ದೇವಿ ದರ್ಶನಕ್ಕೆಂದು ಸರತಿಯಲ್ಲಿ ನಿಂತಿರೋ ಭಕ್ತನ ಎದುರು ದಿಢೀರ್ ಅಂತ ದೇವಿಯೇ ಪ್ರತ್ಯಕ್ಷಳಾದರೆ ಎಷ್ಟು ಖುಷಿಯಾಗಬಹುದೋ, ಅಷ್ಟು ಖುಷಿಯಾಯ್ತು ನಂಗೆ.
ಎರಡೂರು ತಿಂಗಳುಗಳ ನಂತರ ಊರಿನತ್ತ ಪ್ರಯಾಣ ಬೆಳೆಸಿದ್ದೆ. ನೆಪ ಸಿಕ್ಕಿದಾಗೆಲ್ಲಾ ಊರಿಗೆ ಓಡಿ ಬರಲು ಮುಖ್ಯ ಕಾರಣ ನೀನು ಅಂತ ಬಿಡಿಸಿ ಹೇಳುವುದು ಬೇಡ ತಾನೇ? ಪರೀಕ್ಷೆ ಮುಗಿದಿದ್ದೇ ತಡ, ನಿನ್ನನ್ನು ನೋಡಲು ಓಡೋಡಿ ಬಂದಿದ್ದೆ.
ಯಾವಾಗ ನಿನ್ನನ್ನೊಮ್ಮೆ ನೋಡುತ್ತೇನೋ ಅಂತ ಕಾದಿದ್ದವನನ್ನು ನೀನು ಹಾಗಾ ಸತಾಯಿಸೋದು? ಊರಿಗೆ ಬಂದು ವಾರ ಕಳೆದರೂ ನಿನ್ನ ಪತ್ತೆಯೇ ಇಲ್ಲ. ಕಾಲ್‌ಗೆ ಉತ್ತರಿಸಲಿಲ್ಲ. ಮೆಸೇಜ್ ಕಳಿಸಿದರೂ ನಿನ್ನಿಂದ ಹಾಂ, ಹೂಂ.. ಏನೂ ಬರಲಿಲ್ಲ. ಆಗ ನನಗೆಷ್ಟು ಗಾಬರಿಯಾಯ್ತು ಗೊತ್ತಾ? ರಜೆ ಕೂಡಾ ಮುಗಿಯುತ್ತಾ ಬಂದಿತ್ತು. ನಿನ್ನನ್ನು ನೋಡದೇ ವಾಪಸ್ ಹೋಗಬೇಕಾಗುತ್ತೇನೋ ಅಂದುಕೊಂಡಿದ್ದೆ.
ದೇವರ ದಯೆ, ಕೊನೆಗೂ ನಿನ್ನಿಂದ ಸಂದೇಶ ಬಂತು. “ಕಾಲೇಜಲ್ಲಿ ಇದೀನಿ ಕಣೋ. ನೀನೆಲ್ಲಿದ್ದಿ?’ ಅಂತ ಕೇಳಿದ್ದಕ್ಕೆ, “ಊರಿಗೆ ಬಂದಿದೀನಿ. ನಿನ್ನನ್ನು ಇವತ್ತೇ ಮೀಟ್ ಮಾಡ್ಬೇಕು. ಹೇಳು, ಎಲ್ಲಿಗೆ ಬರಲಿ?’ ಅಂತ ಒಂದೇ ಉಸಿರಲ್ಲಿ ಎಲ್ಲವನ್ನೂ ಹೇಳಿ ನಿರಾಳನಾದೆ.
“ನಂಗೀಗ ಎಕ್ಸಾಂ ನಡೀತಿದೆ. ಸಿಗೋದಿಕ್ಕೆ ಆಗಲ್ಲ, ಸಾರಿ’ ಅಂದುಬಿಟ್ಟೆ. ನಿನ್ನ ಮಾತು ಕೇಳಿ ತುಂಬಾ ಬೇಜಾರಾಯ್ತು. ಆದರೆ, ಪರಿಸ್ಥಿತಿ ನನಗೂ ಅರ್ಥವಾಯ್ತು. ಪರೀಕ್ಷೆ ಸಮಯದಲ್ಲಿ ನೀನು ಮೊಬೈಲ್ ಬಳಸೋದಿಲ್ಲ. ಇನ್ನು ನನ್ನನ್ನು ಮೀಟ್ ಆಗೋಕೆ ಬರೋದು ಕೂಡ ನಿಂಗೆ ಕಷ್ಟವಾಗುತ್ತೆ ಅಂತ, ಮಾರನೇದಿನ ನಿನ್ನ ಕಾಲೇಜು ಬಳಿ ಬಂದಿದ್ದೆ. ಮೊದಲೇ ಹೇಳಿದರೆ ನೀನು ಬರಬೇಡ ಅಂದುಬಿಟ್ರೆ ಅಂತ ನಿಂಗೆ ಹೇಳಿರಲಿಲ್ಲ.
ಕಾಲೇಜು ಗೇಟ್‌ನ ಬಳಿ ಕಾದು ಕಾದು ನೀನು ಸಿಗದೇ ಇದ್ದಾಗ, ನಿನಗೆ ಕಾಲ್ ಮಾಡಿದೆ. ನೀನು ಉತ್ತರಿಸಲಿಲ್ಲ. ಬಂದ ದಾರಿಗೆ ಸುಂಕವಿಲ್ಲ ಅಂತ ಕಾಲೆಳೆಯುತ್ತಾ, ಬಸ್‌ಸ್ಟಾಂಡ್ ಕಡೆ ಹೋದೆ. ಇನ್ನೇನು ನಮ್ಮೂರಿನ ಬಸ್ ಬರಬೇಕು, ಅಷ್ಟರಲ್ಲಿ ನೀನು ಕಾಲ್ ಮಾಡಿದೆ. “ಬಸ್‌ಸ್ಟಾಂಡ್‌ನಲ್ಲಿದ್ದೀನಿ, ಬೇಗ ಬಾ’ ಅಂತ ಹೇಳಿ ಮುಗಿಸುವುದರೊಳಗೆ ನನ್ನೆದುರು ಬಂದು ನಿಂತಿದ್ದೆ.
ಅಬ್ಟಾ, ದೇವಿ ದರ್ಶನಕ್ಕೆಂದು ಸರತಿಯಲ್ಲಿ ನಿಂತಿರೋ ಭಕ್ತನ ಎದುರು ದಿಢೀರ್ ಅಂತ ದೇವಿಯೇ ಪ್ರತ್ಯಕ್ಷಳಾದರೆ ಎಷ್ಟು ಖುಷಿಯಾಗಬಹುದೋ, ಅಷ್ಟು ಖುಷಿಯಾಯ್ತು ನಂಗೆ. “ಸದ್ಯ ತಮ್ಮ ದರ್ಶನವಾಯ್ತಲ್ಲ’ ಅಂದಾಗ, ತಲೆ ಮೇಲೊಂದು ಮೊಟಕಿದೆಯಲ್ಲ, ಧನ್ಯವಾಯ್ತು ಜೀವನ. ಮುಂದಿನ ಸಲ ಊರಿಗೆ ಬಂದಾಗ ಇಷ್ಟು ಸತಾಯಿಸಬೇಡ ಹುಡುಗಿ.
ಇಂತಿ ನಿನ್ನ ಕಾಯುವಿಕೆಯಲ್ಲೇ ಖುಷಿ ಕಾಣುವ
ಮಲಿಕ್ ಜಮಾದಾರ್