ಹೊನ್ನಾಳಿ: ನ್ಯಾಮತಿ ತಾಲೂಕಿನ ಕೆಂಚಿಕೊಪ್ಪ ಗ್ರಾಮದ ಆರಾಧ್ಯ ದೇವತೆಗಳಾದ ಮಾಯಮ್ಮ, ಮರಿಯಮ್ಮ ದೇವಿಯರ ಜೋಡಿ ಸಿಡಿಹಬ್ಬಕ್ಕೆ ವಾರದಿಂದ ಭರದ ಸಿದ್ಧತೆಗಳು ನಡೆದಿವೆ.
ಜ.28ರಂದು ಮಂಗಳವಾರ ಮಧ್ಯಾಹ್ನ 1.30ರಿಂದ ಪ್ರಾರಂಭವಾಗುವ ಜೋಡಿ ಸಿಡಿಹಬ್ಬ ಸಂಜೆ 5.30ರವರೆಗೆ ಪಾರಂಪರಿಕ ಶ್ರದ್ಧಾ-ವೈಭವಗಳಿಂದ ಸಹಸ್ರಾರು ಜನರ ಸಮ್ಮುಖದಲ್ಲಿ ನೆರವೇರಲಿದೆ. ಹರಿಹರ ತಾಲೂಕು ನಂದಿಗುಡಿ ಬೃಹನ್ಮಠದ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜೋಡಿ ಸಿಡಿಹಬ್ಬಕ್ಕೆ ಚಾಲನೆ ದೊರೆಯಲಿದೆ.
ಮಾಯಮ್ಮ, ಮರಿಯಮ್ಮ ದೇವಿಯರ ಜೋಡಿ ಸಿಡಿಹಬ್ಬಕ್ಕೆ ಕೆಂಚಿಕೊಪ್ಪ ಗ್ರಾಮ ನವ ವಧುವಿನಂತೆ ಸಿಂಗಾರಗೊಳ್ಳುತ್ತಿದ್ದು, ಈಗಾಗಲೇ ಚುಂಚನಕಟ್ಟೆ ಜಾತ್ರೆಯಿಂದ ಇಪ್ಪತ್ತು ಜೋಡಿ ಹೋರಿಗಳನ್ನು ತರಲಾಗಿದೆ. ಇವುಗಳ ಬೆಲೆ ಪ್ರತಿ ಜೋಡಿಗೆ 1.90-2 ಲಕ್ಷ ರೂ.ವರೆಗಿದೆ. ಗ್ರಾಮದ ಹುತ್ತೇಶ್ವರ ಸ್ವಾಮಿ ದೇವಸ್ಥಾನದ ಬಳಿ ಇರುವ ಮಾಯಮ್ಮ, ಮರಿಯಮ್ಮ ದೇವಿಯರ ದೇವಸ್ಥಾನವನ್ನು ಸುಮಾರು 3 ಲಕ್ಷ ರೂ. ವೆಚ್ಚದಲ್ಲಿ ಸುಣ್ಣ-ಬಣ್ಣಗಳಿಂದ ಅಲಂಕರಿಸಲಾಗಿದೆ.
ಕೆಂಚಿಕೊಪ್ಪ ಗ್ರಾಮದ ಮ್ಮಲಿಂಗೇಶ್ವರಸ್ವಾಮಿ ದೇವಸ್ಥಾನದಿಂದ ಹೊರಡುವ ಜೋಡಿ ಸಿಡಿ ಉತ್ಸವ ಗ್ರಾಮದ ಹೊರವಲಯದ ಸರ್ಕಾರಿ ಪ್ರೌಢಶಾಲೆಯ ಪಕ್ಕದ ಮಾರ್ಗದಲ್ಲಿ ಊರನ್ನು ಪ್ರದಕ್ಷಿಣೆ ಹಾಕಿ, ತುಗ್ಗಲಹಳ್ಳಿ ಕೆಂಚಿಕೊಪ್ಪ ಮಾರ್ಗದಲ್ಲಿರುವ ಸಿಡಿ ಉತ್ಸವದ ರಾಜಮಾರ್ಗದಲ್ಲಿ ಆಗಮಿಸಿ ಮಾಯಮ್ಮ, ಮರಿಯಮ್ಮ ದೇವಿಯರ ದೇವಸ್ಥಾನ ತಲುಪಲಿದೆ. ಜೋಡಿ ಸಿಡಿ ಬಂಡಿಗಳು ಮೂರು ಬಾರಿ ದೇವಿಯರ ದೇವಸ್ಥಾನವನ್ನು ಪ್ರದಕ್ಷಿಣೆ ಹಾಕುವುದರೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.
