ಬೆಂಗಳೂರು: ಮೈಕೋ ಲೇಔಟ್, ಕಲಾಸಿಪಾಳ್ಯ ಮತ್ತು ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ ಹುಕ್ಕಾ ಬಾರ್‌ಗಳ ಮೇಲೆ ಸಿಸಿಬಿ ಮಹಿಳಾ ಮತ್ತು ಮಾದಕದ್ರವ್ಯ ದಳದ ಅಧಿಕಾರಿಗಳು ದಾಳಿ ನಡೆಸಿ 15 ಆರೋಪಿಗಳನ್ನು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ಪಂಕಜ್ ಅಗರ್‌ವಾಲ್ (22), ಹೈದರಾಬಾದ್‌ನ ಮೋಹನ್ ಕೃಷ್ಣ (22), ನಾಗಲ್ಯಾಂಡ್‌ನ ವುಂಗಾನಿಂಗ್ ಹರೋಮ್ (23), ಪಿಟೋಕಾ (23), ಅವುಟೋ (19), ವಿಟೋಪು (24), ಮಣಿಪುರದ ಮಶಾಂಗಮ್ (24), ಮೆಹುಲ್ ದುರ್ಗಾನಿ (30), ಸುನ್ ಲಾಮ್ ತಂಗ್ ಮನ್‌ಲುನ್ (27), ಸುಭಾಷ್ ಸಿಂಗ್ (24), ತೊಕ್‌ಚೋಮ್ ಸುನೀಲ್‌ಕುಮಾರ್ ಸಿಂಗ್ (21), ನಾಗಲ್ಯಾಂಡ್‌ನ ಕುಬೇರ್ ದೋಸ್ ಸುಬಾ (24), ಹನುಮಂತನಗರದ ಅನಿಕೇತ್ (28), ಮೈಸೂರು ರಸ್ತೆಯ ದೀಪಕ್ (26) ಮತ್ತು ಅಸ್ಸಾಂನ ಇಸ್ಲಾಂವುದ್ದೀನ್ (25) ಬಂಧಿತರು.
ಬಂಧಿತರ ಪೈಕಿ ಮಣಿಪುರ, ಅಸ್ಸಾಂ, ನಾಗಲ್ಯಾಂಡ್ ಮೂಲದ ಆರೋಪಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಂಧಿತರಿಂದ ಗ್ರಾಹಕರಿಗೆ ನೀಡಲು ಸಿದ್ದಪಡಿಸಿದ್ದ ಹುಕ್ಕಾಗಳು ಸೇರಿದಂತೆ ಕೆಲ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಹೊಸೂರು ರಸ್ತೆಯ ಕ್ರೈಸ್ಟ್ ಕಾಲೇಜು ಸಮೀಪ, ಆರ್.ವಿ.ರಸ್ತೆಯ ಮಿನರ್ವ ವೃತ್ತ ಮತ್ತು ಬಸವನಗುಡಿ ರಸ್ತೆಯಲ್ಲಿ ಅನಧಿಕೃತವಾಗಿ ಹುಕ್ಕಾ ಬಾರ್ ನಡೆಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪ್ರತ್ಯೇಕವಾಗಿ ದಾಳಿ ನಡೆಸಿ ಬಂಧಿಸಲಾಗಿದೆ. ಹುಕ್ಕಾ ಬಾರ್‌ಗಳಿಗೆ ಬರುತ್ತಿದ್ದವರ ಪೈಕಿ ಅಪ್ರಾಪ್ತ ಶಾಲಾ- ಕಾಲೇಜು ವಿದ್ಯಾರ್ಥಿಗಳೇ ಇವರ ಪ್ರಮುಖ ಗ್ರಾಹಕರಾಗಿದ್ದರು. ದಾಳಿ ವೇಳೆ ಮೂರು ಹುಕ್ಕಾ ಬಾರ್‌ಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ಸೇರಿ 75 ಮಂದಿ ಯುವಕರು ಸಿಕ್ಕಿ ಬಿದಿದ್ದರು. ಬಳಿಕ ಅವರನ್ನು ಪೋಷಕರಿಗೆ ಒಪ್ಪಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಗಳು, ಹುಕ್ಕಾ ಬಾರ್ ತೆರೆಯಲು ಸಂಬಂಧಪಟ್ಟವರಿಂದ ಯಾವುದೇ ಅನುಮತಿ ಪಡೆದಿಲ್ಲ. ಅನಧಿಕೃತವಾಗಿ ತೆರೆದು ಯುವಕರು ಹಾಗೂ ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿರಿಸಿಕೊಂಡಿದ್ದರು ಎಂಬ ಮಾಹಿತಿ ಸಿಕ್ಕಿದೆ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ. ಮೈಕೋ ಲೇಔಟ್, ಕಲಾಸಿಪಾಳ್ಯ ಮತ್ತು ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.