Advertisement

ಪ್ಲಾಸ್ಟಿಕ್‌ ಮುಕ್ತ ಸ್ವಚ್ಛ ಜಿಲ್ಲೆ ನಿರ್ಮಿಸುವ ಆಶಯ

10:06 PM Oct 02, 2019 | Lakshmi GovindaRaju |

ಹಾಸನ: ದೇಶವು ಸುಧಾರಣೆಯಾಗಬೇಕಾದರೆ ಸ್ವಚ್ಛತೆ ಮುಖ್ಯ. ಹಾಗಾಗಿ ಜಿಲ್ಲೆಯನ್ನು ಸ್ವಚ್ಛ ಮತ್ತು ಪ್ಲಾಸ್ಟಿಕ್‌ ಮುಕ್ತ ಜಿಲ್ಲೆಯಾಗಿಸುವ ಗುರಿ ಹೊಂದಿದ್ದೇವೆ, ಅದರ ರಕ್ಕಾಗಿ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಮನವಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಬಿ.ಎಸ್‌.ಶ್ವೇತಾ ಮನವಿ ಮಾಡಿದರು.

Advertisement

ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಪಂಚಾಯಿತಿ, ನಗರಸಭೆ, ಎಪಿಎಂಸಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಭಾರತ ಸೇವಾದಳ ಹಾಗೂ ವಿವಿವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಾಸನ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತಿಯಲ್ಲಿ ಮಾತನಾಡಿದ ಅವರು, ಅಹಿಂಸೆ, ಸತ್ಯಾಗ್ರಹದ ಮೂಲಕ ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು ಎಂದು ಹೇಳಿದರು.

ಕರ್ತವ್ಯ ಪಾಲನೆಯೇ ಗಾಂಧೀಜಿಗೆ ಸಲ್ಲಿಸುವ ಗೌರವ: ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಮಾತನಾಡಿ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಕರ್ತವ್ಯ ಪಾಲನೆ ಮಾಡುವುದೇ ಗಾಂಧೀಜಿಯವರಿಗೆ ಸಲ್ಲಿಸುವ ನಿಜವಾದ ಗೌರವ. ದೇಶದಲ್ಲಿ ಸಾಮಾಜಿಕ, ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಅವುಗಳಿಂದ ಪಾರಾಗಲು ನಾವು ಗಾಂಧೀಜಿ ತೋರಿಸಿದ ದಾರಿಯಲ್ಲಿ ನಡೆಯಬೇಕು ಎಂದು ಹೇಳಿದರು.

ಪ್ರೀತಿ, ಶಾಂತಿ, ಪ್ರೇಮ, ಅಹಿಂಸೆ, ಸಮಾನತೆಯಿಂದ ಜೀವನ ನಡೆಸಿದಾಗ ಬಾಪೂಜಿ ಅವರ ರಾಮರಾಜ್ಯ ಕನಸನ್ನು ನನಸು ಮಾಡಬಹುದು ಎಂದ ಜಿಲ್ಲಾಧಿಕಾರಿಯವರು ಸ್ವಚ್ಛತಾ ಕಾರ್ಯ ದೇವರ ಪೂಜೆಗೆ ಸಮಾನವಾದದ್ದು, ಸಚ್ಛತೆಯಿಂದ ಪ್ರತಿಯೊಬ್ಬರಲ್ಲಿ ಶಿಸ್ತು ಮೂಡುತ್ತದೆ ಮತ್ತು ನಮ್ಮ ದೇಶವನ್ನು ಸುಂದರವಾಗಿಸಬಹುದು ಎಂದರು.

ಆದರ್ಶ ಅನುಕರಣೀಯ: ಸ್ವಾತಂತ್ರ್ಯ ಹೋರಾಟಗಾರ‌ ಶಿವಣ್ಣ ಮಾತನಾಡಿ, ಗಾಂಧಿಜೀ ಹಾಗೂ ಲಾಲ್‌ ಬಹದ್ದೂರ್‌ ಶಾಸ್ತ್ರಿ ಇಬ್ಬರೂ ರಾಷ್ಟ್ರಾಭಿವೃದ್ಧಿಯ ಕನಸು ಕಂಡವರು. ಅವರ ಆದರ್ಶಗಳು ಸದಾ ಅನುಕರಣೀಯ ಎಂದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಮ್‌ ನಿವಾಸ್‌ ಸೆಫ‌ಟ್‌, ಜಿಪಂ ಸಿಇಒ ಬಿ.ಎ. ಪರಮೇಶ್‌, ಎಎಸ್ಪಿ ನಂದಿನಿ, ಜಿಪಂ ಉಪ ಕಾರ್ಯದರ್ಶಿಗಳಾದ ಮಹೇಶ್‌ ಮತ್ತು ಚಂದ್ರಶೇಖರ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ವಿನೋದ್‌ ಚಂದ್ರ,

