ಕಡೂರು: ಸಂಕಷ್ಟದಲ್ಲಿರುವ ತೋಟಗಾರಿಕಾ ಬೆಳೆಗಾರರ ಜತೆ ತೋಟಗಾರಿಕಾ ವಿಶ್ವ ವಿದ್ಯಾಲಯ ಸದಾ ಇರುತ್ತದೆ ಎಂದು ಬಾಗಲಕೋಟೆ ತೋಟಗಾರಿಕಾ ವಿವಿ ಉಪಕುಲಪತಿ ಡಾ| ಕೆ.ಎಂ. ಇಂದ್ರೇಶ್ ತಿಳಿಸಿದರು.
ತಾಲೂಕಿನ ಚಟ್ನಳ್ಳಿ ಸಮೀಪದ ಜೋಡಿಲಿಂಗದಹಳ್ಳಿ ರಸ್ತೆಯಲ್ಲಿರುವ ರೈತ ಮಹಾಲಿಂಗಪ್ಪ ಕಾಂತಣ್ಣನವರ ದಾಳಿಂಬೆ ಹೊಲದಲ್ಲಿ ಸೋಮವಾರ ಆಯೋಜಿಸಿದ್ದ ರೈತರೊಂದಿಗಿನ ಕೃಷಿ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಡಕೆ, ಕಾಫಿ, ತೆಂಗು, ಹಣ್ಣಿನ ಬೆಳೆಗಳಾದ ದಾಳಿಂಬೆ ಮತ್ತು ಇತರೆ ತರಕಾರಿ ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಇಂದಿನ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಬೆಳೆಗಾರರ ಬಳಿ ಬಂದು ತಾಂತ್ರಿಕ ನೆರವು ನೀಡಿ ಅವುಗಳನ್ನು ಬೆಳೆಯುವ ವಿಧಾನಗಳನ್ನು ತಿಳಿಸಬೇಕಾಗಿದೆ. ರೋಗ ತಡೆಗಟ್ಟುವ ಬಗ್ಗೆ ಕ್ರಿಮಿನಾಶಕ ಬಳಕೆ ಬಗ್ಗೆ ನಿಖರ ತಿಳಿವಳಿಕೆ ನೀಡಿ, ಬೆಳೆಗಾರರ ನಷ್ಟ ತಪ್ಪಿಸಲು ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾನಿಲಯ ಸದಾ ನಿಮ್ಮೊಂದಿಗೆ ಇದೆ ಎಂದು ತಿಳಿಸಿದರು.
ನಮ್ಮ ವಿವಿಯಲ್ಲಿ ಕೆಲವು ಸತ್ವಪೂರ್ಣ ಕೀಟನಾಶಕಗಳು, ರೋಗ ನಿರೋಧಕ ಔಷಧಗಳ ಸಂಶೋಧನೆ ಮಾಡಿದ್ದು, ಅವುಗಳ ಬಳಕೆಯಿಂದ ರೈತರಿಗೆ ಲಾಭವಾಗುವ ಮಾಹಿತಿ ಲಭ್ಯವಿದೆ. ದಾಳಿಂಬೆಗೆ ಬರುವ ಮಾರಕ ರೋಗಗಳ ಹತೋಟಿ ನಿಟ್ಟಿನಲ್ಲಿ ನಮ್ಮ ಸಂಶೋಧನೆ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.
ಕೃಷಿಕ, ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿ, ದೇಶದ ಬೆನ್ನೆಲುಬಾಗಿರುವ ರೈತ ಸಮೂಹಕ್ಕೆ ಆತಂಕ ತರುವಂತಹ ರೋಗರುಜಿನಗಳ ಬಾಧೆ ಮತ್ತು ಕೀಟಗಳ ಹಾವಳಿ ಬಹು ದೊಡ್ಡ ಸಮಸ್ಯೆಯಾಗಿದೆ. ಕೃಷಿಗೆ ಹಾಕಿದ ಬಂಡವಾಳ ಬಾರದ ಸ್ಥಿತಿಯಲ್ಲಿ ನೋವು ಅನುಭವಿಸುತ್ತಿರುವ ರೈತನಿಗೆ ಪದೇ ಪದೆ ಕಾಡುವ ಬರಗಾಲ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಜರ್ಜರಿತರಾಗಿವ ಕೃಷಿ ಸಮೂಹಕ್ಕೆ ತೋಟಗಾರಿಕೆ ಇಲಾಖೆ, ತೋಟಗಾರಿಕಾ ವಿವಿ ಜನಪ್ರತಿನಿಧಿಗಳು ಒಟ್ಟಾರೆ ಆಡಳಿತ ಸ್ಪಂದಿಸಿದಲ್ಲಿ ಮಾತ್ರ ರೈತ ಬದುಕಲು ಸಾಧ್ಯ. ಇಂದು ನಡೆಯುತ್ತಿರುವ ತೋಟಗಾರಿಕಾ ಬೆಳೆಗಳ ಸಂವಾದ ಕೃಷಿಕರ ಬಾಳಿಗೆ ಭರವಸೆ ಮೂಡಿಸಲಿ ಎಂದು ಆಶಿಸುತ್ತೇನೆ ಎಂದರು.
