ಧಾರವಾಡ: ಹಿರಿಯ ಮನೋವೈದ್ಯ ಡಾ| ಆನಂದ ಪಾಂಡುರಂಗಿ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೆಟ್ ನೀಡಿ ಗೌರವಿಸಿದೆ. ಕರ್ನಾಟಕದ ರಾಜ್ಯಪಾಲರ ಕಚೇರಿಯಿಂದ ಬುಧವಾರ ಸಂಜೆ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಈ ಕುರಿತು ಅಧಿಕೃತ ಮಾಹಿತಿ ಬಂದಿದೆ ಎಂದು ಕುಲಪತಿ ಡಾ.ಪ್ರಮೋದ ಬಿ.ಗಾಯಿ ಅವರು ಉದಯವಾಣಿಗೆ ತಿಳಿಸಿದ್ದಾರೆ.
ಈ ವರ್ಷ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್‌ನಿಂದ ಒಟ್ಟು 11 ಜನರ ಹೆಸರನ್ನು ಡಾಕ್ಟರೆಟ್ ಸಮಿತಿಗೆ ಶಿಫಾರಸ್ಸು ಮಾಡಲಾಗಿತ್ತು. ಸಮಿತಿಯು ಮೂರು ಜನರ ಹೆಸರನ್ನು ಕಳುಹಿಸಿತ್ತು. ಈ ಪೈಕಿ ರಾಜ್ಯಪಾಲರು ಡಾ.ಪಾಂಡುರಂಗಿ ಅವರಿಗೆ ಗೌರವ ಡಾಕ್ಟರೆಟ್ ನೀಡಲು ಸಮ್ಮತಿಸಿದ್ದಾರೆ. ಮೇ 5ರಂದು ನಡೆಯುವ ಕವಿವಿ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಡಾ.ಗಾಯಿ ತಿಳಿಸಿದರು. ಕಳೆದ ವರ್ಷ ಹಿರಿಯ ಸಾಹಿತಿ ಡಾ.ವಿ.ವಿ.ಐರಸಂಗ ಅವರಿಗೆ ಕವಿವಿ ಗೌರವ ಡಾಕ್ಟರೇಟ್ ಲಭಿಸಿತ್ತು.
ಡಾ.ಆನಂದ ಪಾಂಡುರಂಗಿ: ಮನೋವೈದ್ಯ ರಾಗಿರುವ ಡಾ.ಪಾಂಡುರಂಗಿ ಅವರು ಧಾರವಾಡದ ಮಿಚಿಗನ್ ಕಾಂಪೌಂಡ್‌ನಲ್ಲಿರುವ ತಮ್ಮ ಮನೆಯಂಗಳದಲ್ಲಿಯೇ ಮನೋಚಿಕಿತ್ಸಾ ಆಸ್ಪತ್ರೆ ಸ್ಥಾಪಿಸಿದ್ದು, ಪ್ರತಿನಿತ್ಯ ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಕಡಿಮೆ ಎಲ್ಲಾ ಜಿಲ್ಲೆಗಳಿಂದಲೂ ಮನೋರೋಗಿಗಳು ಇವರ ಬಳಿ ಚಿಕಿತ್ಸೆಗಾಗಿ ಬರುತ್ತಾರೆ.
ಸಾಮಾಜಿಕ ಕಳಕಳಿ ಇರುವ ಡಾ.ಪಾಂಡುರಂಗಿ ಅವರು ಅನೇಕ ಶಿಕ್ಷಣ ಸಂಸ್ಥೆಗಳು, ಸಂಘಟನೆಗಳೊಂದಿಗೆ ಒಡನಾಟ ಹೊಂದಿದ್ದು, ಆ ಮೂಲಕ ತಮ್ಮನ್ನು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗದಗ ತೋಂಟದಾರ್ಯ ಮಠದ ಪ್ರಶಸ್ತಿ, ಬೆಳಗಾವಿ ನಾಗನೂರು ಮಠದ ಗೌರವ ಸನ್ಮಾನ ಸೇರಿದಂತೆ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ನನ್ನ ಸಾಮಾಜಿಕ ಸೇವೆ ಗುರುತಿಸಿ ಕರ್ನಾಟಕ ವಿಶ್ವವಿದ್ಯಾಲಯ ನನಗೆ ಗೌರವ ಡಾಕ್ಟರೆಟ್ ನೀಡಿದ್ದು ಹರ್ಷ ತಂದಿದೆ. ನನ್ನ ಸೇವಾ ಕಾರ್ಯವನ್ನು ಈ ಗೌರವ ಇನ್ನಷ್ಟು ಹೆಚ್ಚಿಸಿದೆ.
ಡಾ.ಆನಂದ ಪಾಂಡುರಂಗಿ, ಹಿರಿಯ ಮನೋವೈದ್ಯರು