Advertisement

ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಗೆ ಆಕ್ರೋಶ

11:25 AM Nov 01, 2019 | Naveen |

ಹೊನ್ನಾಳಿ: ಬೆನಕನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿ ಹೊರಗಡೆ ಖರೀದಿಸುವಂತೆ ವೈದ್ಯರು ಚೀಟಿ ಬರೆದು ಕೊಡುತ್ತಾರೆ. ಆಸ್ಪತ್ರೆಗೆ ಸರ್ಕಾರದಿಂದ ಔಷ ಧಿ ಬರುವುದಿಲ್ಲವೇ? ಹೆರಿಗೆಯಾದ ಸಂದರ್ಭದಲ್ಲಿ ವೈದ್ಯರು 1ರಿಂದ 2ಸಾವಿರ ರೂ. ಕೇಳುತ್ತಾರೆ ಎಂದು ದಲಿತ ಮುಖಂಡ ಹನುಮಂತಪ್ಪ ಆರೋಪಿಸಿದರು.

Advertisement

ಗುರುವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ತಾಲೂಕು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ಹಿತರಕ್ಷಣಾ ಜಾಗೃತಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಇದಕ್ಕೆ ದನಿಗೂಡಿಸಿದ ದಲಿತ ಮುಖಂಡರಾದ ತಮ್ಮಣ್ಣ, ದಿಡಗೂರು ರುದ್ರೇಶ್‌, ಮಂಜಪ್ಪ, ಕೆ.ಓ.ಹನುಮಂತಪ್ಪ, ರಾಜು ಹಾಗೂ ಇತರರು, ಈ ಸಮಸ್ಯೆ ಕೇವಲ ಬೆನಕನಹಳ್ಳಿ ಸರ್ಕಾರಿ ಆಸ್ಪತ್ರೆಗೆಡಿ ಸೀಮಿತವಾಗಿಲ್ಲ. ಹೊನ್ನಾಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿಯೂ ವೈದ್ಯರು ಹೊರಗೆ ಔಷಧಿ ಖರೀದಿಗೆ ಚೀಟಿ ಬರೆದು ಕೊಡುತ್ತಾರೆ ಎಂದು ದೂರಿದರು.

ಸಭೆಯಲ್ಲಿ ಹಾಜರಿದ್ದ ಜಿ.ಪಂ ಪ್ರಭಾರಿ ಅಧ್ಯಕ್ಷ ಸುರೇಂದ್ರನಾಯ್ಕ ತಾಲೂಕು ವೈದ್ಯಾಧಿಕಾರಿ ಡಾ| ಕೆಂಚಪ್ಪ ಅವರನ್ನು ತರಾಟೆಗೆ ತೆಗೆದುಕೊಂಡು ನಿಮ್ಮ ಆಸ್ಪತ್ರೆ ಸಿಬ್ಬಂದಿ ಮಾಡುವಂತಹ ಅವಘಡಗಳಿಗೆ ನೀವೇ ಜವಾಬ್ದಾರರಾಗುತ್ತೀರಿ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು.

ಸರ್ಕಾರಿ ಆಸ್ಪತ್ರೆಗಳು ಇರುವುದು ಬಡಬಗ್ಗರಿಗಾಗಿ. ಆದರೆ ವೈದ್ಯರೇ
ಹಣ ಕೇಳಿದರೆ ಸರ್ಕಾರಿ ಆಸ್ಪತ್ರೆಗಳು ಏಕೆ ಇರಬೇಕು. ಸರ್ಕಾರ ವೈದ್ಯರಿಗೆ ಎಲ್ಲಾ ಸೌಲಭ್ಯ ಕೊಟ್ಟರೂ ಬೇಕಾಬಿಟ್ಟಿ ಕೆಲಸ ಮಾಡುವುದು ಸಲ್ಲದು ಎಂದು ಹೇಳಿದರು.