ಸಂವಾದದಲ್ಲಿ ಭಾಗವಹಿಸಿದ್ದ ದಾಳಿಂಬೆ ಬೆಳೆಗಾರರಾದ ಶ್ರೀರಾಂಪುರದ ಕುಮಾರ್, ಮಾಹಲಿಂಗಪ್ಪರ ಕಾಂತರಾಜ್, ಜಗದೀಶ್, ಶೆಟ್ಟಿಹಳ್ಳಿ ರಾಮಜ್ಜ, ಬೆಲಗೂರು ಅಶೋಕ್,ನಾಗೇನಹಳ್ಳಿ ಮಹಾದೇವ ಮುಂತಾದ ಪ್ರಗತಿಪರ ದಾಳಿಂಬೆ ಬೆಳೆಗಾರರು ಮಾತನಾಡಿ, ರೋಗ ಹತೋಟಿ ಬಗ್ಗೆ ಈಗಿನ ಕ್ರಿಮಿನಾಶಕಗಳು ವಿಫಲವಾಗಿವೆ. ಇದಕ್ಕೆ ಕಲಬೆರಕೆ ಔಷಧಗಳ ಮಾರಾಟಗಾರರು ಕಾರಣವೇ ಎಂದು ಪ್ರಶ್ನಿಸಿ ದರು. ಇದಕ್ಕೆ ಉತ್ತರಿಸಿದ ತೋಟಗಾರಿಕೆ ವಿವಿ ಸಸ್ಯರೋಗ ತಜ್ಞರಾದ ಡಾ.ಜಿ.ಮಂಜುನಾಥ್, ಕೀಟರೋಗ ತಜ್ಞ ಡಾ.ರಾಮನಗೌಡ ಅವರು, ರೈತರ ಅನುಮಾನಕ್ಕೆ ಸಹಮತ ವ್ಯಕ್ತಪಡಿಸಿದರು. ನಮ್ಮ ವಿವಿ ತಾಂತ್ರಿಕ ಪರೀಕ್ಷೆಗೆ ಮಾತ್ರ ಒಳ ಪಟ್ಟಿದ್ದು, ಕಲಬೆರಕೆ ಮಾರಾಟ ನಿಷೇಧಿಸುವ ಹೊಣೆ ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳಿಗೆ ಸಂಬಂಧಿಸಿದೆ ಎಂದು ಹೇಳಿದರು.
ಸಭೆಗೆ ಆಹ್ವಾನ ನೀಡಿದ್ದರೂ ಬಾರದಕೃಷಿ ಮತ್ತು ತೋಟಗಾರಿಕಾ ಅಧಿಕಾರಿಗಳ ವಿರುದ್ಧ ರೈತರು ಅಸಮಧಾನ ವ್ಯಕ್ತಪಡಿಸಿ ದರು. ಇಲಾಖಾ ಅಧಿಕಾರಿಗಳಿಂದ ಯಾವುದೇತಾಂತ್ರಿಕ ಸಲಹೆ-ಸಹಕಾರ ತೋಟಗಾರಿಕಾ ಬೆಳೆಗಾರರಿಗೆ ದೊರೆಯುತ್ತಿಲ್ಲ ಎಂದು ಆಕ್ಷೇಪಿಸಿ ದರು. ತೋಟಗಾರಿಕಾ ವಿವಿಯ ಡಾ.ವೈ.ಕೆ.ಕೋಟಿಕಲ್, ಡಾ.ವಿಷ್ಣುವರ್ಧನ್, ದಾಳಿಂಬೆಸಂಶೋಧನಾ ಕೇಂದ್ರದ ಡಾ.ಆಶಿಶ್ ಮೈತ್ರಿ, ಡಾ.ಶ್ವೇತಾ ಬಿ.ಎಸ್, ಜಿಪಂ ಸದಸ್ಯ ವಿಜಯಕುಮಾರ್, ನೂರಾರು ರೈತರು ಭಾಗವಹಿಸಿದ್ದರು.