Advertisement

ಮೀಸಲಾತಿಗೆ ಕೊಕ್ಕೆ: ಅನ್ಯಾಯ ಸರಿಪಡಿಸಿ

02:43 PM Mar 30, 2019 | pallavi |

ಜೇವರ್ಗಿ: 371ನೇ (ಜೆ) ವಿಧಿ ಬಗ್ಗೆ ಮಾತನಾಡುವರು ಲೋಕೋಪಯೋಗಿ ಇಲಾಖೆಯಲ್ಲಿ 870 ಇಂಜಿನಿಯರ್‌ ಹಾಗೂ ಸಹಾಯಕ ಇಂಜಿನಿಯರುಗಳ ನೇಮಕಾತಿಯಲ್ಲಿ 371(ಜೆ) ವಿಧಿ ಮೀಸಲಾತಿಗೆ ಕೊಕ್ಕೆ ಹಾಕಿದರೂ ಸುಮ್ಮನೆ ಕೂಡುವ ಬದಲು ಅನ್ಯಾಯ ಸರಿಪಡಿಸಲು ಮುಂದಾಗಬೇಕೆಂದು ಬಿಜೆಪಿ ಲೋಕಸಭಾ ಅಭ್ಯರ್ಥಿ ಡಾ| ಉಮೇಶ ಜಾಧವ್‌ ಆಗ್ರಹಿಸಿದರು.

Advertisement

ಶುಕ್ರವಾರ ಪಟ್ಟಣದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು, ಲೋಕೋಪಯೋಗಿ ಇಲಾಖೆಯಲ್ಲಿ ಇಂಜಿನಿಯರ್‌ ಹಾಗೂ ಸಹಾಯಕ ಇಂಜಿನಿಯರುಗಳ ನೇಮಕಾತಿಯನ್ನು ವಿಶೇಷ ಎಂಬುದಾಗಿ ಉಲ್ಲೇಖೀಸಿ 371ನೇ (ಜೆ) ವಿಧಿ ಮೀಸಲಾತಿ ಕಡೆಗಣಿಸಿ ಈ ಭಾಗಕ್ಕೆ ತುಂಬಾ ಅನ್ಯಾಯ ಎಸಗಲಾಗಿದೆ ಎಂದರು.

ಈ ಹಿಂದೆಯೂ ಗ್ರಾಮ ಪಂಚಾಯಿತಿ ಆಪರೇಟ್‌ರುಗಳನ್ನು ಸಹ ವಿಶೇಷ ಹುದ್ದೆ ಎಂಬುದಾಗಿ ಅಧಿಸೂಚನೆ ಹೊರಡಿಸಿ ಹಾಸನ, ಬೆಂಗಳೂರು, ಮಂಡ್ಯ ಭಾಗವದರನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಲಾಗಿತ್ತು. ಆಗ ವೈಜನಾಥ ಪಾಟೀಲ ನೇತೃತ್ವದಲ್ಲಿ ಹೋರಾಟ ನಡೆದಾಗ ನೇಮಕಾತಿಯನ್ನೇ ರದ್ದುಪಡಿಸಲಾಯಿತು.

