Advertisement

“ಯೋಧರಷ್ಟೆ ಅನ್ನದಾತರಿಗೂ ಗೌರವ ನೀಡಿ’

12:56 PM Dec 24, 2017 | |

ದೇವನಹಳ್ಳಿ: ರೈತರು ಸ್ವಾಭಿಮಾನದ ಸಂಕೇತವಾಗಿದ್ದು, ನಮ್ಮ ದೇಶದಲ್ಲಿ ಯೋಧರಿಗೆ ನೀಡುವ ಗೌರವವನ್ನು ಅನ್ನದಾತ ರೈತನಿಗೂ ಗೌರವ ಸೂಚಿಸಬೇಕು ಎಂದು ಶಾಸಕ ಪಿಳ್ಳಮುನಿಶಾಮಪ್ಪ ಅಭಿಪ್ರಾಯಪಟ್ಟರು.

Advertisement

ನಗರದ ತಾಪಂ ಸಭಾಂಗಣದಲ್ಲಿ ತಾಲೂಕು ಕೃಷಿ ಇಲಾಖೆ ವತಿಯಿಂದ ವಿಶ್ವ ರೈತರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರಿಗೆ ಸರ್ಕಾರದ ಸೌಲಭ್ಯಗಳು ಮನೆ ಬಾಗಿಲಿಗೆ ತಲುಪಬೇಕು. ಸಾವಯುವ ಕೃಷಿ ಪದ್ಧತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ರೈತರಿಗೆ ಹೈನು ಮತ್ತು ರೇಷ್ಮೆ ಎರಡು ಕಣ್ಣುಗಳು ಇದ್ದಂತೆ ಎಂದು ಅಭಿಪ್ರಾಯಪಟ್ಟರು.

ರೈತನ ದುಡಿಮೆಯಿಂದ ಮೂರು ಹೊತ್ತು ಊಟ ಮಾಡುತ್ತಿರುವುದನ್ನು ಯಾರೂ ಮರೆಯಬಾರದು. ರೈತ ಆಹಾರಗಳ ಉತ್ಪಾದನೆ ಮಾಡದಿದ್ದರೆ ಜನ ಬದುಕುವುದು ಕಷ್ಟಕರವಾಗುತ್ತದೆ. ರೈತ ಇರುವ ನೀರಿನಲ್ಲಿಯೇ ಅಲ್ಪ-ಸ್ವಲ್ಪ ಬೆಳೆ ಬೆಳೆದು ಜೀವನ ಸಾಗಿಸುತ್ತಿದ್ದಾನೆ ಎಂದು ಹೇಳಿದರು.

ಕಡಿಮೆ ನೀರು ಬಳಸಿ: ಜಿಕೆವಿಕೆ ವಿಜ್ಞಾನಿ ಶ್ರೀನಿವಾಸಪ್ಪಮಾತನಾಡಿ, ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಕೃಷಿ ಪದ್ಧತಿ ಕಡಿಮೆಯಾಗುತ್ತಿದೆ. ನೀರನ್ನು ಮಿತವಾಗಿ ಬಳಸಬೇಕು. ಇರುವ ಅಲ್ಪ-ಸ್ವಲ್ಪ ನೀರಿನಲ್ಲಿ ರೈತರು ಉತ್ತಮ ಇಳುವರಿ ಪಡೆಯಬೇಕು. ಎರೆಹುಳು ಗೊಬ್ಬರ, ಸಾವಯುವ ಗೊಬ್ಬರಗಳನ್ನು ಹೆಚ್ಚಾಗಿ ಬಳಸುವುದರಿಂದ ಮಣ್ಣಿನ ಫ‌ಲವತ್ತತೆ ಹೆಚ್ಚುತ್ತದೆ. 

ತೋಟ ಮತ್ತು ಹೊಲಗಳ ಹತ್ತಿರ ಕೃಷಿ ಅರಣೀಕರಣ ಮಾಡಿ ಹಸಿರು ಎಲೆಗಳನ್ನು ಶೇಖರಿಸಿ ಹೊಲಗಳಿಗೆ ನೀಡಿದರೆ ಉತ್ತಮ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ ಎಂದು ರೈತರಿಗೆ ಸಲಹೆ ಮಾಡಿದರು.

