ಮೊಹಾಲಿ: ಪ್ರವಾಸಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಮಾರ್ಚ್ 4ರಂದು ಆರಂಭವಾಗಿದೆ. ಮೊದಲ ಪಂದ್ಯ ಮೊಹಾಲಿಯ ಪಿಸಿಎ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ನೂರನೇ ಟೆಸ್ಟ್ ಪಂದ್ಯವಾಗಿರಲಿದೆ. ಹೀಗಾಗಿ ಭಾರತೀಯರಿಗೆ ಈ ಪಂದ್ಯ ಮಹತ್ವದ್ದಾಗಿದೆ.
100 ಟೆಸ್ಟ್‌ಗಳನ್ನು ಆಡಿದ 11 ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಲಿದ್ದಾರೆ. ಸಚಿನ್ ತೆಂಡೂಲ್ಕರ್ (200), ರಾಹುಲ್ ದ್ರಾವಿಡ್ (163), ವಿವಿಎಸ್ ಲಕ್ಷ್ಮಣ್ (134), ಅನಿಲ್ ಕುಂಬ್ಳೆ (132), ಕಪಿಲ್ ದೇವ್ (131), ಸುನಿಲ್ ಗವಾಸ್ಕರ್ (125),,ದಿಲೀಪ್ ವೆಂಗ್‌ಸರ್ಕರ್ (116), ಸೌರವ್ ಗಂಗೂಲಿ (113), ಇಶಾಂತ್ ಶರ್ಮಾ (105), ಹರ್ಭಜನ್ ಸಿಂಗ್ (103), ಮತ್ತು ವೀರೇಂದ್ರ ಸೆಹ್ವಾಗ್ (103) ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.
ಕೊಹ್ಲಿ ನೂರನೇ ಟೆಸ್ಟ್ ಬಗ್ಗೆ ಮಾತನಾಡಿದ ಮಾಜಿ ಆಟಗಾರ ಸುನೀಲ್ ಗಾವಸ್ಕರ್, ‘ಮೊಹಾಲಿಯಲ್ಲಿ ವಿರಾಟ್ ಕೊಹ್ಲಿ ತಮ್ಮ 100 ನೇ ಟೆಸ್ಟ್ ಅನ್ನು ಶತಕದೊಂದಿಗೆ ಆಚರಿಸುವುದನ್ನು ನೋಡಲು ನಾನು ಬಯಸುತ್ತೇನೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಐಪಿಎಲ್ ಆರಂಭಕ್ಕೂ ಮೊದಲೇ ಗುಜರಾತ್ ಟೈಟನ್ಸ್ ಗೆ ಶಾಕ್ ನೀಡಿದ ಇಂಗ್ಲೆಂಡ್ ಆಟಗಾರ!
ಸುನೀಲ್ ಗಾವಸ್ಕರ್ ಅವರು ಭಾರತದ ಪರ ನೂರು ಟೆಸ್ಟ್ ಪಂದ್ಯವಾಡಿದ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದರು. ಇದುವರೆಗೆ ಯಾವುದೇ ಭಾರತೀಯ ಆಟಗಾರ ತನ್ನ ನೂರನೇ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿಲ್ಲ. ವಿಶ್ವ ಕ್ರಿಕೆಟ್ ನಲ್ಲಿ 9 ಮಂದಿ ಆಟಗಾರರು ಈ ಸಾಧನೆ ಮಾಡಿದ್ದಾರೆ.