Advertisement

ಡಾ|ಮಹಾಂತ ಶಿವಯೋಗಿಗಳಿಗೆ ಗೌರವ ನಮನ

05:26 PM May 21, 2018 | |

ಇಳಕಲ್ಲ: ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ, ಮಹಾಂತ ಜೋಳಿಗೆಯ ಮೂಲಕ ಕ್ರಾಂತಿಕಾರಿ ಹೋರಾಟ ನಡೆಸಿದ್ದ ಇಳಕಲ್ಲ-ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನಮಠದ ಡಾ|ಮಹಾಂತ ಶಿವಯೋಗಿಗಳ ಅಂತ್ಯಕ್ರಿಯೆ ಸೋಮವಾರ ಬೆಳಗ್ಗೆ ಇಳಕಲ್ಲದ
ಗದ್ದುಗೆಯಲ್ಲಿ ನೆರವೇರಲಿದೆ.

Advertisement

ಇದಕ್ಕೂ ಮುಂಚೆ ಆರ್‌.ವೀರಮಣಿ ಕ್ರೀಡಾಂಗಣದಿಂದ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀಗಳ ಪಾರ್ಥಿವ ಶರೀರದ ಮೆರವಣಿಗೆ ನಡೆಯಲಿದೆ. ನಾಡಿನ ಮಠಾಧೀಶರು, ಶರಣರು ಹಾಗೂ ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ.

ಸವದಿ-ಹಿಪ್ಪರಗಿಯಲ್ಲಿ ದರ್ಶನ: ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ ಲಿಂಗೈಕ್ಯರಾದ ಮಹಾಂತ ಶ್ರೀಗಳ ಪಾರ್ಥೀವ ಶರೀರವನ್ನು ಆಸ್ಪತ್ರೆಯಿಂದ ಗುರುಗಳು ಈ ಹಿಂದೆ ಪಟ್ಟಾಧಿಕಾರಿಯಾಗಿದ್ದ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸವದಿ ಮಠಕ್ಕೆ ತರಲಾಯಿತು. ಅಲ್ಲಿ ಸಾವಿರಾರು ಭಕ್ತರು ಶ್ರೀಗಳ ಅಂತಿಮ ದರ್ಶನ ಪಡೆದರು. ಭಕ್ತರ ಅಪೇಕ್ಷೆ ಮೇರೆಗೆ ಪೂಜ್ಯರ ಪೂರ್ವಾಶ್ರಮದ ಹುಟ್ಟೂರು ಜಮಖಂಡಿ ತಾಲೂಕಿನ ಹಿಪ್ಪರಗಿಗೆ ತರಲಾಯಿತು. ಅಲ್ಲಿ ನೂರಾರು ಭಕ್ತರು, ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿ ಕಂಬನಿ ಮಿಡಿದರು.

ಹಿಪ್ಪರಗಿಯಿಂದ ನೇರವಾಗಿ ಬಾಗಲಕೋಟೆ ನಗರದ ಪ್ರತಿಷ್ಠಿತ ಬಸವೇಶ್ವರ ವೀರಶೈವ ವಿದ್ಯಾರ್ವಧಕ ಸಂಘದ ಆವರಣದಲ್ಲಿರುವ ಲಿಂ| ಬೀಳೂರು ಗುರುಬಸವ ಅಜ್ಜನವರ ಗುಡಿ ಎದುರು ಪೂಜ್ಯರ ಪಾರ್ಥಿವ ಶರೀರ ಇರಿಸಲಾಯಿತು. ಬಿವಿವಿ ಸಂಘದಿಂದ ಅಂತಿಮ ನಮನ ಸಲ್ಲಿಸಲಾಯಿತು. 44 ವರ್ಷಗಳ ಬಿವಿವಿ ಸಂಘದ ಅಧ್ಯಕ್ಷರಾಗಿದ್ದ ಶ್ರೀಗಳ ಸೇವೆಯನ್ನು, ಸಂಘದ ಆಡಳಿತ ಮಂಡಳಿಯ ಪ್ರಮುಖರು ಸ್ಮರಿಸಿದರು. ಗಣ್ಯರು-ಮಠಾಧೀಶರ ದರ್ಶನ: ರಾತ್ರಿ ಬಿವಿವಿ ಸಂಘದ ಆವರಣದಿಂದ ನೇರವಾಗಿ ಇಳಕಲ್ಲದ ವಿಜಯ ಮಹಾಂತೇಶ್ವರ ಮಠಕ್ಕೆ ಕರೆ ತರಲಾಯಿತು. ಸಾವಿರಾರು ಭಕ್ತರು, ಸಾರ್ವಜನಿಕರು ಶ್ರೀಗಳ ಅಂತಿಮ ದರ್ಶನ ಪಡೆಯಲು ಕಾದು ಕುಳಿತಿದ್ದರು.

ರವಿವಾರ ಬೆಳಗ್ಗೆ ಶ್ರೀಗಳ ಪಾರ್ಥಿವ ಶರೀರವನ್ನು ನಗರದ ಆರ್‌. ವೀರಮಣಿ ಕ್ರೀಡಾಂಗಣಕ್ಕೆ ಕೊಂಡೊಯ್ಯಲಾಯಿತು. ಬೃಹತ್‌ ಆವರಣದಲ್ಲಿ ಭಕ್ತರ ದರ್ಶನಕ್ಕೆ ಇರಿಸಲಾಗಿದ್ದು, ನಾಡಿನ ವಿವಿಧ ಗಣ್ಯರು, ಮಠಾಧೀಶರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ಉತ್ತರಾಧಿಕಾರಿ ಶ್ರೀ ಗುರುಮಹಾಂತ ಸ್ವಾಮೀಜಿ, ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, ದಾವಣಗೆರೆಯ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಉಸ್ತುವಾರಿ ವಹಿಸಿದ್ದರು.

Advertisement

ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ, ಕೋಡಿಮಠ ಶ್ರೀಗಳು ಡಾ| ಮಹಾಂತ ಶಿವಯೋಗಿಗಳ ಅಂತಿಮ ದರ್ಶನ ಪಡೆದರು. ಮಾಜಿ ಸಚಿವ, ಬಬಲೇಶ್ವರದ ಶಾಸಕ ಎಂ.ಬಿ. ಪಾಟೀಲ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ, ಉದ್ಯಮಿ ಎಸ್‌.ಆರ್‌. ನವಲಿ ಹಿರೇಮಠ, ಬಿಜೆಪಿ ಸ್ಲಂ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ|ಆರ್‌. ಮಾರುತೇಶ ಮುಂತಾದವರು ಶ್ರೀಗಳ ಅಂತಿಮ ದರ್ಶನ ಪಡೆದು, ಕಂಬನಿ ಮಿಡಿದರು.

Advertisement

Udayavani is now on Telegram. Click here to join our channel and stay updated with the latest news.

Next