Advertisement

ತಾಲೂಕು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕಿ ಎಂ.ಎನ್‌.ಮಂಜುಳಾ ಮಾತನಾಡಿ, ಮಾಜಿ ಪ್ರಧಾನಿ ಚೌಧರಿ ಚರಣ್‌ ಸಿಂಗ್‌ ಜನ್ಮದಿನವನ್ನು ದೇಶದೆಲ್ಲೆಡೆ ಕಿಸಾನ್‌ ದಿವಸ್‌ ಆಚರಿಸುವ ಮೂಲಕ ಸಕಲ ಮಾನವ ಕೋಟಿಗೆ ಆಹಾರ ನೀಡುವ ಅನ್ನದಾತರನ್ನು ಸ್ಮರಿಸಲಾಗುತ್ತಿದೆ. ಬರಗಾಲ ಕಳೆದ ಮೂರು ವರ್ಷಗಳಿಂದ ರೈತರನ್ನು ಕಾಡುತ್ತಿದ್ದು, ಅಂಥ ಕಷ್ಟದ ಪರಿಸ್ಥಿತಿಯಲ್ಲಿಯೂ ಆತ್ಮ ವಿಶ್ವಾಸದಿಂದ ಆಹಾರ ಉತ್ಪಾದನೆ ಮಾಡಲು ಶ್ರಮಿಸುತ್ತಿದ್ದಾರೆ. ರೈತರು ಹಲವು ಸಂಕಷ್ಟದಲ್ಲಿದ್ದು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂದು ಹೇಳಿದರು.

ಸರ್ಕಾರ ಯಂತ್ರೋಪಕರಣಗಳಿಗೆ ಸಬ್ಸಿಡಿ: ಜಿಪಂ ಸದಸ್ಯ ಲಕ್ಷ್ಮೀನಾರಾಯಣ್‌ ಮಾತನಾಡಿ, ಸರ್ಕಾರ ಯಂತ್ರೋಪಕರಣಗಳಿಗೆ ಸಬ್ಸಿಡಿ ನೀಡುತ್ತಿದೆ. ರೈತರು ಕೃಷಿ ಹೊಂಡ ಮಾಡುವುದರ ಮೂಲಕ ಕೃಷಿ ಚಟುವಟಿಕೆ ಹೆಚ್ಚಿನ ರೀತಿ ಮಾಡಲು ಅನುಕೂಲವಾಗಿದೆ ಎಂದು ತಿಳಿಸಿದರು. 

ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಶ್ರೀನಿವಾಸಗೌಡ, ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ದಿನ್ನೂರು ವೆಂಕಟೇಶ್‌, ತಾಲೂಕು ಪಂಚಾಯಿತಿ ಸದಸ್ಯರಾದ ಕಾರಹಳ್ಳಿ ಶ್ರೀನಿವಾಸ್‌, ಚೈತ್ರಾ, ಶೈಲಜಾ, ಎಸ್‌. ಮಹೇಶ್‌, ಗೋಪಾಲಸ್ವಾಮಿ, ಭೀಮರಾಜ್‌, ತಾಪಂ ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸಮೂರ್ತಿ, ಜಿಲ್ಲಾ ಕಾಂಗ್ರೆಸ್‌ ಎಸ್‌ಸಿ ವಿಭಾಗದ ಮಾಜಿ ಅಧ್ಯಕ್ಷ ಎ. ಚಿನ್ನಪ್ಪ, ಕೃಷಿಕ ಸಮಾಜದ ನಿರ್ದೇಶಕ ಎಚ್‌.ಎಂ. ರವಿಕುಮಾರ್‌, ರಾಜೇಶ್‌, ಯಲುವಳ್ಳಿ ನಟರಾಜ್‌, ಮಾರೇಗೌಡ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್‌. ಹರೀಶ್‌, ಹಸಿರುಸೇನೆ ಅಧ್ಯಕ್ಷ ಪ್ರಕಾಶ್‌, ತಾಲೂಕು ಪ್ರಧಾನ ಕಾರ್ಯದರ್ಶಿ ರಮೇಶ್‌, ಕೃಷಿ ಅಧಿಕಾರಿ ಶ್ರೀನಿವಾಸ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next