚ್ಚಳವು ದೇಶದ ಪೌಷ್ಟಿಕಾಂಶದ ಭದ್ರತೆಯ ನಡುವಿನ ಅಂತರವನ್ನು ಕಡಿಮೆ ಮಾಡಲಿದೆ. ಜಾಗತಿಕ ಸರಾಸರಿಗೆ ಅನುಗುಣವಾಗಿ 2023-24ರ ಹಣಕಾಸು ವರ್ಷದಲ್ಲಿ ಕೇಂದ್ರ ಬಜೆಟ್‌ನಲ್ಲಿ ಕೃಷಿ ಮತ್ತು ತೋಟಗಾರಿಕಾ ಕ್ಷೇತ್ರದ ಅಭಿವೃದ್ದಿಗೆ ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ಮೀಸಲಿರಿಸಿದೆ ಎಂದು ಹೇಳಿದರು.

ರಾಷ್ಟ್ರೀಯ ತೋಟಗಾರಿಕಾ ಮೇಳ-2023ರ ಕೈಪಿಡಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ದಿಲ್ಲಿಯ ಐಸಿಎಆರ್‌ (ತೋಟಗಾರಿಕಾ ವಿಜ್ಞಾನ )ನ ಉಪಮಹಾ ನಿರ್ದೇಶಕ ಡಾ| ಎ.ಕೆ. ಸಿಂಗ್‌, ಪ್ರಧಾನ ವಿಜ್ಞಾನಿ ಡಾ| ಸಿ. ಅಶ್ವಥ್‌, ಡಾ| ಆರ್‌. ವೆಂಕಟಕುಮಾರ್‌, ಸುಶಾಂತ್‌ ಕುಮಾರ್‌ ಪಾತ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.

ಮಾರುಕಟ್ಟೆ ವಿಸ್ತರಣೆಗೂ ಹಲವು ಯೋಜನೆ
ಐಸಿಆರ್‌ -ಐಐಎಚ್‌ಆರ್‌ ಬೆಂಗಳೂರು ನಿರ್ದೇಶಕ ಡಾ| ಸಂಜಯ್‌ಕುಮಾರ್‌ ಸಿಂಗ್‌ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೃಷಿ ಮತ್ತು ತೋಟಗಾರಿಕಾ ಕ್ಷೇತ್ರದ ಬೆಳಗಳಿಗೆಗೆ ಪ್ರೋತ್ಸಾಹ ನೀಡುತ್ತಿದೆ. ಜತೆಗೆ ಅನ್ನದಾತನ ಆದಾಯ ದುಪ್ಪಟ್ಟು ಮಾಡಲು ಆದ್ಯತೆ ನೀಡಿದೆ. ಮಾರುಕಟ್ಟೆ ವಿಸ್ತರಣೆಗೂ ಹಲವು ಯೋಜನೆಗಳನ್ನು ರೂಪಿಸಿದೆ ಎಂದು ಶ್ಲಾ ಸಿದರು.

Advertisement

ರೈತರ ಆದಾಯ ದ್ವಿಗುಣಕ್ಕೆ ಆದ್ಯತೆ
ಅಪೇಡಾ ಸಂಸ್ಥೆಯ ಜನರಲ್‌ ಮ್ಯಾನೇಜರ್‌ ಆರ್‌. ರವೀಂದ್ರ ಮಾತನಾಡಿ, ಸಿರಿಧಾನ್ಯ ಬೆಳೆಗಳ ಬಳಕೆ ಬಗ್ಗೆ ಜನರಲ್ಲಿ ಅರಿವು ಮಾಡಿಸುವ ಕೆಲಸ ಈಗಾಗಲೇ ಸಾಗಿದೆ. ಸಿರಿಧಾನ್ಯದ ಉಪಯೋಗದ ಕುರಿತು ಜನರಲ್ಲಿ ಮತ್ತಷ್ಟು ತಿಳಿವಳಿಕೆ ನೀಡುವ ಕೆಲಸ ಆಗಬೇಕಾಗಿದೆ. ಆ ನಿಟ್ಟಿನಲ್ಲಿ ಅಪೇಡಾ ಸಂಸ್ಥೆ ಕೂಡ ಕೆಲಸ ಮಾಡುತ್ತಿದೆ. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯೊಂದಿಗೆ ಕೆಲವು ಒಪ್ಪಂದಗಳನ್ನು ಮಾಡಿಕೊಂಡಿದ್ದು ರೈತರ ಆದಾಯದ ದ್ವಿಗುಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next