Advertisement

ಹೊನ್ನಮ್ಮ: ಚನ್ನಪಟ್ಟಣದ “ಚಿನ್ನ’ಮ್ಮ!

07:40 AM Sep 13, 2017 | Harsha Rao |

ತಿಥಿ ಸಿನಿಮಾದ ಸೆಂಚುರಿ ಗೌಡ ನೆನಪಿದ್ದಾರಲ್ವಾ? ಜಗುಲಿಯ ಮುಂದೆ ಕುಕ್ಕರಗಾಲಿನಲ್ಲಿ ಕುಳಿತು ಹೋಗಿ ಬರುವವರಿಗೆ ಬೈಯುತ್ತಾ ಇರುವ ಮುದುಕರು ಎಲ್ಲ ಊರಿನಲ್ಲೂ ಇದ್ದಾರೆ. ಕಿರಿಕಿರಿ ಮಾಡ್ಬೇಡಿ ಅಂತ ಮಕ್ಕಳಿಂದ ಬೈಸಿಕೊಳ್ಳುತ್ತ, ರಾಮಾ- ಕೃಷ್ಣಾ ಅಂತ ಜಪ ಮಾಡುತ್ತಾ, ಕವಳ ಕುಟ್ಟುತ್ತ ಮೊಮ್ಮಕ್ಕಳಿಗೆ ಪುರಾಣದ ಕಥೆ ಹೇಳುವ ವಯಸ್ಸದು. ಆದರೆ ಈ ಅಜ್ಜಿ ಹಾಗಲ್ಲ. ಈಕೆಯ ವಯಸ್ಸಿಗೂ, ಉತ್ಸಾಹಕ್ಕೂ ತಾಳಮೇಳವೇ ಇಲ್ಲ. ಏನಾದರೂ ಸಮಸ್ಯೆ ಕಾಡಿದರೆ ಜಗುಲಿಕಟ್ಟೆಯಲ್ಲಿ ಕುಳಿತು ಗೊಣಗುವುದಿಲ್ಲ, ಬದಲಿಗೆ ಜಿಲ್ಲಾಧಿಕಾರಿ ಕಚೇರಿಯ ಬಾಗಿಲು ತಟ್ಟಿ ಬರುತ್ತಾರೆ.  

Advertisement

ಆಕೆಯ ಹೆಸರು ಹೊನ್ನಮ್ಮ. ವಯಸ್ಸು 86 ವರ್ಷ, ಹುಮ್ಮಸ್ಸು 30ರಷ್ಟು. ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲೂಕಿನ ದೊಡ್ಡಮಳೂರು ಗ್ರಾಮದಲ್ಲಿ ವಾಸ. ಒಬ್ಬಂಟಿಯಾಗಿ ಬದುಕುತ್ತಿರುವ ಗಟ್ಟಿ ವ್ಯಕ್ತಿತ್ವ ಅವರದ್ದು. ವರ್ಷ ಎಂಬತ್ತಾದರೂ ತುಂಬಾ ಸ್ವತಂತ್ರವಾಗಿ, ಒಬ್ಬರೇ ಎಲ್ಲಿಗೆ ಬೇಕಾದರೂ ಹೋಗಿ ಬರುತ್ತಾರೆ. ವರ್ಷದ ಹಿಂದೆ ಹೊನ್ನಮ್ಮನಿಗೆ ಊರಿನಲ್ಲಿ ಕೆಲವರಿಂದ ಸಮಸ್ಯೆ ಎದುರಾಯ್ತು. ಆಕೆ ಹೆದರಿಕೊಳ್ಳದೆ ಸೀದಾ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಡಿ.ಸಿ. ಮುಂದೆ ಕಷ್ಟ ಹೇಳಿಕೊಂಡರು. ಜಿಲ್ಲಾಧಿಕಾರಿ ಮಮತಾ ಗೌಡ ಕೂಡಲೇ ಅಧಿಕಾರಿಗಳೊಂದಿಗೆ ಮಾತಾಡಿ ಸಮಸ್ಯೆ ಪರಿಹರಿಸಿದರು. 
ಅಜ್ಜಿ ಅಷ್ಟಕ್ಕೇ ಸುಮ್ಮನಾಗಿಲ್ಲ. ಈಗಲೂ ಊರಿನ ಸಮಸ್ಯೆಗಳನ್ನು ಸರ್ಕಾರಿ ಅಧಿಕಾರಿಗಳ ಗಮನಕ್ಕೆ ತಂದು, ಶೀಘ್ರವಾಗಿ ಪರಿಹರಿಸಿ ಎಂದು ವಿನಯದಿಂದ ತಾಕೀತು ಮಾಡುತ್ತಾರೆ. ಹತ್ತನೇ ತರಗತಿ ಹುಡುಗಿಯೊಬ್ಬಳ ವಿದ್ಯಾಭ್ಯಾಸಕ್ಕೆ ನೆರವಾಗುವಂತೆ ಡಿ.ಸಿ.ಗೆ ಮನವಿ ಮಾಡಿದ್ದಾರೆ. ಯಾರಾದರೂ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಬೇಕೆಂದಿದ್ದರೆ ಅವರ ಜೊತೆಗೆ ಅಥವಾ ಯಾರಿಗಾದರೂ ಸಮಸ್ಯೆಯಿದ್ದರೆ ಅವರನ್ನು ಕರೆದುಕೊಂಡು ಹೊನ್ನಮ್ಮ ಡಿ.ಸಿ. ಆಫೀಸಿಗೆ ಹೋಗುತ್ತಿರುತ್ತಾರೆ. ದೊಡ್ಡಮಳೂರಿನಿಂದ ಜಿಲ್ಲಾಕೇಂದ್ರಕ್ಕೆ 15-18 ಕಿ.ಮೀ. ಒಬ್ಬಂಟಿಯಾಗಿ ಬಸ್‌ನಲ್ಲೇ ಓಡಾಡುವ ಆಕೆಯ ಉತ್ಸಾಹಕ್ಕೆ ಶರಣು ಹೇಳಲೇಬೇಕು. 

