ಕೆ.ಆರ್.ಪೇಟೆ: ಪಟ್ಟಣದ ಮಿನಿವಿಧಾನ ಸೌಧದ ಸುತ್ತಲೂ ಬೆಳೆದಿದ್ದ ಅನುಪಯುಕ್ತ ಗಿಡಗಂಟಿಗಳು ಮತ್ತು ಕಸ ಕಡ್ಡಿಗಳನ್ನು ತಹಶೀಲ್ದಾರ್ ಎಂ.ಶಿವಮೂರ್ತಿ ನೇತೃತ್ವದಲ್ಲಿ ಕಂದಾಯ ಇಲಾಖೆ ನೌಕರರು ಹಾಗೂ ಪುರಸಭೆಯ ಪೌರಕಾರ್ಮಿಕರು ಶ್ರಮದಾನ ಕೈಗೊಂಡು ಸ್ವಚ್ಛತೆ ನಡೆಸುವ ಮೂಲಕ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಮತ್ತು ಭಗೀರಥ ಜಯಂತಿಗಳನ್ನು ಅರ್ಥಪೂರ್ಣವಾಗಿ ಅಚರಣೆ ಮಾಡಿದರು.
ತಾಲೂಕು ಕಚೇರಿಯಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಮತ್ತು ಶ್ರೀ ಭಗೀರಥರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿಸಿದ ಬಳಿಕ ತಾಲೂಕು ಕಚೇರಿ ಆವರಣದ ಸುತ್ತಮತ್ತ ಅನುಪಯುಕ್ತ ಗಿಡಗಳನ್ನು ಕಡಿದು ಸ್ವಚ್ಛತಾ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಎಂ.ಶಿವಮೂರ್ತಿ ಚಾಲನೆ ನೀಡಿದರು.
ಈ ವೇಳೆ ಶಿವಮೂರ್ತಿ ಮಾತನಾಡಿ, ಶಿವಶರಣರು ಕಾಯಕವೇ ಕೈಲಾಸ ಎಂಬ ಧ್ಯೇಯದೊಂದಿಗೆ ಸಮಾಜದ ಅಭಿವೃದ್ಧಿಗೆ 12ನೇ ಶತಮಾನದಲ್ಲಿಯೇ ಶ್ರಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಮತ್ತು ಶ್ರೀ ಭಗೀರಥ ಜಯಂತಿಯನ್ನು ಶ್ರಮದಾನ ಮಾಡುವ ಮೂಲಕ ಇಬ್ಬರೂ ಮಹನೀಯರಿಗೆ ಗೌರವ ಸಲ್ಲಿಸಲಾಗುತ್ತಿದೆ ಎಂದು ಹೇಳಿದರು.
ಶ್ರಮದಾನ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಎಲ್ಲಾ ನೌಕರರು, ಆಹಾರ ಇಲಾಖೆ, ಪುರಸಭೆಯ ಪೌರಕಾರ್ಮಿಕರು ರಜೆಯ ದಿನವಾದರೂ ಸಹ ಸಕ್ರಿಯವಾಗಿ ಭಾಗವಹಿಸಿ ಸ್ವಚ್ಚತಾ ಕಾರ್ಯಕ್ಕೆ ಕೈಜೋಡಿಸಿದ್ದು ಶ್ಲಾಘನೀಯವಾದುದು. ಮಹನೀಯರ ಜಯಂತಿಗಳ ದಿನದಂದು ರಜೆ ಪಡೆದು ಸಮಯ ವ್ಯರ್ಥ ಮಾಡುವ ಬದಲು ಸಾಮಾಜಮುಖೀ ಕಾರ್ಯಗಳನ್ನು ಮಾಡುವ ಮೂಲಕ ಮಹಾನ್‌ನಾಯಕರ ಜಯಂತಿಗಳಿಗೆ ಗೌರವ ಸಲ್ಲಿಸಬೇಕು ಎಂದು ತಿಳಿಸಿದರು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಉಪ ತಹಶೀಲ್ದಾರ್ ಮಹದೇವೇಗೌಡ, ಲಕ್ಷ್ಮೀಕಾಂತ್, ಆಹಾರ ಇಲಾಖೆಯ ಶಿರಸ್ತೇದಾರ್ ರಾಜು, ರಾಜಸ್ವ ನಿರೀಕ್ಷಕರಾದ ರಾಮಚಂದ್ರಪ್ಪ, ರಾಜಮೂರ್ತಿ, ತಾಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಹರೀಶ್, ಪುರಸಭೆಯ ಆರೋಗ್ಯ ನಿರೀಕ್ಷಕ ನರಸಿಂಹಶೆಟ್ಟಿ, ಪೌರಕಾರ್ಮಿಕರ ಸಂಘದ ಮುಖಂಡ ಕೆ.ಮುತ್ತುರಾಜ್ ಮತ್ತಿತರರು ಭಾಗವಹಿಸಿ ಶ್ರಮದಾನ ಮಾಡಿದರು.