Advertisement

Horticultural crop: ತೋಟಗಾರಿಕಾ ಬೆಳೆಗಳಿಗೆ ತೇವಾಂಶದ ಭೀತಿ!

01:44 PM Sep 28, 2023 | Team Udayavani |

ಕೋಲಾರ: ವರ್ಷಾರಂಭದಿಂದಲೂ ತುಂತುರು ಮಳೆ ಹನಿಗಳನ್ನೇ ನೋಡಿದ್ದ ಜಿಲ್ಲೆಯ ರೈತಾಪಿ ವರ್ಗ ಕಳೆದ ಏಳು ದಿನಗಳಲ್ಲಿ ಸುರಿದಿರುವ ಮಳೆಯಿಂದ ಸಂತೋಷಗೊಂಡಿದೆಯಾದರೂ, ಆಗಸ್ಟ್‌ ತಿಂಗಳ ಸರಾಸರಿ ಮಳೆಯಲ್ಲಿ ಕೊರತೆ ಮುಂದುವರಿದಿದೆ.

Advertisement

ಸಂಪೂರ್ಣ ಮಳೆಯಾಧಾರಿತವಾಗಿಯೇ ಕೃಷಿ ತೋಟಗಾರಿಕೆ ಚಟುವಟಿಕೆ ನಡೆಸುತ್ತಿರುವ ಜಿಲ್ಲೆಯಲ್ಲಿ ಮಳೆ ಕೊರತೆ ಆಧಾರದ ಮೇಲೆಯೇ ಇಡೀ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ಆಗಸ್ಟ್‌ ಮಾಸಾಂತ್ಯದಲ್ಲಿ ಬರಪೀಡಿತ ಪ್ರದೇಶ ಘೋಷಣೆ ಪ್ರಕಟಗೊಂಡ ನಂತರ ಸೆಪ್ಟೆಂಬರ್‌ 2ನೇ ವಾರದಲ್ಲಿ ಸುರಿದಿರುವ ಮಳೆಯ ಪ್ರಮಾಣವು ತೀರಾ ಒಣಗುತ್ತಿದ್ದ ಕೃಷಿ ತೋಟಗಾರಿಕೆ ಬೆಳೆಗಳಿಗೆ ಕೊಂಚ ಜೀವ ಬರುವಂತೆ ಮಾಡಿದೆ.

ಆಗಸ್ಟ್‌ನಲ್ಲಿ ಶೇ.76ರಷ್ಟು ಕೊರತೆ: ಜಿಲ್ಲೆ ಯಲ್ಲಿ ಆಗಸ್ಟ್‌ ತಿಂಗಳಿನಲ್ಲಿ 94 ಮಿ.ಮೀ. ಮಳೆ ಸುರಿಯಬೇಕಾಗಿತ್ತು. ಆದರೆ, ಕೇವಲ 23 ಮಿ.ಮೀ. ಮಳೆ ಮಾತ್ರವೇ ಸುರಿದಿದ್ದು, ಇನ್ನೂ ಶೇ.76ರಷ್ಟು ಮಳೆ ಕೊರತೆಯಾಗಿದೆ. ಮಳೆ ಕೊರತೆ ಜಿಲ್ಲೆಯ ಆರು ತಾಲೂಕುಗಳಲ್ಲಿ ದಾಖಲಾಗಿರುವುದು ವಿಶೇಷ. ಬಂಗಾರಪೇಟೆಯಲ್ಲಿ ಶೇ.68, ಕೋಲಾರದಲ್ಲಿ ಶೇ.90, ಮಾಲೂರಿನಲ್ಲಿ ಶೇ.77, ಮುಳಬಾಗಿಲಿನಲ್ಲಿ ಶೇ.76, ಶ್ರೀನಿವಾಸಪುರದಲ್ಲಿ ಶೇ.70 ಮತ್ತು ಕೆಜಿಎಫ್‌ನಲ್ಲಿ ಶೇ.77 ಮಳೆ ಕೊರತೆ ಕಂಡು ಬಂದಿದೆ. ಆಗಸ್ಟ್‌ ತಿಂಗಳಿನಲ್ಲಿ ಬಂಗಾರಪೇಟೆಯಲ್ಲಿ 22.7 ಮಿ.ಮೀ., ಕೋಲಾರದಲ್ಲಿ 10.7 ಮಿ.ಮೀ., ಮಾಲೂರಿನಲ್ಲಿ 23.8 ಮಿಮೀ., ಮುಳಬಾಗಿಲಿನಲ್ಲಿ 26.6 ಮಿ. ಮೀ., ಶ್ರೀನಿವಾಸಪುರದಲ್ಲಿ 27.2 ಮಿ.ಮೀ., ಮತ್ತು ಕೆಜಿಎಫ್‌ನಲ್ಲಿ 23.4 ಮಿ.ಮೀ. ಮಳೆ ಸುರಿದಿದೆ. ಜಿಲ್ಲೆಯಲ್ಲಿ ಬರಪೀಡಿತ ವಾತಾವರಣ: ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗುವ ಮುಂಗಾರು ಮಳೆಯ ಅವಧಿ ಶುರುವಾದ ಜೂ.1ರಿಂದ ಈವರೆಗೂ 377 ಮಿ.ಮೀ. ಮಳೆ ಸುರಿ ಯಬೇಕಾಗಿತ್ತು, ಆದರೆ, 350 ಮಿ.ಮೀ. ಮಳೆ ಸುರಿದಿದ್ದು, ಶೇ.7ರಷ್ಟು ಕೊರತೆ ಕಂಡು ಬಂದಿದೆ.