ದಲಿತ ಮುಖಂಡ ದಿಡಗೂರು ರುದ್ರೇಶ್‌ ಮಾತನಾಡಿ, ತಾಲೂಕಿನ ಸರ್ಕಾರಿ ವಸತಿ ಶಾಲೆಗಳಲ್ಲಿ ಅವ್ಯವಸ್ಥೆ ಇದ್ದು ಇದನ್ನೆ ಬಂಡವಾಳವನ್ನಾಗಿಸಿಕೊಂಡ ತಾಲೂಕಿನ ಕನ್ನಡ ಪರ ಸಂಘಟನೆಗಳು ವಸತಿ ಶಾಲೆಗಳ ಮುಖ್ಯಸ್ಥರಿಂದ ಹಣ ವಸೂಲಿ ಮಾಡುವ ದಂಧೆ ಮಾಡುತ್ತಿವೆ. ಇದಕ್ಕೆ ಕಡಿವಾಣ ಹಾಕಲು ತಾಲೂಕು ಸಮಿತಿ ರಚಿಸಿ ಅವ್ಯವಸ್ಥೆ ಸರಿಪಡಿಸಬೇಕು ಎಂದು ಹೇಳಿದರು.

Advertisement

ದಲಿತ ಮುಖಂಡ ತಮ್ಮಣ್ಣ ಮಾತನಾಡಿ, ಚಪ್ಪಲಿ ದುರಸ್ತಿ ಮಾಡುವ 2ರಿಂದ 4 ಕುಟುಂಬಗಳು ಧೂಳು ಕುಡಿಯುತ್ತ ರಸ್ತೆ ಬದಿ ಚಪ್ಪಲಿ ದುರಸ್ತಿ ಮಾಡುತ್ತಿದ್ದಾರೆ. ಈಗಾಗಲೇ ಪ.ಪಂ ವತಿಯಿಂದ ಶೆಡ್‌ ಗಳನ್ನು ಅವರಿಗೆ ನೀಡಲಾಗಿದೆ. ಆದರೆ ಸೂಕ್ತ ಸ್ಥಳವನ್ನು ನೀಡಿಲ್ಲ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ.ಪಂ ಮುಖ್ಯಾ ಧಿಕಾರಿ ಎಸ್‌. ಆರ್‌.ವೀರಭದ್ರಯ್ಯ, ಫಲಾನುಭವಿಗಳು ಬಂದು ಕೇಳಿಕೊಳ್ಳಬೇಕು. ಆಗ ಸೂಕ್ತ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು.

ತಾಲೂಕಿನ ವಿವಿಧ ಗ್ರಾಮಗಳಿಗೆ ಕೆಎಸ್‌ ಆರ್‌ಟಿಸಿ ಬಸ್‌ ವ್ಯವಸ್ಥೆ ಮಾಡಬೇಕು ಹಾಗೂ ಪಟ್ಟಣದಲ್ಲಿ ಸಿಟಿ ಬಸ್‌ ಸಂಚಾರದ ವ್ಯವಸ್ಥೆ ಮಾಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು. ಇದಕ್ಕೆ ಉತ್ತರಿಸಿದ ಜಿ.ಪಂ ಪ್ರಭಾರಿ ಅಧ್ಯಕ್ಷ ಸುರೇಂದ್ರನಾಯ್ಕ, ಈಗಾಗಲೇ ಶಾಸಕರು ಗ್ರಾಮಾಂತರ ಸಾರಿಗೆ ವ್ಯವಸ್ಥೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿ ಸಿಟಿ ಸಂಚಾರದ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ತಹಶೀಲ್ದಾರ್‌ ತುಷಾರ್‌ ಬಿ ಹೊಸೂರು, ತಾ.ಪಂ ಇಒ ಗಂಗಾಧರಮೂರ್ತಿ, ಪಿಎಸ್‌ಐ ತಿಪ್ಪೇಸ್ವಾಮಿ, ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿ ಕಾರಿ ಕೆ.ಎಚ್‌. ಸದಾಶಿವಪ್ಪ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next