ಕೆಂಚಿಕೊಪ್ಪ ಗ್ರಾಮದಲ್ಲಿ ಊರಿನ ಗೌಡರ ಬಂಡಿ ಮತ್ತು ರೈತರ ಬಂಡಿ ಎಂಬುದಾಗಿ ಎರಡು ಸಿಡಿಬಂಡಿಗಳು ಉತ್ಸವದಲ್ಲಿ ಪಾಲ್ಗೊಳ್ಳುತ್ತವೆ. ಉಪವಾಸ ವ್ರತ, ನಿಯಮ-ನಿಷ್ಠೆ ಪರಿಪಾಲಿಸುವ ಇಬ್ಬರು ವ್ಯಕ್ತಿಗಳು ಸಿಡಿ ಆಡುತ್ತಾರೆ. ಗ್ರಾಮದ ಸುತ್ತ ಸಿಡಿ ಬಂಡಿ ಸಂಚರಿಸುವ ವೇಳೆ ಈ ವ್ಯಕ್ತಿಗಳು ದೇವರ ಪದ ಹಾಡುತ್ತಾ, ಅಕ್ಕಿಯನ್ನು ದಾರಿಯುದ್ದಕ್ಕೂ ಎರಚುತ್ತಾ ಸಿಡಿ ಆಡುತ್ತಾರೆ. ಗ್ರಾಮ ಸುಭಿಕ್ಷವಾಗಲಿ, ಏನೂ ತೊಂದರೆ ಬಾರದಂತೆ ದೇವಿಯರು ನಮ್ಮನ್ನು ರಕ್ಷಿಸಲಿ ಎಂಬ ಉದ್ದೇಶದಿಂದ ಈ ಹಬ್ಬವನ್ನು ಪಾರಂಪರಿಕ ಶ್ರದ್ಧಾಭಕ್ತಿಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಒಂದೊಂದು ಸಿಡಿ ಬಂಡಿಗೆ ಐದು ಜೋಡಿ ಹೋರಿಗಳನ್ನು ಕಟ್ಟಲಾಗುತ್ತದೆ. ಹೀಗೆ ಸಾಗುವ ಸಿಡಿ ಬಂಡಿಯ ದಾರಿಯನ್ನು ಶುಚಿಗೊಳಿಸುವುದು, ಅಕ್ಕಪಕ್ಕದ ಗಿಡಗಂಟಿಗಳನ್ನು ಕತ್ತರಿಸುವುದು ಮತ್ತಿತರ ಕಾರ್ಯಗಳನ್ನು ಗ್ರಾಮಸ್ಥರು ಮಾಡುತ್ತಿದ್ದಾರೆ. ಗ್ರಾಮದ ವಿಶ್ವಕರ್ಮ ಜನಾಂಗದ ಮಂಜುನಾಥಾಚಾರ್ ಮತ್ತು ಅಣ್ಣಪ್ಪಾಚಾರ್ ಸಿಡಿ ಬಂಡಿ ರೆಡಿ ಮಾಡುವ ಕಾರ್ಯದಲ್ಲಿ ಬಿಜಿಯಾಗಿದ್ದಾರೆ. ಹೋರಿಗಳನ್ನು ಪ್ರತಿ ದಿನವೂ ಅಲಂಕರಿಸುವುದು, ಪೂಜಿಸುವುದರಲ್ಲಿ ಗ್ರಾಮದ ಯುವಕರು ನಿರತರಾಗಿದ್ದಾರೆ. ಸಿಡಿ ಬಂಡಿ ಉತ್ಸವ ಸಂಚರಿಸುವ ಮಾರ್ಗದಲ್ಲಿ ಹೋರಿಗಳನ್ನು ಕರೆದೊಯ್ದು ರೂಢಿ ಮಾಡಿಸುವ ಕಾರ್ಯವೂ ಭರದಿಂದ ಸಾಗಿದೆ.
ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳು ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಸಹಸ್ರಾರು ಜನರು ಮಾಯಮ್ಮ, ಮರಿಯಮ್ಮ ದೇವಿಯರ ಜೋಡಿ ಸಿಡಿಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ದೇವಿಯರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಿಹಿ ಭೋಜನ ಸವಿಯುತ್ತಾರೆ.