ಆದರೆ, 2023 ಜನವರಿ 1ರಿಂದ ಇಡೀ ಜಿಲ್ಲೆಯಲ್ಲಿ ಸರಾಸರಿ 494 ಮಿ.ಮೀ. ಮಳೆ ಸುರಿಯಬೇಕಾಗಿತ್ತು, 564 ಮಿ.ಮೀ. ಮಳೆ ಸುರಿದು ಶೇ.14ರಷ್ಟು ಹೆಚ್ಚು ಮಳೆ ದಾಖಲಾಗಿದೆ. ಕೃಷಿಚಟುವಟಿಕೆಗಳಿಗೆ ಈ ಮಳೆ ಪೂರಕವಾಗಿ ಸುರಿಯದೆ ಅಕಾಲಿಕವಾಗಿ ಸುರಿದಿ ರುವುದರಿಂದ ಕೋಲಾರ ಜಿಲ್ಲೆಯಲ್ಲಿ ಬರಪೀಡಿತ ವಾತಾವರಣವಿದೆ.

ಬೆಳೆ ಪೋಷಕಾಂಶ, ರೋಗ ನಿರ್ವಹಣೆಗೆ ಕ್ರಮ: ತೋಟಗಾರಿಕಾ ಬೆಳೆಗಳಲ್ಲಿ ಪೋಷಕಾಂಶ ಮತ್ತು ರೋಗಗಳ ನಿರ್ವಹಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕೃಷಿ ಹವಾಮಾನ ಘಟಕವು ಕೆಲವು ಸಲಹೆ ನೀಡಿದೆ.

Advertisement

ಮಳೆ ಬಿಡುವು ಕೊಟ್ಟಾಗ ಅಥವಾ ನಿಂತ ನಂತರ ತರಕಾರಿ ಬೆಳೆಗಳು ಮೊದಲ ಬೆಳವಣಿಗೆ ಹಂತದಲ್ಲಿದ್ದರೆ, 19:19:19 ರಸಗೊಬ್ಬರವನ್ನು ಪ್ರತಿ ಲೀಟರ್‌ ನೀರಿಗೆ 2-5 ಗ್ರಾಂ.ನಂತೆ ಬೆರೆಸಿ ಸಿಂಪಡಿಸಬೇಕು ಅಥವಾ ನ್ಯಾನೋ ಯೂರಿಯಾ 4 ಮಿ.ಲೀ ಪ್ರತಿ ಲೀಟರ್‌ ನೀರಿಗೆ ಬೆರೆಸಿ ಸಿಂಪಡಿಸಿ.

