ಅಂಕೋಲಾ: ಶೌರ್ಯದ ಪ್ರತೀಕ, ಸೌಹಾರ್ದದ ಸಂಕೇತವಾಗಿ ಕರಾವಳಿ ಭಾಗದ ಅಂಕೋಲಾದಲ್ಲಿ ಪಾರಂಪರಿಕವಾಗಿ ಆಚರಿಸಲಾಗುವ “ಹೊಂಡೆ ಹಬ್ಬ’ ನಗರದಲ್ಲಿ ಸೋಮವಾರ ಸಂಭ್ರಮಿಂದ ಜರುಗಿತು.
ನೆರೆ ಜನರಲ್ಲಿ ರೋಮಾಂಚನ ಮೂಡಿಸಿತು. ಕರಾವಳಿ ಪ್ರದೇಶದಲ್ಲಿ ಪ್ರತಿಯೊಂದು ಹಬ್ಬಗಳಿಗೆ ಒಂದೊಂದು ವಿಶೇಷತೆಗಳಿದ್ದು, ಸಂಪ್ರದಾಯದಂತೆ ಆಚರಿಸಲಾಗುತ್ತಿದೆ. ಅದರಂತೆ ದೀಪಾವಳಿ ಹಬ್ಬದಲ್ಲಿಯೂ ವಿಶೇಷತೆಗಳಿವೆ. ದೀಪಾವಳಿ ಹಬ್ಬದ ಬಲಿಪಾಡ್ಯಮಿಯಂದು ತಾಲೂಕಿನ ಕ್ಷತ್ರೀಯ ಕೋಮಾರಪಂಥ ಸಮಾಜದ ವಿಶಿಷ್ಟ ಆಚರಣೆ ಹಬ್ಬವೇ ಹೊಂಡೆ ಹಬ್ಬ.
ಕ್ಷತ್ರೀಯ ಕೋಮಾರಪಂತ ಸಮಾಜದವರ ವೀರತ್ವವನ್ನು ಮೆರದು ದೇಶ ಪ್ರೇಮಿಗಳಾಗಿದ್ದರು ಎನ್ನುವ ಐತಿಹಾಸಿಕ ನೆನಪಿಗಾಗಿ ಅಂಕೋಲಾದಲ್ಲಿ ಭಾವಾವೇಶವಾಗಿ ಯುದ್ಧೋಪಾದಿಯಲ್ಲಿ ಎರಡು ಬಣಗಳು ಹೋರಾಡಿ ಆಚರಣೆ ಮಾಡುತ್ತಿರುವ ಈ “ಹೊಂಡೆ ಹಬ್ಬ’ ನಗರದ ಶಾಂತಾದುರ್ಗಾ ದೇವಸ್ಥಾನದಿಂದ ಒಂದು ತಂಡ ಕುಂಬಾರ ಕೇರಿ ಕದಂಭೇಶ್ವರ ದೇವಸ್ಥಾನದಿಂದ ಇನ್ನೊಂದು ತಂಡ ಆಗಮಿಸಿ ಹಬ್ಬದ ಆಚರಣೆ ಮಾಡಲಾಗುತ್ತದೆ.
ಕೋಮಾರಪಂಥ ಸಮಾಜದವರು ಮೂಲತಃ ಕ್ಷತ್ರೀಯ ವರ್ಗಕ್ಕೆ ಸೇರಿದವರಾಗಿದ್ದು, ಯುದ್ಧದ ಸಂದರ್ಭದಲ್ಲಿ ಕೋಮಾರಪಂಥ ಸಮಾಜ ತನ್ನದೇ ಆದ ಕೊಡುಗೆ ನೀಡಿದ ಐತಿಹಾಸಿಕ ಹಿನ್ನೆಲೆಗಳಿವೆ. ಕೋಮಾರಪಂಥ ಸಮಾಜ ಅಂದು ನಾಡಿನ ರಕ್ಷಣೆಗೆ ಯುದ್ಧದಲ್ಲಿ ತೋರಿದ ಸಾಹಸದ ಸಂಕೇತವಾಗಿ ಇಂದು ಪ್ರಸ್ತುತವಾಗಿ ಹಿಂಡ್ಲಿಕಾಯಿಂದ ಪರಸ್ಪರ ಹೊಡೆದಾಡುವುದರ ಮೂಲಕ ತಮ್ಮ ಸಂಪ್ರದಾಯ ಅನಾವರಣಗೊಳಿಸುತ್ತಾರೆ. ಈ ಆಟದಲ್ಲಿ ಕೆಚ್ಚಿನ ಭೀಕರತೆ ಇದ್ದರು ಅದು ಸಮಾಜದ ಸೌಹಾರ್ದದ ಸಂಕೇತವಾಗಿರುತ್ತದೆ. ತನ್ಮೂಲಕ ಎಲ್ಲಾ ಸಮುದಾಯದವರ ಸಾಮರಸ್ಯಕ್ಕೆ ಸಾಕ್ಷಿಯಾಗಿ ಹೊಂಡೆಯಾಟವು ಶತಶತಮಾನಗಳಿಂದ ನಡೆಯುತ್ತ ಬಂದಿದೆ.
