ಹೊನ್ನಾಳಿ: ಸಾರ್ವಜನಿಕರು ಅಧಿಕ ವೊಲ್ಟೇಜ್ ವಿದ್ಯುತ್ ಮಾರ್ಗದ ಸಮೀಪ
ನಿಲ್ಲಬಾರದು. ತಾತ್ಕಾಲಿಕ ಕಟ್ಟಡ, ಟೆಂಟ್ ಗಳನ್ನು ಕಟ್ಟಬಾರದು ಎಂದು ಜಿಪಂ ಸದಸ್ಯ ಎಂ.ಆರ್. ಮಹೇಶ್ ಹೇಳಿದರು.
ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಗುರುವಾರ ಹೊನ್ನಾಳಿ ಹಾಗೂ ನ್ಯಾಮತಿ ಬೆಸ್ಕಾಂ ಇಲಾಖೆಯು ಸಾರ್ವಜನಿಕರಿಗೆ ವಿದ್ಯುತ್ ಸುರಕ್ಷತೆ ಬಗ್ಗೆ ಹಮ್ಮಿಕೊಂಡಿದ್ದ ಅರಿವು ಮೂಡಿಸುವ ಬೀದಿನಾಟಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯುತ್ ಸುರಕ್ಷತೆಯತ್ತ ಗಮನ ಹರಿಸಬೇಕು. ಸಾರ್ವಜನಿಕರು ಮನೆಯ ಮುಂಭಾಗದಲ್ಲಿ ಇರುವ ವಿದ್ಯುತ್ ಕಂಬಕ್ಕೆ ದನ-ಕರು, ಮೇಕೆ, ಮೊದಲಾದ ಸಾಕುಪ್ರಾಣಿಗಳನ್ನು ಕಟ್ಟಬಾರದು. ಮಕ್ಕಳು ವಿದ್ಯುತ್ ತಂತಿಗಳನ್ನು ನೋಡಿಕೊಂಡು ಗಾಳಿಪಟ ಹಾರಿಸಬೇಕು. ವಿದ್ಯುತ್ ತಂತಿಗೆ ಸಿಲುಕಿರುವ ಗಾಳಿಪಟ ತೆಗೆಯಲು ಹೋಗಿ ಮಕ್ಕಳು ಸಾವನ್ನಪ್ಪಿರುವ ಉದಾಹರಣೆಗಳಿವೆ. ಪೋಷಕರು ಮಕ್ಕಳ ಬಗ್ಗೆ ಜಾಗೃತೆ ವಹಿಸಬೇಕು ಎಂದು ಸಲಹೆ ನೀಡಿದ ಅವರು, ವಿದ್ಯುತ್ ಸುರಕ್ಷತೆ ಅರಿವು ಕಾರ್ಯಕ್ರಮ ತಾಲೂಕು ಮಟ್ಟದ ನಂತರ ಹೋಬಳಿ, ಗ್ರಾಮಗಳಲ್ಲಿಯೂ ನಡೆಯಬೇಕು ಎಂದರು.
ಬೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ರವಿಕಿರಣ್ ಮಾತನಾಡಿ, ಸಾರ್ವಜನಿಕರು ವಿದ್ಯುತ್‌ನ್ನು ಮಿತವಾಗಿ ಬಳಸಬೇಕು. ಮೊಬೈಲ್ ಚಾರ್ಜಿಂಗ್
ಮಾಡುವಾಗ ಬಳಸಬಾರದು. ನಿಮ್ಮ ಮನೆಯ ಹತ್ತಿರ ವಿದ್ಯುತ್ ಕಂಬದ ಲೈನ್‌ಗಳು ಹರಿದು ಕೆಳಗೆ ಬಿದ್ದಿದ್ದರೆ ತಕ್ಷಣ ಇಲಾಖೆಗೆ ತಿಳಿಸಿ ಎಂದ ಅವರು, ವಿದ್ಯುತ್ ಅವಘಡಗಳು ನಡೆದರೆ 1912 ಸಹಾಯವಾಣಿ ಕರೆ ಮಾಡಬೇಕು ಎಂದರು.
ಅನ್ವೇಷಕರ ಆರ್ಟ್ ಫೌಂಡೇಷನ್ ಕಲಾ ತಂಡದವರು ಬೀದಿನಾಟಕದ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಅರಬಗಟ್ಟೆ ತಾ.ಪಂ ಸದಸ್ಯ ವಿಜಯಕುಮಾರ, ನ್ಯಾಮತಿ ಬೆಸ್ಕಾಂ ಇಲಾಖೆ ಎಇಇ ಬಿ.ಕೆ. ಶ್ರೀನಿವಾಸ್, ಕಲಾ ತಂಡದ ಪ್ರಮುಖರಾದ ಸಿದ್ದರಾಜು, ಶಂಭುಲಿಂಗ, ದೀಪಕ್, ಮಂಜುನಾಥ್, ರಾಕೇಶ್, ತಿಪ್ಪೇಶ್, ಸುರೇಶ್, ಹೊನ್ನಾಳಿ ಅಭಿವ್ಯಕ್ತಿ ಕಲಾತಂಡದ ಮಲ್ಲಿಕಾರ್ಜನಸ್ವಾಮಿ ಇದ್ದರು.