ವೇಮಗಲ್ ಜಗನ್ನಾಥ್ ರಾವ್ ಸದ್ದಿಲ್ಲದೇ ಒಂದು ಸಿನಿಮಾ ಮಾಡಿ, ಮುಗಿಸಿದ್ದಾರೆ. ಅದು “ಅನ್ವೇಷಿ’. ಇದು ಪಕ್ಕಾ ಹಾರರ್ ಸಿನಿಮಾ. ಚಿತ್ರದ ಟೈಟಲ್ ಕೇಳಿ ಚಿತ್ರದ ಆಡಿಯೋ ಬಿಡುಗಡೆಗೆ ಬಂದಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಖುಷಿಯಾಗಿದ್ದರು. ಇತ್ತೀಚೆಗೆ ಇಂಗ್ಲೀಷ್ ಶೀರ್ಷಿಕೆಗಳ ಮೋಹ ಹೆಚ್ಚುತ್ತಿರುವ ಬಗ್ಗೆ ಗೋವಿಂದು ತಮ್ಮ ಬೇಸರವನ್ನು ಆ ವೇದಿಕೆಯಲ್ಲಿ ತೋಡಿಕೊಂಡರು.
“ವೇಮಗಲ್ ಅವರು “ಅನ್ವೇಷಿ’ ಎಂಬ ಕನ್ನಡ ಶೀರ್ಷಿಕೆ ಇಟ್ಟಿದ್ದಾರೆ. ಆದರೆ, ಈಗ ಚಿತ್ರರಂಗಕ್ಕೆ ಬರುವವರಿಗೆ ಇಂಗ್ಲೀಷ್ ಶೀರ್ಷಿಕೆಗಳ ಮೋಹ ಹೆಚ್ಚು. ಇಂಗ್ಲೀಷ್ ಶೀರ್ಷಿಕೆ ಇಟ್ಟರೆ ಮುಂದೆ ಸಬ್ಸಿಡಿ ಸೇರಿದಂತೆ ಇತರ ವಿಷಯಗಳಿಗೆ ತೊಂದರೆಯಾಗಬಹುದೆಂದು ಹೇಳಿದರೂ, “ನಮಗೆ ಸಬ್ಸಿಡಿ ಸೇರಿದಂತೆ ಯಾವ ಸೌಲಭ್ಯವೂ ಬೇಡ ಸಾರ್. ನಾವು ಕೇಳಿದ ಟೈಟಲ್ ಕೊಡಿ’ ಎನ್ನುತ್ತಾರೆ. ಆ ಮಟ್ಟಿಗೆ ಇಂಗ್ಲೀಷ್ ಟೈಟಲ್ ಗಾಗಿ ಸಬ್ಸಿಡಿ ಬಿಡೋಕು ರೆಡಿ ಎನ್ನುವವರಿದ್ದಾರೆ. ಯಾವುದೇ ಸಿನಿಮಾಗಳಿಗೂ ಶೀರ್ಷಿಕೆ ತುಂಬಾ ಮುಖ್ಯವಾಗುತ್ತದೆ. ಕಥೆಗೆ ಹೊಂದಿಕೆಯಾಗುವ ಶೀರ್ಷಿಕೆ ಇಡಬೇಕಾಗುತ್ತದೆ’ ಎನ್ನುತ್ತಾ “ಅನ್ವೇಷಿ’ ತಂಡಕ್ಕೆ ಶುಭಕೋರಿದರು ಸಾ.ರಾ.ಗೋವಿಂದು.
ಅಂದಹಾಗೆ, “ಅನ್ವೇಷಿ’ ಒಂದು ಹಾರರ್ ಸಿನಿಮಾ. ಜರ್ನಲಿಸಂ ವಿದ್ಯಾರ್ಥಿ “ಸಿಕ್ಸ್ತ್ ಸೆನ್ಸ್’ ಬಗ್ಗೆ ಲೇಖನ ಬರೆಯಲು ಹೋದ ಸಂದರ್ಭದಲ್ಲಿ ಏನೆಲ್ಲಾ ಅನುಭವಗಳಾಗುತ್ತದೆ ಎಂಬ ಅಂಶದೊಂದಿಗೆ ಈ ಸಿನಿಮಾ ಸಾಗುತ್ತದೆಯಂತೆ. ನಿರ್ದೇಶಕ ವೇಮಗಲ್ ಅವರು ಹೇಳುವಂತೆ, ಕಥೆಯಲ್ಲಿ ಹೊಸತನವಿದೆ. ಈ ಕಥೆಯಲ್ಲಿ ಹಾರರ್ ಜೊತೆಗೆ ಲವ್‌ಸ್ಟೋರಿಯೂ ಇರುವುದರಿಂದ ಎಲ್ಲಾ ವರ್ಗದವರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸ ವೇಮಗಲ್ ಅವರಿಗಿದೆ. ಚಿತ್ರವನ್ನು ಜಯರಾಂ ನಿರ್ಮಿಸಿದ್ದಾರೆ. ಚಿತ್ರದಲ್ಲಿ ತಿಲಕ್, ರಘು ಭಟ್, ದಿಶಾ ಪೂವಯ್ಯ ಸೇರಿದಂತೆ ಅನೇಕರು ನಟಿಸಿದ್ದಾರೆ.
ತಿಲಕ್‌ಗೆ ಇದರಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. “ವೇಮಗಲ್ ಅವರ ಈ ಹಿಂದಿನ ಸಿನಿಮಾದಲ್ಲೂ ನನಗೆ ಅವಕಾಶ ಕೊಟ್ಟಿದ್ದರು. ಇಲ್ಲೂ ಒಂದು ಪಾತ್ರ ಕೊಟ್ಟಿದ್ದಾರೆ. ತುಂಬಾ ಹೊಸತನದಿಂದ ಕೂಡಿರುವ ಪಾತ್ರವಿದು’ ಎನ್ನುವುದು ಅವರ ಮಾತು. ಈಗಷ್ಟೇ ಚಿತ್ರರಂಗದಲ್ಲಿ ನೆಲೆಕಂಡುಕೊಳ್ಳುತ್ತಿರುವ ರಘು ಭಟ್‌ಗೆ “ಅನ್ವೇಷಿ’ ಮೂಲಕ ಬ್ರೇಕ್ ಸಿಗುವ ನಿರೀಕ್ಷೆ ಇದೆಯಂತೆ. ಚಿತ್ರದಲ್ಲಿ ದಿಶಾ ಪೂವಯ್ಯ ನಟಿಸಿದ್ದು, ಅವರಿಲ್ಲಿ ಬಬ್ಲಿ ಹುಡುಗಿಯಾಗಿ ಯಾಗಿ ಕಾಣಿಸಿಕೊಂಡಿದ್ದಾರಂತೆ. ವಿಕ್ರಮ್ ಸೂರಿ ಇಲ್ಲಿ ಕಾಮಿಡಿ ಮಾಡಿದ್ದಾರಂತೆ. ಚಿತ್ರಕ್ಕೆ ವೈಲಿನ್ ಹೇಮಂತ್ ಸಂಗೀತ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ ಕೂಡಾ ಭಾಗವಹಿಸಿದ್ದರು.