Advertisement

ಚೆಂಡು ಬಡಿದು ಆಸ್ಪತ್ರೆಗೆ ದಾಖಲಾದ ಕ್ರಿಕೆಟಿಗ

03:50 AM Jul 10, 2017 | Team Udayavani |

ಲಂಡನ್‌:  ಇಂಗ್ಲೆಂಡಿನ “ನಾಟ್‌ವೆಸ್ಟ್‌ ಟಿ-20 ಬ್ಲಾಸ್ಟ್‌’ ಪಂದ್ಯಾವಳಿಯ ವೇಳೆ ದುರಂತವೊಂದು ಶನಿವಾರ ಸಂಭವಿಸಿದೆ. ಬ್ಯಾಟ್ಸ್‌ಮನ್‌ ಬಾರಿಸಿದ ಚೆಂಡು ಮರಳಿ ಬೌಲರ್‌ನ ತಲೆಗೆ ಬಡಿದಿದ್ದು, ಕುಸಿದು ಬಿದ್ದ ಬೌಲರ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

Advertisement

ನಾಟ್ಸ್‌ ಔಟ್‌ಲಾಸ್‌ ಮತ್ತು ಬರ್ಮಿಂಗಂ ಬೇರ್ ತಂಡಗಳ ನಡುವಿನ ಪಂದ್ಯದ ವೇಳೆ ಈ ದುರ್ಘ‌ಟನೆ ನಡೆದಿದೆ. ಬೌಲರ್‌ ಲ್ಯೂಕ್‌ ಫ್ಲೆಚರ್‌ ಎಸೆದ ಚೆಂಡನ್ನು ಬ್ಯಾಟ್ಸ್‌ಮನ್‌ ಸ್ಯಾಮ್‌ ಹೇನ್‌ ಬಾರಿಸಿದರು. ಅದೊಂದು “ಸ್ಟ್ರೇಟ್‌ ಡ್ರೈವ್‌’ ಹೊಡೆತವಾಗಿತ್ತು. ರಭಸದಿಂದ ಬಂದ ಚೆಂಡು ಬೌಲರ್‌ ಫ್ಲೆಚರ್‌ ತಲೆಗೆ ಬಡಿದಿದೆ.

28ರ ಹರೆಯದ ಲ್ಯೂಕ್‌ ಫ್ಲೆಚರ್‌ ಅಲ್ಲಿಯೇ ಕುಸಿದು ಬಿದ್ದರು. ಕೂಡಲೇ ಆಂಬ್ಯುಲೆನ್ಸ್‌ನಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಘಟನೆಯಿಂದ ಎಲ್ಲರೂ ಆಘಾತಕ್ಕೊಳಗಾಗಿದ್ದರು. ಸುಮಾರು ಅರ್ಧ ಗಂಟೆ ಕಾಲ ಪಂದ್ಯ ಸ್ಥಗಿತಗೊಂಡಿತು.

ಅದೃಷ್ಟವಶಾತ್‌ ಫ್ಲೆಚರ್‌ಗೆ ಯಾವುದೇ ಅಪಾಯ ಎದುರಾಗಿಲ್ಲ. ಅವರ ತಲೆಗೆ ಒಂದೆರಡು ಹೊಲಿಗೆ ಹಾಕಲಾಗಿದೆ ಅಷ್ಟೇ… ಎಂದು ಆಸ್ಪತ್ರೆಯ ಮೂಲಗಳು ದೃಢಪಡಿಸಿವೆ. ಫ್ಲೆಚರ್‌ ಕುಳಿತುರುವ ಚಿತ್ರವೊಂದನ್ನು ಟ್ವೀಟ್‌ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next