Advertisement

ಹಿರಿಯ ಯಕ್ಷಗಾನ ಕಲಾವಿದರಿಗೆ ಗೌರವ

12:21 AM Feb 18, 2020 | Lakshmi GovindaRaj |

ಬೆಂಗಳೂರು: ಯಕ್ಷಗಾನ ಹಾಗೂ ಮೂಡಲಪಾಯ ಕಲೆಯನ್ನು ಉಳಿಸಿ-ಬೆಳೆಸಿದವರು ಹಳ್ಳಿಗಾಡು ಪ್ರದೇಶಗಳಲ್ಲಿ ಬಹಳಷ್ಟು ಮಂದಿ ಇದ್ದಾರೆ. ಅಂತಹವರ ಸೇವೆಯನ್ನು ನೆನೆಯುವ ಕಾರ್ಯಕ್ಕೆ ಇದೀಗ ಕರ್ನಾಟಕ ಯಕ್ಷಗಾನ ಅಕಾಡೆಮಿ ಮುಂದಾಗಿದೆ. ಆ ನಿಟ್ಟಿನಲ್ಲಿಯೇ ಹೆಜ್ಜೆಯಿರಿಸಿರುವ ಅಕಾಡೆಮಿ “ಹಿರಿಯರ ನೆನಪು’ ಶೀರ್ಷಿಕೆಯಡಿ ಹೊಸ ಕಾರ್ಯಕ್ರಮ ರೂಪಿಸುತ್ತಿದೆ.

Advertisement

ಯಕ್ಷಗಾನ ಕಲೆ ಇಂದಿಗೂ ಜೀವಂತವಾಗಿರಲು ಪ್ರತ್ಯೇಕ್ಷ ಮತ್ತು ಪರೋಕ್ಷವಾಗಿ ಹಲವು ಮಹನೀಯರು ಶ್ರಮಿಸಿದ್ದಾರೆ. ಕೆಲವರು ವಿವಿಧ ಕಡೆಗಳಲ್ಲಿ ಯಕ್ಷಗಾನ ಸಂಘಟಿಸಿದ್ದಾರೆ. ಇನ್ನೂ ಕೆಲವರು ಕಲಾ ಕ್ಷೇತ್ರದಲ್ಲಿದ್ದುಕೊಂಡು ಕಿರಿಯ ಕಲಾವಿದರನ್ನು ಬೆಳೆಸಿದ್ದಾರೆ. ತಾಳೆ-ಮದ್ದಳೆ, ಭಾಗವತಿಕೆ ಹಾಗೂ ಚೆಂಡೆನಾದದ ಮೂಲಕವೂ ಕಲೆಯನ್ನು ಜೀವಂತವಾಗಿರಿಸಿದ್ದಾರೆ. ಇಂತಹ ಕಲಾವಿದರನ್ನು ಅವರ ಊರಿನಲ್ಲೆ ನೆನೆಯುವ ಕಾರ್ಯಕ್ರಮ ರೂಪಿಸುವಲ್ಲಿ ಅಕಾಡೆಮಿ ನಿರತವಾಗಿದೆ.

ರಾಜ್ಯದ ಎಲ್ಲಾ ಭಾಗಗಳಲ್ಲೂ ಹಿರಿಯರ ನೆನಪು ಕಾರ್ಯಕ್ರಮ ಹಮ್ಮಿಕೊಳ್ಳುವ ಆಲೋಚನೆ ಕರ್ನಾಟಕ ಯಕ್ಷಗಾನ ಅಕಾಡೆಮಿಗಿದೆ. ಆ ನಿಟ್ಟಿನಲ್ಲಿ ಹೆಜ್ಜೆಯಿರಿಸಿರುವ ಅಕಾಡೆಮಿ, ಅನುದಾನ ಹೊಂದಿಸುವಲ್ಲಿ ನಿರತವಾಗಿದೆ. ಅಲ್ಲದೆ ಕಾರ್ಯಕ್ರಮ ಯಾವ ರೀತಿಯಲ್ಲಿ ಇರಬೇಕು. ಹೇಗೆ ನಡೆಯಬೇಕು ಎಂಬ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದೆ. ಹಿರಿಯ ಕಲಾವಿದರ ಪರಿಚಯ ಹೇಗಿರಬೇಕು ಎಂಬ ಚಿಂತನ-ಮಂಥನದಲ್ಲಿ ನಿರತವಾಗಿದೆ.

ಹಳ್ಳಿಗಳಲ್ಲಿ ಯಕ್ಷಗಾನ ಮತ್ತು ಮೂಡಲಪಾಯ ಕಲೆ ಉಳಿಸಲು ಶ್ರಮಿಸಿದವರ ಬಗ್ಗೆ ಸ್ಥಳೀಯರಿಗೆ ಅವರ ಮಾಹಿತಿಯಿಲ್ಲ. ಕಾಡು -ಮೇಡು, ಚಳಿ-ಗಾಳಿ ಎನ್ನದೆ ಕಲೆಯನ್ನು ಜೀವಂತವಾಗಿಟ್ಟುಕೊಳ್ಳಲೆಂದೆ ಹಲವು ಕಲಾವಿದರು ವಾಹನ ಸೇರಿದಂತೆ ಇನ್ನಿತರ ಸೌಲಭ್ಯಗಳು ಇಲ್ಲದ ದಿನಗಳಲ್ಲೂ ಕೂಡ ಹಾರ್ಮೋನಿಯಂ, ತಬಲಗಳನ್ನು ಹೆಗಲಿಗೆ ಹಾಕಿಕೊಂಡು ಊರೂರು ತಿರುಗಿದ್ದಾರೆ.