ಈಗಲೂ ಆ ಭಾಗದವರನ್ನೇ ಇಂಜಿನಿಯರ್‌ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಬೇಕೆಂಬ ಹುನ್ನಾರದಿಂದ ವಿಶೇಷ ನೇಮಕಾತಿ ಎಂಬುದಾಗಿ ಪರಿಗಣಿಸಿ ಅಧಿಸೂಚನೆ ಹೊರಡಿಸಲಾಗಿದೆ. 371ನೇ (ಜೆ) ಮೀಸಲಾತಿಗೆ ಕೊಕ್ಕೆ ಹಾಕಿದರೂ ಸರ್ಕಾರದಲ್ಲಿರುವರು ಸುಮ್ಮನೆ ಕುಳಿತಿರುವುದು ನಿಜಕ್ಕೂ ಅನ್ಯಾಯದ ಪರಮಾವಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳ ನೇಮಕಾತಿ ಮೀಸಲಾತಿ ಪ್ರಕಾರ ಹುದ್ದೆಗಳ ಭರ್ತಿಗೆ ಮುಂದಾಗಬೇಕಿತ್ತು. ಆದರೆ ವಿಶೇಷ ನೇಮಕಾತಿ ಮೂಲಕ ತಮ್ಮ ಭಾಗದವರನ್ನೇ ತುಂಬಿಕೊಳ್ಳಲು ಮುಂದಾಗಿದ್ದರೂ ಹೈಕ ಭಾಗದ ಅಭಿವೃದ್ಧಿ ಬಗ್ಗೆ ಮಾತನಾಡುವರು ತಕ್ಷಣ ಮಾತನಾಡುವುದನ್ನು
ನಿಲ್ಲಿಸಿ ಮೊದಲು ಅಧಿಸೂಚನೆ ರದ್ದುಪಡಿಸಲು ಮುಂದಾಗಲಿ ಎಂದರು.

Advertisement

ಏಪ್ರಿಲ್‌ 3ರಂದು ನಾಮಪತ್ರ ಸಲ್ಲಿಸುವೆ. ಆ ದಿನ ಪ್ರತಿ ಬೂತ್‌ದಿಂದ 10 ಜನರು ಬರಬೇಕು. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸ್ಪರ್ಧಿಸುವ ಅವಕಾಶವಿದೆ. ಕಾಂಗ್ರೆಸ್‌ ಪಕ್ಷದಿಂದ ತಮಗೆ ಹಾಗೂ ಜನಾಂಗಕ್ಕೆ ಅವಮಾನ ಆಗಿದ್ದರಿಂದ ಬಿಜೆಪಿಯಿಂದ ಸ್ಪರ್ಧೆಗಿಳಿದಿದ್ದೇವೆ. ತಾವಂತೂ ಸಂವಿಧಾನಬದ್ಧವಾಗಿ ನಡೆಯುತ್ತೇವೆ. ಹೀಗಾಗಿ ತಮ್ಮೆಲ್ಲರ ಆಶೀರ್ವಾದ ಬೇಕಾಗಿದೆ ಎಂದು ಜನರಲ್ಲಿ ಮನವಿ ಮಾಡಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ ಮಾತನಾಡಿ, ಕಾಂಗ್ರೆಸ್‌ ಪಕ್ಷದ ಖತಲ್‌ ರಾತ್ರಿ ನೋಡಿದ್ದೇವೆ. ಅದನ್ನೇ ಮಾಡುತ್ತಾ ಗೆಲ್ಲುತ್ತಾ ಬಂದಿದ್ದಾರೆ. ಈಗ ಅವರ ಖತಲ್‌ ರಾತ್ರಿ ಆಟ ನಡೆಯೋದಿಲ್ಲ. ಅದನ್ನು ತಡೆಯಲಿದ್ದೇವೆ. ಅಲ್ಲದೇ ಈ ಸಲ ಕೇಂದ್ರದಲ್ಲಿ 300 ಸೀಟುಗಳನ್ನು ಬಿಜೆಪಿ ಪಡೆಯುವ ಮುಖಾಂತರ ಮತ್ತೆ ಬಿಜೆಪಿ ಸರ್ಕಾರ ಬರಲಿದೆ ಎಂದು ಹೇಳಿದರು. ಮಾಜಿ ಸಚಿವ ಡಾ| ಎ.ಬಿ. ಮಾಲಕರೆಡ್ಡಿ ಮಾತನಾಡಿ, ದೇಶ ಅಭಿವೃದ್ಧಿ ಪಥದತ್ತ ಸಾಗುವಂತಾಗಲು ಮೋದಿ ನಾಯಕತ್ವ ಅವಶ್ಯಕವಿದೆ. ಆದ್ದರಿಂದ ಉಮೇಶ ಜಾಧವ್‌ ಅವರನ್ನು ಗೆಲ್ಲಿಸುವ ಮುಖಾಂತರ ಸಾಕಾರಗೊಳಿಸಬೇಕು ಎಂದರು.