ಹತ್ತನೇ ವರ್ಷಕ್ಕೆ ಮದ್ವೆ!
“ಏನಜ್ಜಿ ಈ ವಯಸ್ಸಲ್ಲೂ ಇಷ್ಟೊಂದೆಲ್ಲಾ ಓಡಾಡ್ತೀರ? ಏನ್‌ ಓದಿದ್ದೀರಿ?’ ಅಂತ ಮಾತಾಡಿಸಿದಾಗ, “ಅಯ್ಯೋ ನಂಗೆ ಮದ್ವೆ ಆದಾಗ ಬರೀ 10 ವರ್ಷ. ಇನ್ನು ಓದೋದೆಲ್ಲಿಂದ? ನಾಕೋ, ಐದೋ ಕ್ಲಾಸಲಿದ್ದಾಗ್ಲೆà ಮದ್ವೆ ಮಾಡಿºಟ್ರಾ. ಮಗ್ಗಿಪುಸ್ತಕ, ಪಾಟೀಚೀಲಕ್ಕೆ ಓದು ಮುಗೀತು’ ಅಂತಾರೆ ಹೊನ್ನಮ್ಮ. ಗಂಡ ತೀರಿ ಹೋಗಿದ್ದಾರೆ. ಹೆಣ್ಣುಮಕ್ಕಳಿಗೆ ಮದುವೆಯಾಗಿದೆ. ಈಗ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ. 

ಜಿಲ್ಲಾಧಿಕಾರಿ ಮಮತಾ ಗೌಡ ಅವರಿಗೂ ಅಜ್ಜಿಯ ಹುಮ್ಮಸ್ಸನ್ನು ನೋಡಿ ಅಚ್ಚರಿ ಮತ್ತು ಖುಷಿ. ಅವರ ಸಮಸ್ಯೆಗಳಿಗೆ ಖುದ್ದಾಗಿ ಸ್ಪಂದಿಸಿದ್ದು, ಆಕೆಯಿರುವಲ್ಲಿಗೇ ಹೋಗಿ ಕಾಟ ಕೊಟ್ಟವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

“ಹೊನ್ನಮ್ಮಜ್ಜಿ ಈ ವಯಸ್ಸಿನಲ್ಲೂ ಇಂಡಿಪೆಂಡೆಂಟ್‌, ಎನರ್ಜಿಟಿಕ್‌ ಆಗಿರೋದನ್ನು ನೋಡಿದ್ರೆ ತುಂಬಾ ಖುಷಿಯಾಗುತ್ತೆ. ಆಫೀಸಿಗೆ ಆಗಾಗ ಬರುತ್ತಿರುತ್ತಾರೆ. ಅವರ ಉತ್ಸಾಹ, ಜನಪರ ಕಾಳಜಿ ಎಲ್ಲರಿಗೂ ಮಾದರಿಯಾಗಲಿ’.

Advertisement

-ಮಮತಾ ಗೌಡ, ರಾಮನಗರ ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next