ಜೀಯು ಹೊನ್ನಾವರ
ಹೊನ್ನಾವರ: ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ವಿಶೇಷ ಸ್ಥಾನವಿದೆ. ಒಗ್ಗಟ್ಟು, ಎದೆಗಾರಿಕೆ ಹೋರಾಟದಲ್ಲಿ ಜಿಲ್ಲೆ ದೇಶಕ್ಕೆ ಮಾದರಿಯಾಗಿತ್ತು. ವಯಸ್ಸು, ಜಾತಿ, ಧರ್ಮ ಎಲ್ಲವನ್ನೂ ಮರೆತು ಒಂದಾಗಿ ಹೋರಾಡಿದ ಜಿಲ್ಲೆ ಉತ್ತರ ಕನ್ನಡ.
ಬ್ರಿಟಿಷ್ ಆಡಳಿತದ ಅಧಿಕಾರಿಗಳು ಜಿಲ್ಲೆಯ ಯಾವ ಭಾಗಕ್ಕೆ ಹೋಗುವುದಿದ್ದರೂ ತಕ್ಷಣ ಅಲ್ಲಿ ಎತ್ತಿನಗಾಡಿ ಒದಗಬೇಕಿತ್ತು. ಎಷ್ಟೇ ಕೆಲಸವಿದ್ದರೂ ಗಾಡಿಯವ ಬರಬೇಕಿತ್ತು. ಶಿರಸಿ ಚನ್ನಪಟ್ಟಣ ಬಜಾರದಲ್ಲಿ ಒಂದು ದಿನ ಗಾಡಿ ಹೋಗುತ್ತಿತ್ತು. ತಕ್ಷಣ ತಡೆದ ಪೊಲೀಸರು ಗಾಡಿಯವನನ್ನು ಕಾರವಾರಕ್ಕೆ ಕಾಗದ ಪತ್ರ ಸಾಗಿಸಿಕೊಡು ಎಂದು ಕರೆದರು. ಆತ ತನ್ನ ಹೆಂಡತಿಗೆ ಅನಾರೋಗ್ಯ ಔಷಧ ಒಯ್ದುಕೊಟ್ಟು ಬರುತ್ತೇನೆ ಎಂದರೂ ಕೇಳದ ಪೊಲೀಸರು ಎತ್ತನ್ನು ಥಳಿಸಿದರು. ಗಾಡಿಯವನನ್ನು ಕೆಳಗಿಳಿಸಿ ಥಳಿಸತೊಡಗಿದರು. ಆತ ಗೋಗರೆಯುತ್ತಿದ್ದ. ಅಡಿಕೆಮಂಡಿಯಲ್ಲಿ ಲೆಕ್ಕ ಬರೆಯುತ್ತಿದ್ದ ಅಕದಾಸ ಗಣಪತಿ ಭಟ್ಟರು ತಕ್ಷಣ ಇಳಿದುಬಂದು ಬಾರುಕೋಲು ಕಸಿದುಕೊಂಡು ಪೊಲೀಸರಿಗೆ ಬಾರಿಸಿ, ಅವರನ್ನು ಓಡಿಸಿದರು. ಗಣಪತಿ ಭಟ್ಟರಿಗೆ ಜೈಲಾಯಿತು. ಅವರ ಸಹೋದರ ನೌಕರಿ ಹೋಯಿತು. ಆ ಕಾಲದಲ್ಲಿ ಬ್ರಿಟಿಷರ ವಿರುದ್ಧ ಧ್ವನಿ ಎತ್ತುತ್ತಿರಲಿಲ್ಲ. ಅದೇ ಗಣಪತಿ ಭಟ್ಟರು ಸ್ವತಃ ವಿಧವೆಯನ್ನು ವಿವಾಹವಾಗಿ ನೂರಾರು ವಿಧವಾ ವಿವಾಹ ಮಾಡಿಸಿದರು. ಜಿ.ಆರ್. ಪಾಂಡೇಶ್ವರ ಅವರು ಅಕದಾಸ ಗಣಪತಿ ಭಟ್ಟರಿಂದ ಸ್ಫೂರ್ತಿ ಪಡೆದು ವಿಧವಾ ವಿವಾಹ ಮಾಡಿಕೊಂಡಿದ್ದರು.