ಶಾಸಕರಾದ ಬಿ.ಜಿ. ಪಾಟೀಲ, ಬಸವರಾಜ ಮತ್ತಿಮಡು, ಮಾಜಿ ಶಾಸಕ ಶಶೀಲ್‌ ನಮೋಶಿ, ಮುಖಂಡರಾದ ಲಿಂಗರಾಜ ಬಿರಾದಾರ, ಸಾಯಬಣ್ಣ ದೊಡಮ್ಮನಿ, ಧರ್ಮಣ್ಣ ದೊಡ್ಡಮನಿ, ರಮೇಶ ವಕೀಲ್‌, ದಂಡಪ್ಪ ಸಾಹು ಕುಳಗೇರಿ, ಶಿವರಾಜ ಪಾಟೀಲ ರದ್ದೇವಾಡಗಿ, ರೇವಣಸಿದ್ಧಪ್ಪ ಸಂಕಾಲಿ, ಮಹಾದೇವಪ್ಪ ದೇಸಾಯಿ, ರಾಜು ತಳವಾರ, ಸಿದ್ರಾಮ ಯಳಸಂಗಿ, ಜೆಟ್ಟಪ್ಪ ಮಂದ್ರವಾಡ, ಭಗವಂತರಾಯ ಬೆಣ್ಣೂರ, ಸಾಹೇಬಗೌಡ ಕಲ್ಲಾ, ಸಂತೋಷ ಮಲ್ಲಾಬಾದ್‌, ಗುರುಲಿಂಗಪ್ಪಗೌಡ, ಮಲ್ಲನಗೌಡ ನೇರಡಗಿ ಮುಂತಾದವರಿದ್ದರು.

ಲೋಕಸಭೆಯ ಈ ಸಲದ ಚುನಾವಣೆಯಲ್ಲಿ ಜೇವರ್ಗಿ ಮತಕ್ಷೇತ್ರದಿಂದ 10 ಸಾವಿರ ಮತಗಳ ಲೀಡ್‌ ಕೊಡಲಾಗುವುದು. ಹೀಗಾಗಿ ಪ್ರತಿಯೊಬ್ಬ ಕಾರ್ಯಕರ್ತರು ಶ್ರಮಿಸುವ ಮುಖಾಂತರ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಾಗೂ ಕಲಬುರಗಿಯಲ್ಲಿ ಡಾ| ಜಾಧವ್‌ ಗೆಲ್ಲಿಸಬೇಕೆಂದು ಜೇವರ್ಗಿ ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ ವಿನಂತಿಸಿದರು.

371ನೇ (ಜೆ) ವಿಧಿ ಜಾರಿಯ ಅನುಷ್ಠಾನದ ಸಚಿವ ಸಂಪುಟ ಉಪಸಮಿತಿ ಅಧ್ಯಕ್ಷರು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರೇ ಆಗಿದ್ದಾರೆ. ಇಷ್ಟಿದ್ದ ಮೇಲೂ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ ನೇಮಕಾತಿಯಲ್ಲಿ 371ನೇ (ಜೆ) ಮೀಸಲಾತಿ ಅಳವಡಿಕೆ ಮಾಡದೇ ಅನ್ಯಾಯ ಎಸಗಿರುವುದನ್ನು ಸರಿಪಡಿಸಲು ಏಕೆ ಮುಂದಾಗುತ್ತಿಲ್ಲ.
ಡಾ| ಉಮೇಶ ಜಾಧವ್‌, ಬಿಜೆಪಿ ಲೋಕಸಭಾ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next