ತಮ್ಮ ಕುಟುಂಬವನ್ನು ಲೆಕ್ಕಿಸದೇ ಊಟ, ನಿದ್ರೆ ಬಿಟ್ಟು ಕಲೆಗಾಗಿ ಹೋರಾಡಿದ್ದಾರೆ. ಇವರನ್ನು ನೆನೆಯುವುದಕ್ಕಾಗಿಯೇ ಹಿರಿಯರ ನೆನಪು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಅಕಾಡೆಮಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭಾಗವತರ ಜತೆಗೆ ಚಂಡೆ, ಮದ್ದಲೆ, ತಾಳ, ಮೇಕಪ್‌, ರಂಗಸಜ್ಜಿಕೆ ನಿರ್ಮಾಣ, ವೇಷಭೂಷಣ ಸಿದ್ಧಪಡಿಸಿದವರು ಹಾಗೂ ಯಕ್ಷಗಾನ ಸಂಘಟಕರನ್ನು ಕೂಡ ನೆನಪು ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Advertisement

ಹತ್ತು ಲಕ್ಷ ಅನುದಾನ: ನಾಡಿನ ವಿವಿಧ ಪ್ರದೇಶಗಳಲ್ಲಿ ಈ ವರ್ಷ ಸುಮಾರು ನೂರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಇರಾದೆ ಯಕ್ಷಗಾನ ಅಕಾಡೆಮಿಗೆ ಇದೆ. ಇದಕ್ಕಾಗಿಯೆ ಅಕಾಡೆಮಿ ಹತ್ತು ಲಕ್ಷ ರೂ.ಗಳನ್ನು ಮೀಸಲಿಟ್ಟಿದೆ. ಹಿರಿಯ ಕಲಾವಿದರೊಬ್ಬರನ್ನು ಆಹ್ವಾನಿಸಿ ಸಾಧಕ ಕಲಾವಿದರ ಸಾಧನೆಯನ್ನು ಪರಿಚಯಿಸಲಾಗುವುದು ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಮಾಹಿತಿ ನೀಡಿದ್ದಾರೆ.

ಕಲೆ ಉಳಿವಿಗಾಗಿ ಶ್ರಮಿಸಿದವರನ್ನು ನೆನೆಯುವ ಅಪರೂಪದ ಕಾರ್ಯಕ್ರಮ ಇದಾಗಿದೆ. ಇದರ ರೂಪರೇಷೆಗಳು ಕೂಡ ಸಿದ್ಧವಾಗುತ್ತಿದೆ. ಸಾಧಕರನ್ನು ನೆನಪಿಸುವ ಜತೆಗೆ ಆ ದಿನ ಸ್ಥಳೀಯ ಕಲಾವಿದರಿಂದ ತಾಳೆ-ಮದ್ದಳೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಆಲೋಚನೆ ಕೂಡ ಇದೆ ಎಂದು ತಿಳಿಸಿದ್ದಾರೆ.

ಯಾವುದೇ ಪ್ರತಿಫ‌ಲಾ ಪೇಕ್ಷೆಯಿಲ್ಲದೆ ಯಕ್ಷಗಾನದ ಪ್ರೀತಿಗಾಗಿಯೇ ತಮ್ಮ ಕೈಯಿಂದಲೇ ಹಣಹಾಕಿ ಯಕ್ಷಗಾನ ಕಲೆಯನ್ನು ಇಂದಿಗೂ ಜೀವಂತವಾಗಿಟ್ಟಿದ್ದಾರೆ. ಹಳ್ಳಿಗಾಡು ಪ್ರದೇಶದಲ್ಲಿರುವ ಅಂತಹವರನ್ನು ಅವರ ಊರಿನಲ್ಲೇ ನೆನೆಯುವ ಕೆಲಸ ಇದಾಗಿದೆ.
-ಪ್ರೊ.ಎಂ.ಎ.ಹೆಗಡೆ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ

ಸಾರಿಗೆ ಸೌಲಭ್ಯಗಳ ವ್ಯವಸ್ಥೆ ಸರಿಯಾಗಿಲ್ಲದ ದಿನಗಳಲ್ಲಿ ಊರೂರು ಅಲೆದು ಹಲವರು ಯಕ್ಷಗಾನ ಕಲೆ ಉಳಿಸಿ-ಬೆಳೆಸಿದ್ದಾರೆ. ಅಂತಹವರ ಬಗ್ಗೆ ಇಂದಿನ ಯುವ ಪೀಳಿಗೆಗೆ ಪರಿಚಯವಿಲ್ಲ. ಅಂತಹ ಸಾಧಕರನ್ನು ಪರಿಚಯಿಸುವ ನಿಟ್ಟಿನಲ್ಲಿ ಯಕ್ಷಗಾನ ಅಕಾಡೆಮಿ ಉತ್ತಮ ಕಾರ್ಯಕ್ರಮ ರೂಪಿಸಿದೆ.
-ಶ್ರೀನಿವಾಸ ಸಾಸ್ತಾನ, ಯಕ್ಷಗಾನ ಅಕಾಡೆಮಿ ಸದಸ್ಯ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next