Advertisement

ಮಾಹಿತಿ ಕಣಜವಾದ ಸೌಳಂಗ ಕ್ಲಸ್ಟರ್ ಸಂಪನ್ಮೂಲ ಕೇಂದ್ರ!

11:48 AM Dec 28, 2019 | Naveen |

ಹೊನ್ನಾಳಿ: ಶೈಕ್ಷಣಿಕ ಚಟುವಟಿಕೆಗಳಿಗೆ ಒತ್ತು ನೀಡುವ ಉದ್ದೇಶದಿಂದ ನಿರ್ಮಾಣಗೊಂಡಿರುವ ನ್ಯಾಮತಿ ತಾಲೂಕಿನ ಸೌಳಂಗ ಕ್ಲಸ್ಟರ್‌ ಸಂಪನ್ಮೂಲ ಕೇಂದ್ರದ ಕಟ್ಟಡ ನವೀಕರಣಗೊಂಡು ಶಿಕ್ಷಣ ಪ್ರೇಮಿಗಳನ್ನು ಆಕರ್ಷಿಸುತ್ತಿದೆ.

Advertisement

ಮನಸ್ಸಿದ್ದರೆ ಮಾರ್ಗ ಎನ್ನುವಂತೆ ಕೇಂದ್ರದ ಕಟ್ಟಡಕ್ಕೆ ಕಾಯಕಲ್ಪ ನೀಡಿ, ದಾರಿಹೋಕರು ಒಂದು ಬಾರಿ ಕಟ್ಟಡದ ಕಡೆಗೆ ಕಣ್ಣು ಹಾಯಿಸುವಂತೆ ಮಾಡಿದ್ದಾರೆ ಸವಳಂಗ ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿ ಜಿ.ಆರ್‌. ಮಹೇಶ್‌. ಈ ಹಿಂದೆ ಕ್ಲಸ್ಟರ್‌ ಸಂಪನ್ಮೂಲ ಕೇಂದ್ರ ಕಟ್ಟಡ ಸುಣ್ಣ, ಬಣ್ಣ ಹಾಗೂ ಮೂಲ ಸೌಲಭ್ಯ ಹೊಂದಿರಲಿಲ್ಲ. ಜಿ.ಆರ್‌. ಮಹೇಶ್‌ ಕೇಂದ್ರದ ಅಧಿ ಕಾರಿಯಾಗಿ ಬಂದ ನಂತರ ಕಟ್ಟಡದ ಪುನರುಜ್ಜೀವನಕ್ಕೆ ರೂಪುರೇಷೆ ಹಾಕಿಕೊಂಡು ಕಾರ್ಯೋನ್ಮುಖರಾದರು.

ಸರ್ಕಾರದಿಂದ ಅನುದಾನವಿಲ್ಲದೇ ಸುಣ್ಣ, ಬಣ್ಣ, ಗೋಡೆ ಬರಹ, ಫ್ಯಾನ್‌ಗಳು, ಟ್ಯೂಬ್‌ಲೈಟ್‌ಗಳು, ನೆಲಹಾಸು ಮುಂತಾದವುಗಳಿಗೆ ಬೇಕಾದ ಹಣ ಹೊಂದಿಸುವುದು ಹೇಗೆ ಎಂದು ಚಿಂತಿಸಿ, ಸರ್ಕಾರಿ ಪ್ರಾಥಮಿಕ ಹಾಗೂ ಅನುದಾನಿತ ಶಾಲಾ ಶಿಕ್ಷಕರಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸಹಾಯ ಕೋರಿ ಮನವಿ ಮಾಡಿದರು.

ಕೇಳುವ ಕೈ ಸ್ವತ್ಛವಾಗಿದ್ದರೆ ಕೊಡುಗೈ ದಾನಿಗಳಿಗೆ ಬರ ಇಲ್ಲ ಎನ್ನುವಂತೆ ಶಿಕ್ಷಕರು ನಾ ಮುಂದು, ತಾ ಮುಂದು ಎಂದು ನೂರು ರೂ.ನಿಂದ ಸಾವಿರ ರೂ.ವರೆಗೂ ದೇಣಿಗೆ ನೀಡಿದರು. ನ್ಯಾಮತಿ ಕರ್ಣಾಟಕ ಬ್ಯಾಂಕ್‌ ವತಿಯಿಂದ 12ಸಾವಿರ ರೂ. ದೇಣಿಗೆ ದೊರೆಯಿತು. ಹೀಗೆ, ವಿವಿಧ ಮೂಲಗಳಿಂದ ಬಂದ ಹಣದಿಂದ ಸಿಆರ್‌ಸಿ ಕಟ್ಟಡಕ್ಕೆ ಸುಣ್ಣ ಬಣ್ಣ ಮಾಡಿಸಿದ್ದಲ್ಲದೇ ಸುಭಾಷಿತ, ವಿವಿಧ ಉಕ್ತಿ, ಗೋಡೆ ಚಿತ್ರಗಳನ್ನು ಬರೆಸಲಾಗಿದೆ.

