ಭೋಪಾಲ್ : ಹಲವು ತಿಂಗಳ ಕಾಲ ತನ್ನ ಅಪಹರಣಕಾರನಿಂದ ಅತ್ಯಾಚಾರಕ್ಕೆ ಗುರಿಯಾದ 20ರ ಹರೆಯದ ತರುಣಿಯೋರ್ವಳು ಆತನ ಕಪಿ ಮುಷ್ಟಿಯಿಂದ ಹೇಗೋ ತಪ್ಪಿಸಿಕೊಂಡು, ಗರ್ಭಪಾತಗೊಂಡ ತನ್ನ ಭ್ರೂಣವನ್ನು ಚೀಲದೊಳಗೆ ಹಾಕಿಕೊಂಡು ಪೊಲೀಸ್ ಠಾಣೆಗೆ ಬಂದು ತನ್ನ ಕರುಣಾಜನಕ ಕಥೆಯನ್ನು ಹೇಳಿದ ಅತ್ಯಂತ ಆಘಾತಕಾರಿ ಘಟನೆ ಮಧ್ಯಪ್ರದೇಶದ ಸಾತ್ನಾ ಜಿಲ್ಲೆಯಿಂದ ವರದಿಯಾಗಿದೆ.
ಏಳು ತಿಂಗಳ ಹಿಂದೆ ಈ ನತದೃಷ್ಟ ತರುಣಿಯು ಯಾವುದೋ ಕೆಲಸದ ಮೇಲೆ ಮನೆಯಿಂದ ಹೊರಹೋಗಿದ್ದಾಗ ಕಾಮುಕನಿಂದ ಅಪಹರಣಕ್ಕೆ ಗುರಿಯಾಗಿ ಇಷ್ಟು ಕಾಲವೂ ಆತನ ಒತ್ತೆ ಸೆರೆಯಲ್ಲಿದ್ದು ನಿರಂತರ ಅತ್ಯಾಚಾರಕ್ಕೆ ಗುರಿಯಾಗಿದ್ದಳು. ಇಲ್ಲಿಂದ ಹೊರ ಹೋದರೆ ನಿನ್ನ ಮನೆಯವರ ಮರ್ಯಾದೆ ಹರಾಜು ಹಾಕುತ್ತೇನೆ ಎಂದು ನಿರಂತರವಾಗಿ ತರುಣಿಯನ್ನು ಬೆದರಿಸುತ್ತಿದ್ದ ಆತ ಇಷ್ಟು ತಿಂಗಳೂ ಆಕೆಯನ್ನು ತನ್ನ ಕೋಣೆಯಲ್ಲಿ ಕೂಡಿ ಹಾಕಿ ಅತ್ಯಾಚಾರ ಎಸಗುತ್ತಿದ್ದ ಎನ್ನಲಾಗಿದೆ.
ತರುಣಿಯು ಗರ್ಭಿಣಿಯಾಗಿದ್ದಾಳೆ ಎಂದು ಅರಿತ ಆ ಕಾಮುಕನು ಆಕೆಯನ್ನು ಬಲವಂತದಿಂದ ಗರ್ಭಪಾತಕ್ಕೆ ಗುರಿಪಡಿಸಿದ. ಆಗಲೇ ತರುಣಿಯು ಆರು ತಿಂಗಳ ಗರ್ಭವತಿಯಾಗಿದ್ದಳು. ವೈದ್ಯಕೀಯವಾಗಿ ಅತ್ಯಂತ ಅಪಾಯಕಾರಿಯಾಗಿದ್ದರೂ ತರುಣಿಯನ್ನು ಆತ ಬಲವಂತದಿಂದ ಗರ್ಭಪಾತ ಮಾಡಿಸಿದ.
ಆ ಸಂದರ್ಭದಲ್ಲಿ ಹೇಗೋ ತಪ್ಪಿಸಿಕೊಂಡ ತರುಣಿ ತನ್ನ ಭ್ರೂಣವನ್ನು ಚೀಲದಲ್ಲಿ ಹಾಕಿಕೊಂಡು ಸಮೀಪದ ಪೊಲೀಸ್ ಠಾಣೆಗೆ ಹೋಗಿ ಅದನ್ನು ತೋರಿಸಿ ತನ್ನ ಕರುಣಾಜನಕ ಕಥೆಯನ್ನು ಪೊಲೀಸರಿಗೆ ತಿಳಿಸಿದಳು. ಪೊಲೀಸರೀಗ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಗರ್ಭಪಾತಕ್ಕೆ ಗುರಿಯಾದ ಬಳಿಕ ಈ ವಿಷಯವನ್ನು ಯಾರಲ್ಲಾದರೂ ಬಾಯಿ ಬಿಟ್ಟರೆ ನಿನ್ನ ಮನೆಯವರ ಮರ್ಯಾದೆ ತೆಗೆಯುತ್ತೇನೆ ಎಂಬ ಬೆದರಿಕೆಯನ್ನು ಅಪಹರಣಕಾರ ಕಾಮುಕನು ತರುಣಿಗೆ ಒಡ್ಡಿದ್ದ ಎಂದು ಪೊಲೀಸರು ಹೇಳಿದ್ದಾರೆ.