Advertisement

ಗೋವಾದಲ್ಲಿ ಹೊರನಾಡು ಉತ್ಸವ ;2 ಮತ್ತು 3ರಂದು ಪಣಜಿಯಲ್ಲಿ ಆಯೋಜನೆ

11:48 AM May 29, 2018 | |

ಪಣಜಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ದಕ್ಷಿಣ ಕೇಂದ್ರ ವಲಯ ಸಾಂಸ್ಕೃತಿಕ ಕೇಂದ್ರ ನಾಗಪುರ, ಮಹಾರಾಷ್ಟ್ರ ಇವರ ಸಂಯುಕ್ತ ಆಶ್ರಯದಲ್ಲಿ ಗೋವಾ ಕನ್ನಡ ಸಮಾಜ ಪಣಜಿ ಇವರ ಸಹಯೋಗದಲ್ಲಿ ಜೂ. 2 ಮತ್ತು 3ರಂದು ಪಣಜಿಯ ಮೆನೆಜಿಸ್‌ ಬ್ರಾಗಾಂಜಾ ಸಭಾಗೃಹದಲ್ಲಿ “ಹೊರನಾಡು ಉತ್ಸವ’ ಆಯೋಜಿಸಲಾಗಿದೆ.

Advertisement

ನಗರದಲ್ಲಿ ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಗೋವಾ ಕನ್ನಡ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಬಾದಾಮಿ ಅವರು, ಭಾರತೀಯ ರಿಸರ್ವ್‌ ಬ್ಯಾಂಕ್‌ ಗೋವಾ ಶಾಖೆಯ ಡೆಪ್ಯುಟಿ ಮ್ಯಾನೇಜರ್‌ ಮೀನಾಕ್ಷಿ ಗಡ ಜೂ. 2ರಂದು ಸಂಜೆ 5.30ಕ್ಕೆ ಹೊರನಾಡು ಉತ್ಸವದ ಉದ್ಘಾಟನೆ ನೆರವೇರಿಸುವರು. ಗೋವಾ ಸರ್ಕಾರದ ವಿಮಾನಯಾನ ಇಲಾಖೆ ನಿರ್ದೇಶಕ ಸುರೇಶ್‌ ಶಾನಭಾಗ ಸಮಾರಂಭದ ಅಧ್ಯಕ್ಷೆ ವಹಿಸಲಿದ್ದಾರೆ. ನಂತರ ಸಂಜೆ 6ಕ್ಕೆ ವಚನ ಗಾಯನ, 6.30ಕ್ಕೆ ಜಾನಪದ ಗೀತೆಗಳು, 7ಕ್ಕೆ ಚೌಡಿಕೆ ಪದಗಳ ಗಾಯನ ಕಾರ್ಯಕ್ರಮ ನಡೆಯಲಿದೆ. ನಂತರ ಜಾನಪದ ಸಂಭ್ರಮ
ಕಾರ್ಯಕ್ರಮದಲ್ಲಿ ಕೋಲಾರ ತಂಡದಿಂದ ತಮಟೆ ವಾದನ, ರಾಮನಗರ ತಂಡದಿಂದ ಪೂಜಾ ಕುಣಿತ, ಬೆಂಗಳೂರು ತಂಡದಿಂದ ಪಟಾಕುಣಿತ, ದಾವಣಗೆರೆ ತಂಡದಿಂದ ಕೋಲಾಟ, ಮಂಗಳೂರು ತಂಡದಿಂದ ಕಂಗೀಲು ನೃತ್ಯ, ಮೈಸೂರು ತಂಡದಿಂದ ನಗಾರಿ ವಾದನ, ಕಲಬುರ್ಗಿ ತಂಡದಿಂದ
ಕರಡಿ ಮಜಲು, ಕಾರವಾರ ತಂಡದಿಂದ ಸಿದ್ಧಿ ಢಮಾಮಿ ನೃತ್ಯ ಕಾರ್ಯಕ್ರಮಗಳು ನಡೆಯಲಿದೆ ಎಂದು ಮಲ್ಲಿಕಾರ್ಜುನ ಬದಾಮಿ ಮಾಹಿತಿ ನೀಡಿದರು.

ಜೂ. 3ರಂದು ಸಂಜೆ 5ಕ್ಕೆ ರಂಗ ಗೀತೆ, 5.30ಕ್ಕೆ ಸುಗಮ ಸಂಗೀತ, 6ಕ್ಕೆ ಜಾನಪದ ಗೀತೆ, 6.30ಕ್ಕೆ ಗೀಗೀಪದ, 7ಕ್ಕೆ ತೊಗಲುಗೊಂಬೆಯಾಟ ಕಾರ್ಯಕ್ರಮಗಳು ನಡೆಯಲಿವೆ. ನಂತರ ಜಾನಪದ
ಸಂಭ್ರಮದಲ್ಲಿ ಚಿತ್ರದುರ್ಗ ತಂಡದಿಂದ ಕೊಂಬು ಕಹಳೆ, ತುಮಕೂರು ತಂಡದಿಂದ ಸಂಬಾಳವಾದನ, ಶಿವಮೊಗ್ಗ ತಂಡದಿಂದ ಡೊಳ್ಳುಕುಣಿತ, ಚಿಕ್ಕಮಗಳೂರು ತಂಡದಿಂದ ಮಹಿಳಾ ವೀರಗಾಸೆ,
ಕೊಡಗು ತಂಡದಿಂದ ಚೀನಿದುಡಿ ಕುಣಿತ, ಮಂಗಳೂರು ತಂಡದಿಂದ ಗುಮಟೆ ಪಾಂಗ್‌, ಉಡುಪಿ ತಂಡದಿಂದ ಕಂಗೀಲು ನೃತ್ಯ, ಹಾಸನ ತಂಡದಿಂದ ಚಿಟ್‌ ಮೇಳ, ಬಾಗಲಕೋಟೆ ತಂಡದಿಂದ ಕರಡಿ ಮಜಲು, ಚಾಮರಾಜನಗರ ತಂಡದಿಂದ ಕಂಸಾಳೆ ನೃತ್ಯ, ಬಳ್ಳಾರಿ ತಂಡದಿಂದ ಹಕ್ಕಿಪಿಕ್ಕಿ ಕುಣಿತ
ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಈ ಎರಡೂ ದಿನಗಳ ಹೊರನಾಡು ಉತ್ಸವದ ಅದ್ಧೂರಿ ಕಾರ್ಯಕ್ರಮಗಳಿಗೆ ಕನ್ನಡಿಗರು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕು ಎಂದು ಗೋವಾ ಕನ್ನಡ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಬದಾಮಿ ಮನವಿ ಮಾಡಿದರು. ಸಂಘದ ಕಾರ್ಯದರ್ಶಿ ಅರುಣಕುಮಾರ
ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next