ಲವ್ ಮಾಕ್ಟೇಲ್ ಚಿತ್ರದ ಮೂಲಕ ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಂಡಿದ್ದ, ಮಿಲನಾ ನಾಗರಾಜ್ ಹಾಗೂ ಅಮೃತಾ ಅಯ್ಯಂಗಾರ್ ಮತ್ತೆ ಒಂದಾಗಿ ಬೆಳ್ಳಿ ತೆರೆಗೆ ಬರಲು ಸಜ್ಜಾಗಿದ್ದಾರೆ. ವಿಭಿನ್ನ ಶೀರ್ಷಿಕೆಯ “ಓ’ ಚಿತ್ರದ ಮೂಲಕ ಪ್ರೇಕ್ಷಕರನ್ನು ಬೆಚ್ಚಿಬಿಳಿಸಲು ಹಾರರ್ ಲುಕ್‌ನೊಂದಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
“ಏಕಾಕ್ಷರ ಫಿಲಂಸ್’ ಬ್ಯಾನರ್ ಅಡಿಯಲ್ಲಿ ಕಿರಣ್ ತಲಕಾಡು ಗೂಳಯ್ಯ ನಿರ್ಮಾಣ, ಮಹೇಶ್ ಸಿ ಅಮ್ಮಳ್ಳಿದೊಡ್ಡಿ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹಾರರ್, ಥ್ರಿಲ್ಲರ್ ಚಿತ್ರ “ಓ’ ಇದೇ ಶುಕ್ರವಾರ (ನ.11) ದಂದು ತೆರೆಕಾಣಲಿದೆ.
ನಿರ್ದೇಶಕ ಮಹೇಶ್ ಮಾತನಾಡಿ, “ಇದುವರೆಗೆ ಕನ್ನಡ ಚಿತ್ರರಂಗದಲ್ಲಿ ಬಂದಿರುವ ಹಾರರ್, ಸಸ್ಪೆನ್ಸ್ – ಥ್ರಿಲ್ಲರ್ ಚಿತ್ರಗಳಲ್ಲಿ ಯಾವ ರೀತಿಯ ದೃಶ್ಯಗಳು, ಸನ್ನಿವೇಶಗಳು ಇದ್ದವೋ ಅವುಗಳನ್ನು ಬಿಟ್ಟು, ಭಿನ್ನರೀತಿಯಲ್ಲಿ ಪ್ರೇಕ್ಷಕರಿಗೆ ಕೊಡುವ ಪ್ರಯತ್ನ ನಮ್ಮದಾಗಿತ್ತು. ಅದೇ ರೀತಿ ಸಾಮಾನ್ಯ ಅನ್ನುವುದ ಕ್ಕಿಂತ ಭಿನ್ನವಾಗಿ ನಮ್ಮ ಚಿತ್ರ ಮೂಡಿಬಂದಿದೆ. ಚಿತ್ರದ ಮೊದಲ 20 ನಿಮಿಷಗಳು ಬಿಟ್ಟು, ಉಳಿದ ಸಂಪೂರ್ಣ ಸಮಯ ಹಾರರ್ ಅಂಶಗಳನ್ನು ಹೊಂದಿದೆ. “ಸತ್ಯ ಪಿಕ್ಚರ್ ‘ ಮೂಲಕ ನಮ್ಮ ಚಿತ್ರ ಹಂಚಿಕೆಯಾಗಲಿದ್ದು, ಇದೇ ಶುಕ್ರವಾರ ಚಿತ್ರ ಬಿಡುಗಡೆಯಾಗಲಿದೆ’ ಎಂದು ಮಾಹಿತಿ ಹಂಚಿಕೊಂಡರು.