ಸಿಆರ್‌ಸಿ ಕಟ್ಟಡ ಪ್ರವೇಶಿಸುತ್ತಿದ್ದಂತೆ ಬಲಭಾಗದಲ್ಲಿ ಶಿಕ್ಷಣ ಇಲಾಖೆಯ ವರ್ಗೀಕರಣದ ಮಾಹಿತಿ ಬರೆಸಲಾಗಿದೆ. ಇದರಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಮಂತ್ರಿಯಿಂದ ಪ್ರಾರಂಭವಾಗಿ ಕೊನೆಯ ಹಂತದ ಪ್ರಾಥಮಿಕ ಶಾಲಾ ಶಿಕ್ಷಣದವರೆಗೆ ಮಾಹಿತಿ ಇದೆ. ಈ ಬರವಣಿಗೆಗೆ ತಾಲೂಕಿನ ಚಿತ್ರಕಲಾ ಶಿಕ್ಷಕರನ್ನು ಬಿಡುವಿನ ವೇಳೆಯಲ್ಲಿ ಬಳಸಿಕೊಳ್ಳಲಾಗಿದೆ.

Advertisement

ಒಳಗೋಡೆಗಳ ಮೇಲೆ ನ್ಯಾಮತಿ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿವರ ಮತ್ತು ಮಕ್ಕಳ ಸಂಖ್ಯೆಯನ್ನು ಬರೆಸುವ ಮೂಲಕ ತಾಲೂಕಿನ ಶಾಲೆಗಳ ಸಮಗ್ರ ಚಿತ್ರಣ ಲಭಿಸುವಂತೆ ನಿಗಾವಹಿಸಲಾಗಿದೆ. ಮಹಾತ್ಮರು, ದಾರ್ಶನಿಕರು, ಶಿಕ್ಷಣ ತಜ್ಞರು, ರಾಷ್ಟ್ರನಾಯಕರು, ಇಂಗ್ಲಿಷ್‌ ಭಾಷೆಯ ಪ್ರಮುಖ ಕವಿಗಳು, ಲೇಖಕರ ಚಿತ್ರಗಳನ್ನು ಬರೆಸಲಾಗಿದೆ. ಕಚೇರಿಯಲ್ಲಿ ನೀರಿನ ವ್ಯವಸ್ಥೆ, ಫ್ಯಾನ್‌, ಟ್ಯೂಬ್‌ಲೆ„ಟ್‌ಗಳ ವ್ಯವಸ್ಥೆ ಮಾಡಿರುವುದು ಪ್ರಶಂಸನೀಯವಾಗಿದೆ.

ಸಿಆರ್‌ಸಿ ಕೇಂದ್ರದ ಮುಖ್ಯ ಕೊಠಡಿಯಲ್ಲಿ ಕುಳಿತುಕೊಳ್ಳಲು ಸಾಕಷ್ಟು ಚೇರ್‌ಗಳ ವ್ಯವಸ್ಥೆ ಮಾಡಲಾಗಿದೆ. ಪ್ರಾಥಮಿಕ ಶಿಕ್ಷಣದ ಪ್ರಮುಖ ಕಲಿಕಾ ಹಂತಗಳಾದ ಅಕ್ಷರ ಚಾಪೆಯನ್ನು ನೆಲದ ಮೇಲೆ ರಚಿಸಲಾಗಿದೆ. ಗೋಡೆಗಳ ಮೇಲೆ ವಿವಿಧ ಪ್ರಾಣಿ-ಪಕ್ಷಿಗಳ ಚಿತ್ರಗಳು, ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ, ಸಿಸಿಇ ಮಾದರಿ ಪಾಠ ಯೋಜನೆ, ಶಿಕ್ಷಕರು ನಿರ್ವಹಿಸಬೇಕಾದ ವಿವಿಧ ದಾಖಲೆಗಳನ್ನು ಚಿತ್ರಿಸಲಾಗಿದೆ. ಇದು ಎಲ್ಲರನ್ನೂ ಆಕರ್ಷಿಸುತ್ತಿದೆ ಎನ್ನುತ್ತಾರೆ ಹೊನ್ನಾಳಿಯ ನಿಯೋಜಿತ ಬಿಆರ್‌ಪಿ ಆರ್‌.ಜೆ.ಅಪ್ಸರ್‌ ಅಹಮ್ಮದ್‌.

ಈ ಎಲ್ಲಾ ಕೆಲಸ ಕಾರ್ಯಗಳಿಗೆ ದಾನಿಗಳಿಂದ ಸಂಗ್ರಹಿಸಿದ 1 ಲಕ್ಷ ರೂ. ವೆಚ್ಚವಾಗಿದೆ. ತಾಲೂಕಿನ ಬ್ಯಾಂಕ್‌ಗಳು, ಶಿಕ್ಷಕರು, ಶಾಲೆಗಳು ಕೈಜೋಡಿಸಿದ್ದರಿಂದ ಸಿಆರ್‌ಸಿ ಕಚೇರಿ ಈಗ ಒಂದು ಸುಂದರ ಕಚೇರಿಯಾಗಿ ಮಾರ್ಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next