Advertisement

ನಗರಸಭೆ ಆಯುಕ್ತ ಕೃಷ್ಣಮೂರ್ತಿ, ಎಪಿಎಂಸಿ ಅಧ್ಯಕ್ಷ ಮಂಜೇಗೌಡ, ಕಾರ್ಯದರ್ಶಿ ಶ್ರೀಹರಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ತಹಶೀಲ್ದಾರ್‌ ಮೇಘಣಾ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ‌ ಬಿ.ಎ.ಜಗದೀಶ್‌, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಉದಯಕುಮಾರ್‌, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷದ ನಾಯಕರಳ್ಳಿ ಮಂಜೇಗೌಡ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸರ್ವಧರ್ಮ ಪ್ರಾರ್ಥನೆ:  ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಸರ್ವಧರ್ಮ ಹಾಗೂ ವಿವಿಧ ಧರ್ಮಗಳ ಸಾರದ ಬಗ್ಗೆ ಸಂದೇಶ ಸಾರಲಾಯಿತು. ಹಿಂದೂ ಧರ್ಮದ ಬಗ್ಗೆ ಶ್ರೀಧರ್‌ ಹರಿಹರಪುರ, ಇಸ್ಲಾಂ ಧರ್ಮದ ಬಗ್ಗೆ ಮುಫ್ತಿ ಆಸಿಫ್ ಮುಶ್ತಭ್‌, ಕ್ರೈಸ್ತ ಧರ್ಮದ ಕುರಿತು ಕಿರಣ್‌ ದಾಸ್‌, ಬೌದ್ಧ ಧರ್ಮದ ಬಗ್ಗೆ ಬಸವರಾಜು ದಮ್ಮಾಚಾರಿ, ಜೈನ ಧರ್ಮದ ಬಗ್ಗೆ ಜೀನರಾಜ್‌ ಅವರು ಸಂದೇಶ ನೀಡಿದರು. ಪ್ರಭಾರ ಅಪರ ಜಿಲ್ಲಾಧಿಕಾರಿ ಎಚ್‌.ಎಲ್‌. ನಾಗರಾಜ್‌ ಸ್ವಚ್ಛತೆ ಮತ್ತು ಪ್ಲಾಸ್ಟಿಕ್‌ ಮುಕ್ತ ಬದುಕು ಸಾಗಿಸುವ ಕುರಿತ ಪ್ರತಿವಿಜ್ಞಾಧಿ ಬೋಧಿಸಿದರು.

ಸಾಕ್ಷ್ಯಚಿತ್ರ ಪ್ರದರ್ಶನ: ಗಾಂಧಿ ಜಯಂತಿ ಅಂಗವಾಗಿ ವಾರ್ತಾ ಮ¤ತು ಸಾರ್ವಜನಿಕ ಸಂಪರ್ಕ ಇಲಾಖಾ ವತಿಯಿಂದ ಗಾಂಧೀಜಿಯವರ ಅಪೂರ್ವ ಛಾಯಚಿತ್ರ ಪ್ರದರ್ಶನ ಹಾಗೂ ಗಾಂಧೀಜಿಯವರ ಜೀವನ ಕುರಿತಂತೆ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು. ಇಲಾಖೆಯ ವತಿಯಿಂದ ಪಾಪು ಬಾಪು ಎಂಬ ಕಿರು ಹೊತ್ತಿಗೆ ಹಾಗೂ ಗಾಂಧೀಜಿ ಕುರಿತ ಜನಪದ ಹಾಗೂ ಮಾರ್ಚ್‌ ಆಫ್ ಕರ್ನಾಟಕ ವಿಶೇಷ ಸಂಚಿಕೆಗಳನ್ನು ಬಿಡುಗಡೆ ಮಾಡಲಾಯಿತು.

ಚಿತ್ರ ಕಲಾ ಸ್ಪರ್ಧೆ: ಗಾಂಧಿ ಜಯಂತಿ ಅಂಗವಾಗಿ ಎಪಿಎಂಸಿ ಆವರಣದಲ್ಲಿ ಸ್ಥಳದಲ್ಲಿ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿತ್ತು. ವಿವಿಧ ಶಾಲಾ ವಿದ್ಯಾರ್ಥಿಗಳು ಸ್ವಚ್ಛತೆಯ ಮಹತ್ವ, ಗಾಂಧಿಜಿಯವರ ಚಿತ್ರ ಹಾಗೂ ಪ್ಲಾಸ್ಟಿಕ್‌ ನಿಷೇಧ ಕುರಿತ ಚಿತ್ರಗಳನ್ನು ಬಿಡಿಸಿ ಮೂಲಕ ಗಮನ ಸೆಳೆದರು.

