Advertisement

ಕನ್ನಡದಲ್ಲಿ ತೀರ್ಪು ನೀಡಿದ ನ್ಯಾಯಾಧೀಶರಿಗೆ ಸನ್ಮಾನ

10:44 AM May 20, 2017 | Team Udayavani |

ಬೆಂಗಳೂರು: ಸ್ಥಳೀಯ ನ್ಯಾಯಾಲಯಗಳಲ್ಲಿ ಕನ್ನಡ ಅನುಷ್ಠಾನಕ್ಕೆ ಕೆಲವು ಕ್ಲಿಷ್ಟತೆಗಳಿದ್ದು, ಅವುಗಳನ್ನು ದೂರ ಮಾಡಿ ಕನ್ನಡದಲ್ಲೇ ಕೋರ್ಟ್‌ ಕಾರ್ಯ ಕಲಾಪಗಳು ನಡೆದು ತೀರ್ಪು ನೀಡುವಂತಾಗಲು ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ವಿಧಾನ
ಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಹಮ್ಮಿ ಕೊಂಡಿದ್ದ 2015-16 ಹಾಗೂ 2016-17ನೇ ಸಾಲಿನಲ್ಲಿ ಕನ್ನಡದಲ್ಲಿ ತೀರ್ಪು ನೀಡಿದ 69 ನ್ಯಾಯಾಧೀಶರು ಹಾಗೂ ಕನ್ನಡದಲ್ಲಿ ವಾದ ಮಂಡಿಸಿದ 19 ಸರ್ಕಾರಿ ಅಭಿಯೋಜಕರಿಗೆ
ಗೌರವ ಸಮರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಸ್ಥಳೀಯ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಕನ್ನಡ ಕಡ್ಡಾಯವಾಗಿ ಅನುಷ್ಠಾನಕ್ಕೆ ಬರಬೇಕು. ಹೈಕೋರ್ಟ್‌ನಲ್ಲೂ ಕನ್ನಡದಲ್ಲೇ ಕಲಾಪ ನಡೆದು, ತೀರ್ಪು ಪ್ರಕಟವಾಗುವಂತಹ ವ್ಯವಸ್ಥೆ ಬಂದರೆ ಒಳ್ಳೆಯದು. 2 ಸಾವಿರ ವರ್ಷ ಇತಿಹಾಸ ಹೊಂದಿರುವ ಸಂಪದ್ಭರಿತ ಭಾಷೆಯಾಗಿರುವ ಕನ್ನಡಕ್ಕೆ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥಯವಿದೆ. ಈಗ ಕನ್ನಡ ತಂತ್ರಾಂಶ ಮತ್ತು ತಂತ್ರಜ್ಞಾನವೂ ಸಾಕಷ್ಟು ಬೆಳೆದಿದೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ನ್ಯಾಯಾಲಯಗಳಲ್ಲಿ ಕನ್ನಡ ಹೇಗೆ ಅನುಷ್ಠಾನಗೊಳಿಸಬಹುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಶಿಫಾರಸುಗಳನ್ನು ಮಾಡಿದರೆ, ಸರ್ಕಾರ ಅದಕ್ಕೆ ಪೂರಕವಾಗಿ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

ನ್ಯಾಯ ಕೋರಿ ಬರುವ ಕಕ್ಷಿದಾರರಲ್ಲಿ ಶೇ.90ರಷ್ಟು ಕನ್ನಡಿಗರೇ ಇರುತ್ತಾರೆ. ಕನ್ನಡದಲ್ಲೇ ಕಲಾಪಗಳು ನಡೆದು, ತೀರ್ಪು ಪ್ರಕಟಗೊಂಡರೆ, ನ್ಯಾಯಾಲಯದಲ್ಲಿ ಏನಾಯಿತು, ತೀರ್ಪು ಪರ ಅಥವಾ ವಿರೋಧ ಬರಲು ಕಾರಣ ಏನು
ಎಂದು ಕಕ್ಷಿದಾರರಿಗೆ ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ. ನ್ಯಾಯಾಧೀಶರು, ಸರ್ಕಾರಿ ಅಭಿಯೋಜಕರಂತೆ ಕನ್ನಡದಲ್ಲಿ ವಾದ ಮಂಡಿಸಿದ ವಕೀಲರಿಗೂ ಸನ್ಮಾನಿಸುವ ಕಾರ್ಯಕ್ರಮ ಪ್ರಾಧಿಕಾರ ಜಾರಿಗೆ ತರಬೇಕು ಎಂದು ಇದೇ ವೇಳೆ ಮುಖ್ಯಮಮತ್ರಿಗಳು ಸಲಹೆ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್‌.ಜಿ. ಸಿದ್ದರಾಮಯ್ಯ ಮಾತನಾಡಿ, ಸರ್ಕಾರ, ಇಲ್ಲಿನ ನೆಲದ ಭಾಷೆಗಳಾಗಿರುವ ತುಳು, ಕೊಡವ, ಕೊಂಕಣಿ, ಬ್ಯಾರಿ, ಉರ್ದು ಅರೆ ಭಾಷೆಗಳನ್ನೂ ಸಮಾನ ಘನತೆ ಗೌರವಗಳಿಂದ
ಬೆಳೆಸುತ್ತಿದೆ. ಕನ್ನಡ-ಕನ್ನಡಿಗ-ಕರ್ನಾಟಕ ಎನ್ನುವ ಧ್ಯೇಯದೊಂದಿಗೆ ಮುನ್ನಡೆಯುತ್ತಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹಲವಾರು ಕಾರ್ಯ ಕ್ರಮಗಳಲ್ಲಿ “ನ್ಯಾಯಾಂಗದಲ್ಲಿ ಕನ್ನಡ’ ಪ್ರಮುಖ ವಾದದ್ದು. ನ್ಯಾಯಾಂಗದಲ್ಲಿ ಕನ್ನಡ ಬಳಕೆಯಾಗಬೇಕೆನ್ನುವುದು ಸರ್ಕಾರದ ನಿಲುವೂ ಆಗಿರುವುದರಿಂದ ನ್ಯಾಯಾಲಯಗಳಲ್ಲಿ ಕನ್ನಡದಲ್ಲೇ ತೀರ್ಪು ನೀಡುವ ನ್ಯಾಯಾಧೀಶರನ್ನು ಪೋತ್ಸಾಹಿಸುವ ಉದ್ದೇಶದಿಂದ ಪ್ರಾಧಿಕಾರ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ
ಎಂದು ತಿಳಿಸಿದರು. ಸಮಾರಂಭದಲ್ಲಿ ಸಚಿವರಾದ ಟಿ.ಬಿ. ಜಯಚಂದ್ರ, ಕೆ.ಜೆ. ಜಾರ್ಜ್‌, ಹೈಕೋರ್ಟ್‌ ನ್ಯಾಯಮೂರ್ತಿ ಎ.ಎಸ್‌. ಬೋಪಣ್ಣ, ಪ್ರಾಧಿಕಾರದ ಕಾರ್ಯದರ್ಶಿ ಡಾ. ಕೆ. ಮುರಳೀಧರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next