ತರಕಾರಿ ಬೆಳೆ ಹೂವು ಬಿಡುವ ಹಂತದ ಬೆಳೆಯಾದರೆ, ಕ್ಯಾಲ್ಸಿಯಂ ನೈಟ್ರೈಟ್‌ ಅನ್ನು 5 ಗ್ರಾಂ. ಪ್ರತಿ ಲೀಟರ್‌ ನೀರಿಗೆ ಮತ್ತು ಬೋರಿಕ್‌ ಆಮ್ಲ 2 ಗ್ರಾಂ. ಪ್ರತಿ ಲೀಟರ್‌ ನೀರಿಗೆ ಬೇರಿಸಿ ಸಿಂಪಡಣೆ ಮಾಬೇಕು. ಇದರಿಂದ ಕಾಯಿ ಕಚ್ಚುವ ಪ್ರಮಾಣ ಹೆಚ್ಚಾಗುತ್ತದೆ.

ಬಹುವಾರ್ಷಿಕ ಬೆಳೆಗಳಲ್ಲಿ ಕೊಟ್ಟಿಗೆ ಗೊಬ್ಬರ ಉಪಯೋಗಿಸುವಾಗ, ಗೊಣ್ಣೆ ಹುಳು ಕಂಡುಬಂದಲ್ಲಿ ತಕ್ಷಣಕ್ಕೆ ಗೊಬ್ಬರವನ್ನು ಉಪಯೊಗಿಸದೆ ನೇರಳಲ್ಲಿ ಒಣಗಿಸಿ ಉಪಯೋಗಿಸಬೇಕು. ಇಲ್ಲದ ಪಕ್ಷದಲ್ಲಿ ಗೊಣ್ಣೆ ಹುಳು ಗಿಡದ ಬೇರನ್ನು ಬಾಧಿಸುತ್ತದೆ.

ಟೊಮೆಟೋ ಮತ್ತು ಬಳ್ಳಿ ತರಕಾರಿ ಎತ್ತಿ ಕಟ್ಟುವಾಗ ಗಿಡಗಳ ಮಧ್ಯ ಸಾಕಷ್ಟು ಗಾಳಿ ಮತ್ತು ಬೆಳಕು ಆಡುವಂತೆ ಇರಬೇಕು. ಕಳೆನಾಶಕ ಸಿಂಪರಣೆ ಮಾಡುವಾಗ, ಹೆಚ್ಚಿನ ಮುತುವರ್ಜಿ ತೆಗೆದುಕೊಳ್ಳಬೇಕು. ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿರುವದರಿಂದ ಬೆಳೆಗಳನ್ನು ಬಾಧಿಸಬಹುದು ಎಂದು ಸಲಹೆ ನೀಡಿದೆ.

ಯಾವುದೇ ತರಕಾರಿ ಬೆಳೆಯಾದರು, ಲಘು ಪೋಷಕಾಂಶಗಳ ಮಿಶ್ರಣವನ್ನು 2-3 ಬಾರಿ ಸಿಂಪರಣೆ ಮಾಡಿದಾಗ ಮಾತ್ರ ಗಿಡದ ಬೆಳವಣಿಗೆಯನ್ನು ಸುಧಾರಿ ಸಲು ಸಾಧ್ಯ. ಹ್ಯೂಮಿಕ್‌ ಆಮ್ಲವನ್ನು ಪ್ರತಿ ಲೀ. ನೀರಿಗೆ 2 ಮಿ.ಲೀ. ಬೆರೆಸಿ ಸಿಂಪ ಡಿಸುವದರಿಂದ ತೇವಾಂಶದಲ್ಲೂ ಬೇರಿನ ಚಟುವಟಿಕೆಗೆ ಸಹಾಯವಾಗುತ್ತದೆ.