ಗಾಂಧೀಜಿ ವೇಷಭೂಷಣ ಸ್ಪರ್ಧೆ: ಇದೇ ವೇಳೆ ನರ್ಸರಿ ತರಗತಿ, ಎಲ್‌ಕೆಜಿ, ಯುಕೆಜಿ ಮತ್ತು 1ರಿಂದ 5ನೇ ತರಗತಿಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮಹಾತ್ಮ ಗಾಂಧಿಜಿಯವರ ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪುಟಾಣಿಗಳ ವೇಷಭೂಷಣ ಸ್ಪರ್ಧೆಗಳು ಆಕರ್ಷಕವಾಗಿದ್ದವು. ವೇಷಭೂಷಣ, ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಗಳ ವಿಜೇತರಿಗೆ ಕಾರ್ಯಕ್ರಮದಲ್ಲಿ ಬಹುಮಾನವನ್ನು ವಿತರಣೆ ಮಾಡಲಾಯಿತು.

ಭಜನೆ ಗಾಯನ: ಗಾಂಧೀ ಜಯಂತಿ ಕಾರ್ಯಕ್ರಮದಲ್ಲಿ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳಿಂದ ಗಾಂಧೀಜಿಯವರಿಗೆ ಪ್ರಿಯವಾಗಿದ್ದ ಭಜನೆಗಳ ಗಾಯನ ಗಮನ ಸೆಳೆಯಿತು.

ಪ್ಲಾಸ್ಟಿಕ್‌ ನಿಷೇಧ ಜಾಗೃತಿ, ಬಟ್ಟೆ ಬ್ಯಾಗ್‌ ವಿತರಣೆ: ಇದೇ ವೇಳೆ ಎಪಿಎಂಸಿ ಆವರಣದಲ್ಲಿ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ನಿಷೇಧ ಕುರಿತಂತೆ ಮಾರಾಟಗಾರರು ಹಾಗೂ ಗ್ರಾಹಕರಿಗೆ ಜಾಗೃತಿ ಮೂಡಿಸಿ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್‌ಗಳನ್ನು ಜಿಲ್ಲಾಧಿಕಾರಿ ಆರ್‌. ಗಿರೀಶ್‌ ವಿತರಿಸಿದರು. ಈ ಸಂದರ್ಭ ಪ್ಲಾಸ್ಟಿಕ್‌ ಬಳಕೆಯ ಅನಾನುಕೂಲದ ಬಗ್ಗೆ ಗ್ರಾಹಕರಲ್ಲಿ ಅರಿವು ಮೂಡಿಸಿದರು.

ಸಸಿ ವಿತರಣೆ: ಗಾಂಧಿ ಜಯಂತಿ ಹಾಗೂ ಲಾಲ್‌ ಬಹುದ್ದೂರ್‌ ಶಾಸ್ತ್ರೀ ಅವರ ಜನ್ಮ ದಿನಾಚರಣೆ ಅಂಗವಾಗಿ ಎಪಿಎಂಸಿ ಆವರಣದಲ್ಲಿ ನಗರಸಭೆ ವತಿಯಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಸಿ ವಿತರಿಸಲಾಯಿತು.

ಎಪಿಎಂಸಿ ಆವರಣದಲ್ಲಿ ಶ್ರಮದಾನ ಆಂದೋಲನ:
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಹಾಸನ ಎಪಿಎಂಸಿ, ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಎಪಿಎಂಸಿ ಆವರಣದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್‌ ಬಹುದ್ದೂರ್‌ ಶಾಸ್ತ್ರಿ ಅವರ ಜನ್ಮ ಜಯಂತಿ ಅಂಗವಾಗಿ ಪ್ಲಾಸ್ಟಿಕ್‌ ತ್ಯಾಜ್ಯ ಮುಕ್ತ ಆಂದೋಲನ, ಸ್ವಚ್ಚತಾ ಸೇವಾ ಹಾಗೂ ಸ್ವಚ್ಛತಾ ಶ್ರಮದಾನವನ್ನು ಜಿಲ್ಲಾಧಿಕಾರಿ ಆರ್‌.ಗಿರೀಶ್‌, ಜಿ.ಪಂ.ಸಿಇಒ ಪರಮೇಶ್‌ ಅವರು ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು.

ಎಪಿಎಂಸಿ ಆವರಣ ಹಾಗೂ ಪ್ರಮುಖ ರಸ್ತೆಗಳಲ್ಲಿ ಕಸ ಹಾಗೂ ಪ್ಲಾಸ್ಟಿಕ್‌ಗಳನ್ನು ಸಂಗ್ರಹದ ಮೂಲಕ ಸ್ವಚ್ಛತೆಗೆ ಶ್ರಮದಾನ ಮಾಡಿದರು. ಈ ಆಂದೋಲನದಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳ ತಂಡ, ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳ ಸಹಕಾರದೊಂದಿಗೆ ಸ್ವಚ್ಛತೆ ನಡೆಸಲಾಯಿತು. ಸ್ವಚ್ಛತಾ ಕಾರ್ಯದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಂಘ ಸಂಸ್ಥೆಯ ಪ್ರತಿನಿಧಿಗಳು ಹಾಗಾ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next