ಹೊನ್ನಾಳಿ: ತಂದೆಯೇ ಮಗಳಿಗೆ ಲಿವರ್ ನೀಡಿದ್ದ ಪ್ರಕರಣದಲ್ಲಿ ಲಿವರ್ ಕಸಿ ಮಾಡಿಸಿಕೊಂಡಿದ್ದ ಬಾಲಕಿ ಹಾಗೂ ಆಕೆಯ ತಂದೆಗೆ ಅಗತ್ಯ ಔಷಧ ನೀಡುವ ಮೂಲಕ ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಹಾಗೂ ಸಂಗಡಿಗರು ಮಾನವೀಯತೆ ಮೆರೆದಿದ್ದಾರೆ.
ತಾಲೂಕಿನ ಮಲೇಕುಂಬಳೂರು ಗ್ರಾಮದ ಬಸ್ ಏಜೆಂಟ್ ಆಗಿ ಕೆಲಸ ಮಾಡುತ್ತಿರುವ ಮಹಾವೀರ (46) ಅವರ ಪುತ್ರಿ ದೀಪಿಕಾ (15)
ಲಿವರ್ ಡ್ಯಾಮೇಜ್ ಆಗಿತ್ತು. ಎರಡು ವರ್ಷಗಳ ಹಿಂದೆ ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ದಾನಿಗಳ ನೆರವಿನಿಂದ 22 ಲಕ್ಷ ರೂ. ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ತಂದೆಯೇ ಮಗಳಿಗೆ ಲಿವರ್ ದಾನ ಮಾಡಿದ್ದರು.
ನಂತರ ತಂದೆ ಮತ್ತು ಮಗಳಿಗೆ ಔಷಧ ಹಾಗೂ ಮಾತ್ರೆಗಳ ಅವಶ್ಯಕತೆ ಇತ್ತು. ಆದರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಹಣ ಹೊಂದಿಸಲಾಗದೆ ಮಹಾವೀರ ಪರದಾಡುತ್ತಿದ್ದರು. ಈ ವಿಷಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಗಮನಕ್ಕೆ ಬಂತು. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ವಿಜಯೇಂದ್ರ ಹಾಗೂ ಸಂಗಡಿಗರು ದಾವಣಗೆರೆ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್ ಭಟ್ ಅವರಿಗೆ ಔಷಧ ಹಾಗೂ ಮಾತ್ರೆ ತಲುಪಿಸಿದರು. ಬುಧವಾರ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಲಿವರ್ ಕಸಿ ಮಾಡಿಸಿಕೊಂಡ ಬಾಲಕಿ ಸಂಬಂಧಿಕರಿಗೆ ಮಾತ್ರೆ ಹಾಗೂ ಔಷಧವನ್ನು ಹಸ್ತಾಂತರಿಸಿದರು.