ಹೊನ್ನಾಳಿ: ತಾಲೂಕಿನ ಸುಂಕದಕಟ್ಟೆ ಗ್ರಾಮದ ಶ್ರೀ ಮಂಜುನಾಥ ಸ್ವಾಮಿ ಹಾಗೂ ನರಸಿಂಹ ಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯ ಗುರುವಾರ ತಹಶೀಲ್ದಾರ್ ತುಷಾರ್ ಬಿ. ಹೊಸೂರ್, ಕಂದಾಯ ಇಲಾಖೆ ಸಿಬ್ಬಂದಿ, ಪ್ರಧಾನ ಅರ್ಚಕ ರಾಜುಸ್ವಾಮಿ ಹಾಗೂ ದೇವಸ್ಥಾನ ಸಮಿತಿ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದು ಒಟ್ಟು 30,82,750 ರೂ. ಸಂಗ್ರಹವಾಗಿದೆ.
ದೇವಸ್ಥಾನವಾದ ಹುಂಡಿಯನ್ನು ಪ್ರತಿ 4 ತಿಂಗಳಿಗೊಮ್ಮೆ ಎಣಿಕೆ ಮಾಡಲಾಗುತ್ತದೆ ಎಂದು ತಹಶೀಲ್ದಾರ್ ತುಷಾರ್ ಬಿ. ಹೊಸೂರ್ ಹೇಳಿದರು. ಹುಂಡಿಯ ಹಣವನ್ನು ಹೊನ್ನಾಳಿಯ ಕೆನರಾ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಇದನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ದೇವಸ್ಥಾನದ ಗೋಪುರ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಅದೇ ರೀತಿ 50 ಲಕ್ಷ ರೂ. ವೆಚ್ಚದಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದ ಸಮುದಾಯ ಭವನ, ಊಟದ ಹಾಲ್ ಕೂಡಾ ನಿರ್ಮಾಣಗೊಂಡಿದೆ ಎಂದು ದೇವಸ್ಥಾನ ಸಮಿತಿಯ ಪದಾಧಿ ಕಾರಿಗಳು ಈ ಸಂದರ್ಭದಲ್ಲಿ ವಿವರಿಸಿದರು.
ಜನಸಾಮಾನ್ಯರ ಅನುಕೂಲಕ್ಕಾಗಿ ರಾಜ್ಯ ಸರಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿರುವ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮ ದೇವಸ್ಥಾನದಲ್ಲಿ ಮೇ ತಿಂಗಳ 24ರಂದು ನಡೆಯಲಿದೆ. ಇದರಲ್ಲಿ ವಿವಾಹ ಆಗಲಿಚ್ಛಿಸುವವರು ಹೆಸರು ನೋಂದಾಯಿಸಲು ಏ.24 ಕೊನೆಯ ದಿನವಾಗಿದೆ. ಆಸಕ್ತರು ದೇವಸ್ಥಾನದ ಕಚೇರಿಯಲ್ಲಿ ಅರ್ಜಿ ಪಡೆದು ಅಗತ್ಯ ದಾಖಲೆ ಮತ್ತು ಮಾಹಿತಿಗಳೊಂದಿಗೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಲ್ಲಿಸಬಹುದು ಎಂದು ಪ್ರಧಾನ ಅರ್ಚಕ ರಾಜುಸ್ವಾಮಿ ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 08188251025 ಸಂಪರ್ಕಿಸಬಹುದು. ನ್ಯಾಮತಿ ತಾಲೂಕು ತಹಶೀಲ್ದಾರ್ ತನುಜಾ ಸೌದತ್ತಿ, ದೇವಸ್ಥಾನ ಸಮಿತಿಯ ಅಧ್ಯಕ್ಷ ಎಸ್.ಎಚ್. ನರಸಪ್ಪ, ಪದಾಧಿಕಾರಿಗಳಾದ ಡಿ.ಬಸಪ್ಪ, ಎಸ್.ಕೆ.ಕರಿಯಪ್ಪ, ಶಿರಸ್ತೇದಾರ್
ಶ್ರೀನಿವಾಸ್, ರೆವಿನ್ಯೂ ಇನ್ಸ್‌ಪೆಕ್ಟರ್ ಹಾಗೂ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಗುರುಪ್ರಸಾದ್, ಮುಜರಾಯಿ ಇಲಾಖೆಯ ವಿಷಯ ನಿರ್ವಾಹಕಿ ರೇಣುಕಮ್ಮ, ಗ್ರಾಮ ಲೆಕ್ಕಾಧಿಕಾರಿ ಮೌನೇಶ್, ಚೆಲುವರಾಜ್, ಪ್ರಧಾನ ಅರ್ಚಕರಾದ ರಾಜುಸ್ವಾಮಿ, ಹೊನ್ನಾಳಿ ಕೆನರಾ ಬ್ಯಾಂಕಿನ ಸಿಬ್ಬಂದಿ ರಾಮಣ್ಣ ಉಪಸ್ಥಿತರಿದ್ದರು .