ಜಿಲ್ಲೆಯ ಸ್ವಾತಂತ್ರ್ಯ ಯೋಧರ ಧೈರ್ಯವನ್ನು ಸರ್ದಾರ ವಲ್ಲಭಬಾಯಿ ಪಟೇಲ ಪ್ರಶಂಸಿಸಿದ್ದರು. ಬ್ರಿಟಿಷ್ ಪಾರ್ಲಿಮೆಂಟನಲ್ಲಿಯೂ ಈ ವಿಷಯ ಪ್ರಸ್ತಾಪಿತವಾಗಿತ್ತು. ಹೋರಾಟದ ಸ್ಥಿತಿಗತಿ ತಿಳಿಯಲು ಬಂದ ಬ್ರಿಟೀಷರು ಇಲ್ಲಿಯ ದೇಶಭಕ್ತಿಕಂಡು ಅಚ್ಚರಿಗೊಂಡಿದ್ದರು. ಜೈಲಿಗೆ ಹೋದವರ ಸ್ವತ್ತನ್ನು ರಕ್ಷಿಸಿದ ಹಸ್ಲರ ದೇವಿ ಕಥೆ ಕೇಳಿ ಗಾಂಧೀಜಿ ಸಿದ್ದಾಪುರಕ್ಕೆ ಬಂದಾಗ ಅವಳ ಕೊರಳಿಗೆ ಖಾದಿಮಾಲೆಯನ್ನು ತೊಡಿಸಿ ಇಂತವರಿಂದಲೇ ಜಗತ್ತು ನಡೆದಿದೆ ಎಂದು ಹೇಳಿದ್ದು ಎಲ್ಲರಿಗೆ ತಿಳಿದ ಕಥೆ. ಸಿದ್ದಾಪುರದ ತಿಮ್ಮಪ್ಪ ನಾಯಕರು ತಮ್ಮ ಶಿಕ್ಷಕ ವೃತ್ತಿಬಿಟ್ಟು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ್ದರು. ಸ್ವಾತಂತ್ರ್ಯಾನಂತರ ಗಾಂಧೀಜಿಯವರಲ್ಲಿ ಕರ್ನಾಟಕಕ್ಕೆ ಸಂದೇಶ ಕೊಡಿ ಎಂದಾಗ ತಿಮ್ಮಪ್ಪ ನಾಯಕರೇ ನಿಮಗೆ ಸಂದೇಶ ಎಂದಿದ್ದರು. ಸ್ವಾತಂತ್ರ್ಯ ನಂತರವೂ ಬಹುಕಾಲ ಜೀವಿಸಿ, ಮಾದನಗೇರಿಯಲ್ಲಿ ಕುಟೀರ ಕಟ್ಟಿಕೊಡಿದ್ದ ತಿಮ್ಮಪ್ಪ ನಾಯಕರು ಖಾದಿ ಸೇವಾ ಸಂಸ್ಥೆಗಳನ್ನು ಕಟ್ಟಿದರು. ಸಾವಿರಾರು ದಲಿತರ ಸೇವೆ ಮಾಡಿದರು.