ಈ ಹೊಂಡೆ ಹಬ್ಬದಲ್ಲಿ ಕೋಮಾರಪಂಥ ಸಮಾಜದ ಲಕ್ಷ್ಮೇಶ್ವರ ಹಾಗೂ ಹೊನ್ನೇಕೇರಿಯ ಊರಿನ ಎರಡು ತಂಡಗಳು ಪಾಲ್ಗೊಳ್ಳುತ್ತವೆ. ಕುಂಬಾರಕೇರಿಯ ಕಳಸದೇವಸ್ಥಾನದಿಂದ ಹೊರಟ ಲಕ್ಷ್ಮೇಶ್ವರ ತಂಡವು ವೀರಾವೇಶದಿಂದ ಹೊಂಡೆ ಹೊಂಡೆ ಎನ್ನುತ್ತಾ ಎದುರಾಳಿಯನ್ನು ಎದುರಿಸಲು ನಗರದ ಶಾಂತಾದುರ್ಗ ದೇವಸ್ಥಾನದ ಎದುರಿನಲ್ಲಿ ಹೊನ್ನೇಕೇರಿ ತಂಡದೊಂದಿಗೆ ಮುಖಾಮುಖೀಗೊಂಡ ನಂತರ ಎರಡು ಗ್ರಾಮದ ಹಿರಿಯರಿಂದ ಹೊಂಡೆ ಆಟಕ್ಕೆ ಚಾಲನೆ ದೊರೆಯುತ್ತದೆ. ಈ ಹೊಂಡೆ ಹಬ್ಬದ ನಿಯಮದಂತೆ ಯಾವುದೇ ಕಾರಣಕ್ಕೆ ಮಂಡಿಯ ಕೆಳಭಾಗಕ್ಕೆ ಹೊಡೆಯಬೇಕೆನ್ನುವ ನಿಯಮ ಪಾಲಿಸಬೇಕಾಗುತ್ತದೆ. ಆದರೂ ಕೆಲವೊಮ್ಮೆ ಗುರಿಕಾರನ ಗುರಿತಪ್ಪಿ ಎದುರಾಳಿಯು ತೀವ್ರ ತರಹದ ಹೊಡೆತಕ್ಕೆ ಗುರಿಯಾಗುವ ಸಾಧ್ಯತೆ ಇರುತ್ತದೆ.
ಇವುಗಳನ್ನು ನಿಯಂತ್ರಿಸಲು ಸಮಾಜದ ಮುಖಂಡರು ನಿರ್ಣಾಯಕರಾಗಿರುತ್ತಾರೆ. ಎರಡು ಪಂಗಡಗಳಲ್ಲಿ ಯಾರು ಸಮರ ವೀರರು ಎನ್ನುವುದನ್ನು ಈ ನಿರ್ಣಾಯಕರು ನಿರ್ಧರಿಸುತ್ತಾರೆ. ಹೊಂಡೆ ಹಬ್ಬದಲ್ಲಿ ಗೆದ್ದ ಪಂಗಡಕ್ಕೆ ದೊಡ್ಡ ಮೊಗ್ಗೆ ಕಾಯಿಯನ್ನು ನೀಡಿದರೆ, ಇನ್ನೊಂದು ಪಂಗಡಕ್ಕೆ ಸಣ್ಣ ಮೊಗ್ಗೆಕಾಯಿ ನೀಡುವ ಸಂಪ್ರದಾಯ ಪಾರಂಪರಿಕವಾಗಿ ನಡೆದುಕೊಂಡು ಬಂದಿದೆ. ನಗರದ ಮಧ್ಯವರ್ತಿ ಸ್ಥಳಗಳಲ್ಲಿ ನಾಲ್ಕು ಕಡೆಗಳಲ್ಲಿ ಹೊಂಡೆಯೊಂದಿಗೆ ಹೋರಾಟಕ್ಕಿಳಿದು ತಮ್ಮ ಕ್ಷತ್ರೀಯ ವರ್ಚಸನ್ನು ತೊರಡಿಸಲಿದ್ದಾರೆ. ನಂತರ ಎರಡು ಪಂಗಡಗಳು ಒಂದಾಗಿ ಊರಿನ ದೊಡ್ಡ ದೇವರನಿಸಿಕೊಂಡ ವೆಂಕಟರಮಣ ದೇವಸ್ಥಾನಕ್ಕೆ ಗೋವಿಂದ ಗೋವಿಂದ ಎನ್ನುತ್ತ ತೆರಳಿ ಹೋರಾಟದ ನೆನಪುಗಳನ್ನು ಮೆಲುಕು ಹಾಕುತ್ತಾರೆ. ಅಲ್ಲದೆ ಹೊಂಡೆ ಹಬ್ಬದ ಸಮಯದಲ್ಲಿ ಆದ ಸಣ್ಣಪುಟ್ಟ ತಪ್ಪುಗಳನ್ನು ಒಪ್ಪಿಕೊಂಡು ಸಮಾಜದವರೆಲ್ಲ ಒಂದಾಗಿ ಬಾಳ್ಳೋಣ ಎನ್ನುವ ಸಾಮರಸ್ಯ ಮೆರೆಯುತ್ತಾರೆ.
-ಅರುಣ ಶೆಟ್ಟಿ