Advertisement

ಸ್ಪೀಕರ್‌ ಅಧಿಕಾರಕ್ಕೆ ಕೊಕ್ಕೆ?

09:35 AM Jan 23, 2020 | Team Udayavani |

ಹೊಸದಿಲ್ಲಿ: ಶಾಸಕ ಯಾ ಸಂಸದರ ಅನರ್ಹತೆ ವಿಚಾರದಲ್ಲಿ ಸ್ಪೀಕರ್‌ 3 ತಿಂಗಳಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು, ಅನರ್ಹತೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಸ್ವತಂತ್ರ ಸಮಿತಿಗೆ ನೀಡಬೇಕು.

Advertisement

-ಇದು ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯ. ಮಣಿಪುರ ವಿಧಾನಸಭೆಯ ಇಬ್ಬರು ಶಾಸಕರ ಅನರ್ಹತೆ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ನ್ಯಾ| ರೋಹಿಂಗ್ಟನ್‌ ಎಫ್. ನಾರಿಮನ್‌, ನ್ಯಾ| ಅನಿರುದ್ಧ ಬೋಸ್‌ ಮತ್ತು ನ್ಯಾ| ವಿ. ರಾಮ ಸುಬ್ರಮಣಿಯನ್‌ ನೇತೃತ್ವದ ತ್ರಿಸದಸ್ಯ ಪೀಠ ಸ್ಪೀಕರ್‌ ಕಾರ್ಯವ್ಯಾಪ್ತಿ ಬಗ್ಗೆ ಕೆಲವು ಆಕ್ಷೇಪಗಳನ್ನೂ ಎತ್ತಿದೆ.

ಲೋಕಸಭೆ ಅಥವಾ ವಿಧಾನಸಭೆಯ ಆಯಸ್ಸು 5 ವರ್ಷ. ಇಂಥ ಸನ್ನಿವೇಶದಲ್ಲಿ ಅನರ್ಹತೆಯ ಅರ್ಜಿ ಬಂದ ಕೂಡಲೇ ಕಾಲಮಿತಿ ನಿಗದಿಪಡಿಸಿ ಅರ್ಜಿ ಇತ್ಯರ್ಥ ಮಾಡಬೇಕು. ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕ ಅಥವಾ ಸಂಸದ ತಪ್ಪು ಮಾಡಿದ್ದಾನೆ ಎಂದಾದರೆ ಅವರು ವಿಧಾನಸಭೆ ಅಥವಾ ಲೋಕಸಭೆಯಲ್ಲಿ ಒಂದು ದಿನವೂ ಇರಲು ಯೋಗ್ಯರಲ್ಲ ಎಂದೂ ಹೇಳಿದೆ.

ಸ್ವತಂತ್ರ ಸಮಿತಿ ನೇಮಕ ಸೂಕ್ತ
ಕರ್ನಾಟಕ ಸೇರಿದಂತೆ ದೇಶದ ವಿವಿಧ ವಿಧಾನಸಭೆಗಳ ಪ್ರಕರಣಗಳನ್ನು ಉದಾಹರಣೆಯಾಗಿ ನೀಡಿದ ಸುಪ್ರೀಂ ಕೋರ್ಟ್‌, ಅನರ್ಹತೆ ವಿಚಾರದಲ್ಲಿ ನಿರ್ಧಾರ ತೆಗೆದು ಕೊಳ್ಳಲು ಶೆಡ್ನೂಲ್‌ 10ರ ಅಡಿಯಲ್ಲಿ ಸುಪ್ರೀಂನ ನಿವೃತ್ತ ನ್ಯಾಯಮೂರ್ತಿ ಅಥವಾ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸ್ವತಂತ್ರ ಸಮಿತಿ ನೇಮಕ ಮಾಡುವುದು ಸೂಕ್ತ ಎಂದಿತು. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಂಸತ್‌ ಮುಂದಾಗಬೇಕು ಎಂದೂ ತಿಳಿಸಿತು. ಜತೆಗೆ ಸ್ವೀಕರ್‌ ಅರೆನ್ಯಾಯಿಕ ಹುದ್ದೆ ಹೊಂದಿದ್ದರೂ ಅನರ್ಹತೆ ವಿಚಾರದಲ್ಲಿ ಪಕ್ಷವೊಂದರ ಪರವಾಗಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಇಂಥ ನಿರ್ಧಾರಗಳನ್ನು ಸ್ವತಂತ್ರ ಸಮಿತಿಯೇ ನಿಷ್ಪಕ್ಷವಾಗಿ ತೆಗೆದುಕೊಳ್ಳಬೇಕು ಎಂದಿತು.

ನಾಲ್ಕು ವಾರಗಳಲ್ಲಿ ಕ್ರಮ ತೆಗೆದುಕೊಳ್ಳಿ
ಅನರ್ಹತೆ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪೀಕರ್‌ ಅನಿರ್ದಿಷ್ಠಾವಧಿವರೆಗೆ ತೀರ್ಮಾನ ಕೈಗೊಳ್ಳದೆ ಇರುವಂತೆ ಆಗಬಾರದು. ಮಣಿಪುರದ ಸದರಿ ಪ್ರಕರಣದಲ್ಲಿ ನಾಲ್ಕು ವಾರಗಳ ಒಳಗಾಗಿ ತೀರ್ಮಾನ ಕೈಗೊಳ್ಳಬೇಕು ಎಂದು ನ್ಯಾಯಪೀಠ ಆದೇಶ ನೀಡಿದೆ. ಆದರೆ ತಾನೇ ಅವರನ್ನು ಅನರ್ಹ ಮಾಡಲು ನಿರಾಕರಿಸಿದ್ದು, ಮೊದಲು ಸ್ಪೀಕರ್‌ ಕ್ರಮ ತೆಗೆದುಕೊಳ್ಳಲಿ ಎಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next