31ದಿನ ಉಪವಾಸ ಸತ್ಯಾಗ್ರಹ ಮಾಡಿದ ಮಹಿಳೆಯರ ಮೇಲೆ ಬ್ರಿಟಿಷ್ ಗೂಂಡಾಗಳು ಅತ್ಯಾಚಾರಕ್ಕೆ ಯತ್ನಿಸಿದಾಗ ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಇಂಥಹ ಸಂದರ್ಭವನ್ನು ಎದುರಿಸಲು ಚೂರಿಯನ್ನು ಇಟ್ಟುಕೊಳ್ಳುತ್ತಿದ್ದರು. ರೈತರ ಭೂಮಿಮಾತ್ರವಲ್ಲ ಮನೆಯ ಪಾತ್ರೆಪಗಡೆಗಳನ್ನು ಜಪ್ತುಮಾಡಿದ್ದರು. ಆಸ್ತಿಕಳೆದುಕೊಂಡು ಚಹ ಅಂಗಡಿ ಇಟ್ಟುಕೊಂಡವರ ಕಪ್ಪು ಬಸಿ, ಕಿಟ್ಲಿ, ಎಮ್ಮೆಯನ್ನು ಜಫ್ತುಮಾಡಲಾಗಿತ್ತು. ಅಂಕೋಲಾದಲ್ಲಿ 250 ಕುಟುಂಬದ ಆಸ್ತಿ ಜಪ್ತಾಯಿತು. 248 ಜನರ ಆಸ್ತಿ ಪಾರ್‌ಪಿಟ್ ಆಯಿತು. 223ಜನ ಪುರುಷರು, 10ಮಹಿಳೆಯರು 2-6 ವರ್ಷ ಜೈಲಿಗೆ ಹೋದರು. ಪೊಲೀಸರ ಹಿಂಸೆಯಿಂದ 19 ಮಹಿಳೆಯರ ಕೈಕಾಲು ಮುರಿಯಿತು, 160 ಜನರಿಗೆ ಆರು ವರ್ಷ ಶಿಕ್ಷೆಯಾಯಿತು. 12ಮಹಿಳೆಯರು ಜೈಲಿಗೆ ಹೋದರು. 25 ಹೆಂಗಸರಿಗೂ ಗಾಯಗಳಾಯಿತು. ಕಟ್ಟಿಗೆ ಹೊರೆಯಲ್ಲಿ ಕರಪತ್ರಗಳ್ನು ಬಚ್ಚಿಟ್ಟುಕೊಂಡು ಕೂಲಿಕಾರ ಮಹಿಳೆಯರು ಮನೆಮನೆಗೆ ಮುಟ್ಟಿಸುತ್ತಿದ್ದರು. ಹೆಸರಾಂತ ಸ್ವಾತಂತ್ರ್ಯ ಹೋರಾಟಗಾರರಾದ ಸರ್ದಾರ ವೆಂಕಟರಾಮಯ್ಯ, ಶಂಕರರಾವ್ ಗುಲ್ವಾಡಿ, ಆರ್.ಆರ್. ದಿವಾಕರ, ದ.ಪ. ಕರ್ಮರ್ಕರ್, ಮಹಾದೇವಿತಾಯಿ ದೊಡ್ಮನೆ, ಸ.ಪ. ಗಾಂವ್ಕರ್, ಮೊದಲಾದವರಿಗೆ ಜಿಲ್ಲೆ ಕರ್ಮಭೂಮಿಯಾಗಿತ್ತು. ಶಿರಳಿಗೆ ಮಂಜುನಾಥ ರಾಮಚಂದ್ರ ಹೆಗಡೆ ಇವರ 5ಜನ ಸಹೋದರರನ್ನು, ಒಬ್ಬ ಸಹೋದರಿಯನ್ನು, ತಂದೆಯನ್ನು ಜೈಲಿಗೆ ಕಳಿಸಿದ್ದರು. ಇವರ 25 ಎಕರೆ ಭೂಮಿಯನ್ನು ಜಪ್ತುಮಾಡಿ 300ರೂಪಾಯಿಗೆ ಲಿಲಾವು ಮಾಡಿದ್ದರು. ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಅವರ ಸಂದರ್ಶನ ಮಾಡಿದಾಗ ದೇಶದ ಭ್ರಷ್ಟಾಚಾರ ಕಂಡು ನಾವು ಇದಕ್ಕಾಗಿ ಹೋರಾಡಿರಲಿಲ್ಲ ಎಂದಿದ್ದರು. ಗಾಂಧೀಜಿ ಕರೆನೀಡಿದ ಜಂಗಲ್ ಸತ್ಯಾಗ್ರಹ, ಉಪ್ಪಿನ ಸತ್ಯಾಗ್ರಹ ಸಹಿತ ಎಲ್ಲ ಹೋರಾಟದಲ್ಲಿ ಜಿಲ್ಲೆಯ ಜನ ಪಾಲ್ಗೊಂಡಿದ್ದಾರೆ.