ನಟಿ ಮಿಲನಾ ನಾಗರಾಜ್ ಮಾತನಾಡಿ, “ಓ’ ಒಂದು ಹಾರರ್ ಜಾನರ್‌ನ ಚಿತ್ರ. ಇಂತಹ ಚಿತ್ರಗಳಿಗೆ ಅಂತಲೇ ಕೆಲವೊಂದಿಷ್ಟು ಪ್ರೇಕ್ಷಕ ವರ್ಗವಿ ರುತ್ತದೆ. ಅಂಥವರಿಗೇ ಹೇಳಿ ಮಾಡಿಸಿದ ಚಿತ್ರ ಇದು. ಹಾರರ್ ಅಂದ ಮೇಲೆ ಹೆದರಿಕೆ, ಥ್ರಿಲ್ಲರ್ ಅಂಶವನ್ನು ಜನ ಬಯಸುತ್ತಾರೆ. ಜನರನ್ನು ಹೆದರಿಸುವ ಪ್ರಯತ್ನ ಮಾಡಿದ್ದೇವೆ. ಒಂದು ಅಕ್ಕ -ತಂಗಿಯ ಜೀವನದಲ್ಲಿ ಆಗುವ ಕಥೆ ಇಲ್ಲಿದೆ. ನಾನು ಅಮೃತಾ ಅಕ್ಕ-ತಂಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇವೆ. ಪರ್ಸನಲ್ ಆಗಿ ಹಾರರ್ ಕಥೆಗಳು ಅಂದರೆ ನನಗೆ ಇಷ್ಟ. ಹಾಗಾಗಿ ಮೊದಲ ಬಾರಿ ಈ ಜಾನರ್ ಟ್ರೈ ಮಾಡಿದ್ದೀನಿ’ ಎಂದರು.
ನಟಿ ಅಮೃತಾ ಅಯ್ಯಂಗಾರ್ ಮಾತನಾಡಿ, “ನಾನು, ಮಿಲನಾ ಅವರು ಇಲ್ಲಿವರೆಗೆ ಲವ್, ಫ್ಯಾಮಿಲಿ ಚಿತ್ರಗಳನ್ನೇ ಮಾಡಿದ್ದೆವು. ಇಬ್ಬರಿಗೂ ಇದು ಮೊದಲ ಅನುಭವ. ಹಾರರ್ ಚಿತ್ರ ಮಾಡುವುದು ಸುಲಭವಲ್ಲ. ಅದಕ್ಕೆ ತುಂಬಾ ಎನರ್ಜಿ ಬೇಕು, ಡಬ್ಬಿಂಗ್ ಮಾಡುವಾಗ ಜೋರಾಗಿ ಕೂಗುವ ಸನ್ನಿವೇಶಗಳನ್ನು ಮಾಡಿ ಸುಸ್ತಾಗಿ ಬಿಡುತ್ತಿದ್ದೆವು. ಈ ಹಿಂದೆ ಬಂದ ಕನಕಾಂಬರಿ, ನೀಲಾಂಬರಿ ಚಿತ್ರಗಳು ಹೇಗೆ ಭಿನ್ನವಾಗಿತ್ತೋ, ಅದೇ ರೀತಿ ರೆಗ್ಯುಲರ್ ಹಾರರ್ ಚಿತ್ರಗಳಿಗಿಂತ ನಮ್ಮ ಚಿತ್ರ ಭಿನ್ನವಾಗಿ ಮೂಡಿಬಂದಿದೆ’ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಚಿತ್ರ ನಿರ್ಮಾಪಕ ಕಿರಣ್ ಮಾತನಾಡಿ, “ಮಾಟ ಮಂತ್ರಗಳ ಕುರಿತು ಹಲವು ಚಿತ್ರಗಳು ಬಂದಿವೆ. ಆದರೆ ಈ ಚಿತ್ರ ಇಂದಿನ ಟ್ರೆಂಡ್‌ಗೆ ಬೇಕಾದ ಸೈಕಲಾಜಿಕಲ್, ಥ್ರಿಲ್ಲರ್, ಸಸ್ಪೆನ್ಸ್ ಅನ್ನು ಹೊಂದಿದ್ದು, ನಾನ್ ಲಿನೀಯರ್‌ಯಲ್ಲಿ ಸಾಗಲಿದೆ. ಆದ್ದರಿಂದ ಎಲ್ಲಕ್ಕಿಂತ ಭಿನ್ನವಾಗಿ ಕಾಣಿಸಿಕೊಳ್ಳಲಿದೆ’ ಎಂದರು. ನಿರ್ಮಾಪಕ ಕಿರಣ್ ತಲಕಾಡು ಚಿತ್ರ ನಿರ್ಮಾಣದ ಜೊತೆಗೆ ಕಥೆಯನ್ನು ಬರೆದಿದ್ದು, ಚಿತ್ರ ಕಥೆ, ಸಂಭಾಷಣೆ, ನಿರ್ದೇಶನ ಮಹೇಶ್, ದಿಲಿಪ್ ಛಾಯಾಗ್ರಹಣ, ಕಿರಣ್ ರವೀಂದ್ರನಾಥ್ ಸಂಗೀತ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ.