ಕೊರಟಗೆರೆ: ತೋಟಗಾರಿಕೆ ಕ್ಷೇತ್ರದ ಅಭಿವೃದ್ಧಿಗಾಗಿ 1973-74ರಲ್ಲಿ ಜಿಪಂ ಅನುದಾನದಿಂದ ಸ್ಥಾಪನೆ ಯಾದ ವಡ್ಡಗೆರೆ ತೋಟಗಾರಿಕೆ ಕ್ಷೇತ್ರದಲ್ಲಿನ ಕೊಳವೆ ಬಾವಿಯಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿತದಿಂದ ಎರಡು ಕೊಳವೆ ಬಾವಿ ಬತ್ತಿ ಹೋಗಿವೆ. 45 ವರ್ಷದಿಂದ ಬೆಳೆದು ನಿಂತಿದ್ದ ಹಣ್ಣಿನ ಮರಗಳು ಒಂದೊಂದಾಗಿ ಒಣಗಿ ಹೋಗುತ್ತೀವೆ. ಅಲ್ಲದೆ, ಕಚೇರಿಯ ಕಟ್ಟಡವು ಶಿಥಿಲವಾಗಿ ಕ್ಷೇತ್ರಕ್ಕೆ ರಕ್ಷಣೆ ಮತ್ತು ರಕ್ಷಕರು ಇಲ್ಲದಂತಾಗಿದೆ.
ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ವಡ್ಡಗೆರೆ ಗ್ರಾಮದ ಸರ್ವೇ ನಂ.87ರಲ್ಲಿ 4 ಎಕರೆ 31 ಗುಂಟೆ ವಿಸ್ತೀರ್ಣವಾದ ಪ್ರದೇಶದಲ್ಲಿ ಐದು ಜಾತಿಯ ವಿವಿಧ ರೀತಿಯ ಹಣ್ಣಿನ ಮರಗಳಿವೆ. ಅದರಲ್ಲಿ ಸಪೋಟ- 80, ತೆಂಗು- 80, ಮಾವು- 19 ಮತ್ತು ಹಲಸು- 13 ಸೇರಿ ಒಟ್ಟು 182 ಮರಗಳಿವೆ. ಕಳೆದ 45 ವರ್ಷದ ಸಮೃದ್ಧವಾಗಿ ಬೆಳೆದು ನಿಂತಿದ್ದ ಹಣ್ಣಿನ ಮರ ಗಳಿಗೆ ಕಳೆದ ನಾಲ್ಕು ತಿಂಗಳಿಂದ ನೀರಿನ ಕೊರತೆಯಿಂದ ತೋಟ ಗಾರಿಕೆ ಕ್ಷೇತ್ರದ ಪರಿಸ್ಥಿತಿ ದುಸ್ಥಿತಿಗೆ ತಲುಪಿದೆ. ವಡ್ಡಗೆರೆ ತೋಟ ಗಾರಿಕೆ ಕ್ಷೇತ್ರದ ಹಣ್ಣಿನ ಮರಗಳ ರಕ್ಷಣೆಗಾಗಿ ಕಳೆದ ಹತ್ತಾರು ವರ್ಷದ ಹಿಂದೆ ಮೂರು ಕೊಳವೆ ಬಾವಿ ಕೊರೆಸಲಾಗಿತ್ತು.
ಪಂಪು ಮೋಟಾರ್ ಮಾಯ: ಮೂರು ಕೊಳವೆ ಬಾವಿಯಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿದ್ದು, ನಿರಂತರ ಜ್ಯೋತಿಯು ಸಹ ಮರೀಚಿಕೆಯಾಗಿದೆ. ಕಾವಲುಗಾರನ ಕೊರತೆಯಿಂದ ಮೂರು ಕೊಳವೆ ಬಾವಿಯ ಪಂಪು, ಕೇಬಲ್ ಮತ್ತು ಸ್ಟಾರ್ಟರ್ ಕಾಣೆಯಾಗಿವೆ. ಗಿಡಮರಗಳು ಒಣಗಿರುವ ಪರಿಣಾಮ ಅಕ್ಕಪಕ್ಕದ ರೈತರು ತಮ್ಮ ಜಾನುವಾರು ಗಳಿಗೆ ಮೇವಿಗಾಗಿ ಕ್ಷೇತ್ರದೊಳಗೆ ಬಿಟ್ಟು ಗಿಡಗಳನ್ನು ನಾಶ ಮಾಡುತ್ತಿದ್ದಾರೆ.
ವರ್ಷಕ್ಕೆ 40 ಸಾವಿರ ಮಾತ್ರ ಅನುದಾನ: ತೋಟಗಾರಿಕೆ ಇಲಾಖೆಯಿಂದ ವಡ್ಡಗೆರೆ ಕ್ಷೇತ್ರದ ಅಭಿವೃದ್ಧಿಗೆ ವರ್ಷಕ್ಕೆ ಕೇವಲ 40 ಸಾವಿರ ಅನುದಾನ ಮಾತ್ರ ಬರುತ್ತದೆ. ಇಲಾಖೆ ಅಧಿಕಾರಿಗಳು ಕ್ಷೇತ್ರದ ಉಳುಮೆಗಾಗಿ ಬಳಸುತ್ತಾರೆ. ಉಳಿದಂತೆ ಕ್ಷೇತ್ರದ ಸುತ್ತ ಮುತ್ತಲು ಕಾಂಪೌಂಡ್ ನಿರ್ಮಾಣ, ಭದ್ರತೆ ಮತ್ತು ಅಭಿವೃದ್ಧಿಗಾಗಿ ಸರ್ಕಾರದಿಂದ ಒಂದು ಪೈಸೆಯು ಅನುದಾನ ಬರುವುದಿಲ್ಲ. ಇನ್ನೂ ವಾಸಕ್ಕೆ ಯೋಗ್ಯವಲ್ಲದ ಕಟ್ಟಡದಲ್ಲಿ ಕಾವಲುಗಾರರು ಸಹ ಕಾವಲು ಕಾಯಲು ಹಿಂದೇಟು ಹಾಕು ತ್ತಿದ್ದು, ಕ್ಷೇತ್ರವು ಸಾರ್ವ ಜನಿಕರ ಪಾಲಾಗಿದೆ.
ಕಳೆದ 40 ವರ್ಷದ ಹಿಂದೆ ವಡ್ಡ ಗೆರೆ ಕ್ಷೇತ್ರದಲ್ಲಿ ತೋಟಗಾರಿಕೆ ಸಹಾಯಕ-1, ತೋಟ ಗಾರರು-2 ಸೇರಿ ಪ್ರತಿದಿನ ಐದಾರು ಜನ ಕೂಲಿ ಕಾರ್ಮಿಕರು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಆ ವೇಳೆ ಪ್ರತಿವರ್ಷ 10 ಸಾವಿರಕ್ಕೂ ಹೆಚ್ಚು ರೂ.ಗಳಿಗೆ ಕ್ಷೇತ್ರದಲ್ಲಿನ ಹಣ್ಣುಗಳಿಗೆ ಹರಾಜು ಪ್ರಕ್ರಿಯೆ ನಡೆಯುತ್ತಿತ್ತು. ಆದರೆ, ಈಗ ಕ್ಷೇತ್ರದಲ್ಲಿ ಮೂಲಸೌಕರ್ಯ ಇಲ್ಲದ ಪರಿಣಾಮ ಗಿಡಮರಗಳು ಒಣಗಿ ಹೋಗಿದೆ. ಕ್ಷೇತ್ರವು ಮುಚ್ಚುವಂತಹ ದುಸ್ಥಿತಿಗೆ ತಲುಪಿದ್ದು, ಜಿಲ್ಲಾ ಡಳಿತ ತಕ್ಷಣ ವಿಶೇಷ ಅನುದಾನ ಬಳಸಿಕೊಂಡು ವಡ್ಡ ಗೆರೆ ಕ್ಷೇತ್ರವನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಾಗಿದೆ.
ಉದ್ಯೋಗಖಾತ್ರಿ ಯೋಜನೆ ಕಾಮಗಾರಿ: ವಡ್ಡಗೆರೆ ಗ್ರಾಪಂಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ತೋಟಗಾರಿಕೆ ಕ್ಷೇತ್ರದಲ್ಲಿ 68 ಸಾವಿರ ವೆಚ್ಚದಲ್ಲಿ ಕೊಳವೆ ಬಾವಿ ಮರುಪುನಃ ನಿರ್ಮಾಣ ಘಟಕದ ಕಾಮಗಾರಿ ನಡೆದಿದೆ. ಉಳಿದಂತೆ ಬದು ನಿರ್ಮಾಣ, ಕಟ್ಟೆ ಅಭಿವೃದ್ಧಿ ಸೇರಿದಂತೆ ಅಂತರ್ಜಲ ಅಭಿವೃದ್ಧಿಗೆ ಬೇಕಾದ ಕಾಮಗಾರಿಯನ್ನು ಮಾಡಬಹುದಾಗಿದೆ. ಅಧಿಕಾರಿ ವರ್ಗ ಉದ್ಯೋಗ ಖಾತ್ರಿ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ.
● ಎನ್.ಪದ್ಮನಾಭ್