Advertisement

ಪ್ರಾಮಾಣಿಕ ಸೇವೆಗೆ ಸಮಾಜದಲ್ಲಿ ಗೌರವ

11:22 AM Jul 09, 2019 | Suhan S |

ಬೀದರ: ವೈದ್ಯಕೀಯ ಸೇವೆ ಸಮಾಜದ ಎಲ್ಲ ಸೇವೆಗಳಿಗಿಂತ ಜವಾಬ್ದಾರಿಯುತ ಕರ್ತವ್ಯವಾಗಿದ್ದು, ಅದನ್ನು ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ನಿರ್ವಹಿಸಿದಲ್ಲಿ ಸಮಾಜದಲ್ಲಿ ಘನತೆ ಗೌರವ ಹೆಚ್ಚುತ್ತದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ರಾಜಯೋಗ ಕೇಂದ್ರ ಪಾವನಧಾಮದ ಸಂಚಾಲಕಿ ಬಿ.ಕೆ ಪ್ರತಿಮಾ ಸಹೋದರಿ ಹೇಳಿದರು.

Advertisement

ಜನವಾಡ ರಸ್ತೆಯಲ್ಲಿನ ಬ್ರಹ್ಮಕುಮಾರಿ ರಾಜಯೋಗ ಕೇಂದ್ರ ಪಾವನಧಾಮದ ಆವರಣದಲ್ಲಿ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲೆಯ ವೈದ್ಯರನ್ನು ಸನ್ಮಾನಿಸಿ ಅವರು ಮಾತನಾಡಿದರು. ವೈದ್ಯರು ಆಸ್ಪತ್ರೆಗಳಲ್ಲಿ ಭಗವಂತನ ಭಾವಚಿತ್ರ ಅಳವಡಿಸಿ, ತಮ್ಮ ದೈನಂದಿನ ವೃತ್ತಿ ಆರಂಭಕ್ಕೂ ಮುನ್ನ ದೇವರಿಗೆ ಪ್ರಾರ್ಥಿಸುವ ವಾಡಿಕೆ ಬೆಳೆಸಿಕೊಳ್ಳಬೇಕು. ಅಲ್ಲದೆ, ಆಸ್ಪತ್ರೆಯಲ್ಲಿನ ಸಿಬ್ಬಂದಿಗಳಿಗೂ ಅಧ್ಯಾತ್ಮದ ಅನುಭವ ಹಂಚಬೇಕು. ದಿನನಿತ್ಯ ಒತ್ತಡದ ಬದುಕಿನಲ್ಲೂ ಯೋಗ ಹಾಗೂ ಧ್ಯಾನಕ್ಕೆ ಮೊರೆ ಹೋಗಬೇಕು. ಸದಾ ಹಸನ್ಮುಖೀಯಾಗಿ ಕಾರ್ಯ ನಿರ್ವಹಿಸಿದರೆ ಎಲ್ಲಾ ರೋಗಿಗಳ ರೋಗ ಮುಕ್ತವಾಗುತ್ತದೆ ಎಂದ ಅವರು, ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯಗಳಲ್ಲಿ ಜರುಗುವ ರಾಜಯೋಗ ಶಿಬಿರದ ಲಾಭವನ್ನು ಪ್ರತಿಯೊಬ್ಬರೂ ಪಡೆಯಬೇಕು ಎಂದು ಹೇಳಿದರು. ಪಾವನಧಾಮದ ಪ್ರವರ್ತಕಿ ಬಿ.ಕೆ. ಗುರುದೇವಿ ಸಹೋದರಿ ಮಾತನಾಡಿ, ವೈದ್ಯರಾದವರು ತಮ್ಮ ವೃತ್ತಿಯನ್ನು ವಾಣಿಜ್ಯೀಕರಣವಾಗಿಸದೆ, ಸೇವಾನಿಷ್ಠೆಗೆ ಸೀಮಿತಗೊಳಿಸಬೇಕು. ಸರ್ಕಾರಿ ವೈದ್ಯರಾದವರು ಅದನ್ನು ನೌಕರಿ ಎಂದು ಭಾವಿಸದೇ ಸ್ವತಃ ತನ್ನ ಮನೆ ಕಾರ್ಯ ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಭಯ ಭೀತಿಯಿಂದ ಬರುವ ರೋಗಿಗಳಿಗೆ ಸಮಾಧಾನದ ಸಲಹೆ ನೀಡಬೇಕು. ರೋಗಿಗಳ ಅಂತರಾತ್ಮ ಅರಿಯುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಪ್ರೀತಿ, ಪ್ರೇಮ, ಭ್ರಾತೃತ್ವ ಹಾಗೂ ಮಾನವೀಯ ಮೌಲ್ಯಗಳು ನಮ್ಮ ಬದುಕಿನ ಉಸಿರಾದಲ್ಲಿ ದೇಶದಲ್ಲಿ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದರು.

ಗುದಗೆ ಮಲ್ಟಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ| ಚಂದ್ರಕಾಂತ ಗುದಗೆ, ಐಎಂಎ ಮಾಜಿ ಅಧ್ಯಕ್ಷೆ ಡಾ| ವಿಜಯಶ್ರೀ ಬಶೆಟ್ಟಿ ಮಾತನಾಡಿದರು. ಪ್ರವರ್ತಕ ಬಿ.ಕೆ. ಪ್ರಭಾಕರ ಕೋರವಾರ, ಡಾ| ವೈಜಿನಾಥ ತುಗಾಂವೆ, ಡಾ|ಶಿವರಾಜ ಬಿರಾದಾರ, ಡಾ| ಪ್ರೇಮಲತಾ ಪಾಟೀಲ, ಡಾ| ದೇವಕಿ ನಾಗೂರೆ, ಡಾ| ಆರತಿ ರಘು, ಡಾ| ಲಲಿತಮ್ಮ, ಡಾ|ವಿಜಯ ಪಾಂಡೆ, ಡಾ|ಕಾಶೀನಾಥ ಕಾಂಬಳೆ, ಡಾ|ಸಿ.ಆನಂದರಾವ್‌, ನಿವೃತ್ತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಗುಂಡಪ್ಪ ಚಿಲ್ಲರ್ಗಿ, ಡಾ| ರಘು ಕೃಷ್ಣಮೂರ್ತಿ, ಡಾ| ವಿಶ್ವನಾಥ ನಿಂಬೂರ್‌ ಸೇರಿದಂತೆ ಇತರೆ ವೈದ್ಯರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next