Advertisement

ಹೊರಟ್ಟಿ ಶಾಲೆಗೆ ಪ್ರಥಮ ಕರ್ನಾಟಕ ಪಬ್ಲಿಕ್‌ ಸ್ಕೂಲ್ ಹೆಗ್ಗಳಿಕೆ

10:15 AM Jun 16, 2019 | Suhan S |

ಮುಧೋಳ:ಯಡಹಳ್ಳಿಯ ಶಿವಲಿಂಗಪ್ಪ ಬಸಪ್ಪ ಹೊರಟ್ಟಿ ಕರ್ನಾಟಕ ಪಬ್ಲಿಕ್‌ ಶಾಲೆ ದೇಶದಲ್ಲೇ ಮಾದರಿಯಾಗಿದೆ. ಆ ಶಾಲೆಗೀಗ ರಾಜ್ಯದ ಪ್ರಥಮ ಕರ್ನಾಟಕ ಪಬ್ಲಿಕ್‌ ಸ್ಕೂಲ್ ಹೆಗ್ಗಳಿಕೆ ಹಾಗೂ ಪ್ರಶಸ್ತಿ ಪತ್ರದ ಸಮೇತ ರೂ. 45ಲಕ್ಷ ವಿಶೇಷ ಅನುದಾನ ಲಭಿಸಿದ್ದು, ಸಂತಸ ತಂದಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

Advertisement

ಬೆಂಗಳೂರಿನಲ್ಲಿ ಕರ್ನಾಟಕ ಪಬ್ಲಿಕ್‌ ಸ್ಕೂಲ್, ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆ, 1000 ಶಾಲೆಗಳಲ್ಲಿ 1ನೇ ತರಗತಿಯಿಂದ ಆಂಗ್ಲ ಮಾಧ್ಯಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರೀಯ ಮಹಾವಿದ್ಯಾಲಯ ರೀತಿಯಲ್ಲಿ ರಾಜ್ಯದಲ್ಲಿ ಈಗಾಗಲೇ ಕಳೆದ ಸಾಲಿನಲ್ಲಿ 176, ಈ ಸಾಲಿನಲ್ಲಿ 100 ಪಬ್ಲಿಕ್‌ ಸ್ಕೂಲ್ ಆರಂಭ ಮಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣ ಸಿಗುವಂತೆ ಮಾಡುವುದೇ ರಾಜ್ಯ ಸರ್ಕಾರದ ಉದ್ದೇಶವಾಗಿದೆ ಎಂದರು.

ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಮುಧೋಳ ತಾಲೂಕಿನ ಯಡಹಳ್ಳಿಯಲ್ಲಿ ದೇಶದಲ್ಲೇ ಮಾದರಿಯಾದ ಹೈಟೆಕ್‌ ಸರ್ಕಾರಿ ಶಾಲೆ ನಿರ್ಮಿಸಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣ ಸಿಗುವಂತೆ ಮಾಡಿದ್ದು, ಹೆಮ್ಮೆ ತಂದಿದೆ. ಜನಪ್ರತಿನಿಧಿಯೊಬ್ಬರು ಮನಸ್ಸು ಮಾಡಿದರೆ ಹುಟ್ಟೂರಿನ ಋಣ ಹೇಗೆ ತೀರಿಸಬೇಕೆಂಬುದನ್ನು ಬಸವರಾಜ ಹೊರಟ್ಟಿ ಅವರನ್ನು ನೋಡಿ ಕಲಿಯಬೇಕಿದೆ ಎಂದರು. ಕಳೆದ ಸಾಲಿನಲ್ಲಿ ಆರಂಭವಾದ ಈ ಶಾಲೆ ಇಂದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ಎಲ್ಲ ಜನಪ್ರತಿನಿಧಿಗಳು ತಮ್ಮ ಪ್ರದೇಶಗಳಲ್ಲಿ ಯಡಹಳ್ಳಿಯಂತಹ ಹೈಟೆಕ್‌ ಶಾಲೆ ನಿರ್ಮಿಸಿದರೆ ರಾಜ್ಯಾದ್ಯಂತ ಗುಣಮಟ್ಟದ ಶಿಕ್ಷಣವನ್ನು ಸರ್ಕಾರಿ ಶಾಲೆಗಳು ನೀಡಲಿವೆ ಎಂದರು.

ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಯಡಹಳ್ಳಿ ಶಿವಲಿಂಗಪ್ಪ ಬಸಪ್ಪ ಹೊರಟ್ಟಿ ಕರ್ನಾಟಕ ಪಬ್ಲಿಕ್‌ ಶಾಲೆಗೆ ರಾಜ್ಯದ ಪ್ರಥಮ ಕರ್ನಾಟಕ ಪಬ್ಲಿಕ್‌ ಸ್ಕೂಲ್ ಪ್ರಶಸ್ತಿ ಪ್ರದಾನ ಮಾಡಿದರು.

ಯಡಹಳ್ಳಿಯ ಸರ್ಕಾರಿ ಹೈಟೆಕ್‌ ಶಾಲೆಯ ರೂವಾರಿ,ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಮಾತನಾಡಿ, ಗುಣಮಟ್ಟದ ಶಿಕ್ಷಣದಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದು, ನಮ್ಮ ತಂದೆಯವರ ಆಶಯದಂತೆ ನನ್ನ ಹುಟ್ಟೂರಿನಲ್ಲಿ ಆರೂವರೆ ಎಕರೆ ಜಮೀನು ನೀಡಿ 25 ಕೋಟಿಗೂ ಹೆಚ್ಚು ವಂತಿಗೆ ಸಂಗ್ರಹಿಸಿ, ಎಲ್ಲ ಮೂಲಸೌಕರ್ಯಗಳುಳ್ಳ ಶಾಲೆ ನಿರ್ಮಿಸಲಾಗಿದೆ. ಪ್ರಸ್ತುತ ಶಾಲೆಯಲ್ಲಿ 1200ಕ್ಕೂ ಹೆಚ್ಚು ಮಕ್ಕಳು ಓದುತ್ತಿರುವುದು ಸಂತಸ ತಂದಿದೆ. ಯಾವುದಕ್ಕೂ ಕೊರತೆಯಾಗದಂತೆ ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್‌ನಿಂದ ಕೋಟ್ಯಂತರ ಮೌಲ್ಯದ ಸಾಮಗ್ರಿ, ಧನಸಹಾಯ ಮಾಡಲಾಗಿದೆ. ನನ್ನ ನಾಲ್ಕು ದಶಕಗಳ ಸಾರ್ವಜನಿಕ ಜೀವನದಲ್ಲಿ ಈ ಕಾರ್ಯ ಸಾಕಷ್ಟು ಹೆಮ್ಮೆ ತಂದಿದೆ. ರಾಜ್ಯಕ್ಕೆ ಪ್ರಥಮ ಬಂದಿದ್ದು, ಸ್ಮರಣೀಯ ಕ್ಷಣ ಎಂದು ಹೇಳಿದರು.

Advertisement

ಉಪ ಮುಖ್ಯಮಂತ್ರಿ ಡಾ| ಜಿ.ಪರಮೇಶ್ವರ, ಶಾಸಕ ರೋಷನ್‌ಬೇಗ್‌, ವಿಧಾನ ಪರಿಷತ್‌ ಸದಸ್ಯರಾದ ಐ.ಕೆ. ಚವರಡ್ಡಿ, ಎಸ್‌.ಜಿ. ಬೋಜೆಗೌಡರು, ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ, ಆಯಕ್ತ ಡಾ| ಟಿ.ಸಿ. ಜಾಫರ, ಪ್ರಾಚಾರ್ಯರಾದ ವಿಜಯಲಕ್ಷ್ಮೀ ಪೆಟ್ಲೂರ, ಶೇಖರ ಲಚ್ಯಾಣಿ, ಪ್ರಥಮ ದರ್ಜೆ ಸಹಾಯಕ ಬಸವರಾಜ ಚೌಕಿವåಠ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next