ಹೂವಿನ ಬೆಳೆಗಳಲ್ಲಿ ಗಿಡದ ಆಯ್ದ ರಂಬೆಗಳು ಸಂಪೂರ್ಣವಾಗಿ ಕೊಳೆತ್ತಿದ್ದರೆ, ರೆಂಬೆಗಳನ್ನು ಗಿಡಕ್ಕೆ ಹಾನಿಯಾಗದಂತೆ ಕತ್ತರಿಸಿ ತೆಗೆಯಬೇಕು. ಮಳೆಯಿಂದ ಅತಿಯಾಗಿ ಬಾಧಿತ ಹೂಗಳನ್ನು ಚಿವುಟುವುದರಿಂದ, ತದನಂತರದ ಹಂತದಲ್ಲಿ ಬರುವ ಶಿಲೀಂದ್ರ ರೋಗಗಳ ಪ್ರಮಾಣ ಕಡಿಮೆಯಾಗುತ್ತದೆ.

ವಾರದಲ್ಲಿ ಉತ್ತಮ ಮಳೆ ದಾಖಲು: ಕೋಲಾರ ಜಿಲ್ಲಾದ್ಯಂತ ಕಳೆದ ಏಳು ದಿನಗಳಲ್ಲಿ 44 ಮಿ.ಮೀ. ಮಳೆ ಸುರಿಯಬೇಕಾಗಿತ್ತು ಆದರೆ, 81 ಮಿ.ಮೀ. ಮಳೆ ಸುರಿಯುವ ಮೂಲಕ ಸರಾಸರಿಗಿಂತಲೂ ಹೆಚ್ಚಿನ ಮಳೆ ದಾಖಲಾಗಿದೆ. ಬಂಗಾರಪೇಟೆಯಲ್ಲಿ 45.3 ಮಿ.ಮೀ., ಕೋಲಾರದಲ್ಲಿ 96.5ಮಿ.ಮೀ., ಮಾಲೂರಿನಲ್ಲಿ 71.2 ಮಿ.ಮೀ., ಮುಳಬಾಗಿಲಿ ನಲ್ಲಿ 98.2 ಮಿ.ಮೀ., ಶ್ರೀನಿವಾಸಪುರದಲ್ಲಿ 79.7 ಮಿ.ಮೀ. ಕೆಜಿಎಫ್‌ನಲ್ಲಿ 64.6 ಮಿ.ಮೀ. ಮಳೆ ಸುರಿದಿರುವುದು ರೈತರು ಮತ್ತು ಜಿಲ್ಲೆಯ ಜನರ ಸಂತಸಕ್ಕೆ ಕಾರಣವಾಗಿದೆ.

ತೋಟದಲ್ಲಿ ನೀರು ನಿಂತಿದ್ದರೆ ಹೊರ ಹಾಕಬೇಕು. ತೇವಾಂಶ ಕಡಿಮೆ ಮಾಡಬೇಕು. ಒಣಗುವ ತನಕ ನೀರಾವರಿ ಅಥವಾ ರಸಾವರಿ ಮೂಲಕ ಗೊಬ್ಬರ ಕೊಡ ಬಾರದು. ಪೋಷಕಾಂಶಗಳ ಸಿಂಪರಣೆ ಮಾಡು ವುದರಿಂದ ಮಳೆಯಿಂದ ಪೋಷಕಾಂಶಗಳ ಕೊರತೆ ನೀಗಿಸುವುದರ ಜತೆಗೆ ಇಳುವರಿ ಕುಂಠಿತ ತಡೆಯಲು ಸಾಧ್ಯವಾಗುತ್ತದೆ. -ಜಿ.ಆರ್‌. ಸ್ವಾತಿ, ಕೃಷಿ ಹವಾಮಾನ ತಜ್ಞರು, ಜಿಲ್ಲಾ ಕೃಷಿ ಹವಾಮಾನ ಘಟಕ, ಕೋಲಾರ.

-ಕೆ.ಎಸ್‌.ಗಣೇಶ್‌

 

Advertisement

Udayavani is now on Telegram. Click here to join our channel and stay updated with the latest news.

Next