Advertisement

ತುಂಗಾ ನಾಲೆ ಕಾಮಗಾರಿ ವೀಕ್ಷಣೆ

05:41 PM May 07, 2019 | Naveen |

ಹೊನ್ನಾಳಿ: ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ತುಂಗಾ ನಾಲಾ ಆಧುನೀಕರಣದಂತಹ 348 ಕೋಟಿ ರೂ. ವೆಚ್ಚದ ಮಹಾತ್ವಾಕಾಂಕ್ಷಿ ಕಾಮಗಾರಿಗೆ ಯಡಿಯೂರಪ್ಪನವರು ಅಂದಿನ ಸಚಿವ ಸಂಪುಟದಲ್ಲಿ ಆಡಳಿತಾತ್ಮಕ ಮಂಜೂರಾತಿ ನೀಡಿ ಜಾರಿಗೊಳಿಸಿದ್ದರು. ನಾಲಾ ಆಧುನೀಕರಣದಿಂದ ಕೊನೆಯ ಭಾಗದ ಹೊಲಗದ್ದೆಗಳಿಗೆ ನೀರು ಸರಾಗವಾಗಿ ಹರಿದು ರೈತರ ಬಾಳು ಹಸನಾಗಲಿದೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

Advertisement

ನ್ಯಾಮತಿ ತಾಲೂಕಿನ ಬಿಜೋಗಟ್ಟೆ ಗ್ರಾಮದ ಬಳಿ ಹಾದು ಹೋಗಿರುವ ತುಂಗಾ ನಾಲೆಯ ಆಧುನೀಕರಣ ಕಾಮಗಾರಿ ಪ್ರಗತಿಯನ್ನು ಸೋಮವಾರ ವೀಕ್ಷಿಸಿ ಅವರು ಮಾತನಾಡಿದರು.

ಕಳೆದ ಹಲವಾರು ವರ್ಷಗಳಿಂದ ತುಂಗಾ ನಾಲೆಗಳಲ್ಲಿ ಸಂಪೂರ್ಣ ಹೂಳು ತುಂಬಿ ಅಚ್ಚುಕಟ್ಟು ವ್ಯಾಪ್ತಿಯ ರೈತರ ಹೊಲಗದ್ದೆಗಳಿಗೆ ಸರಾಗವಾಗಿ ನೀರು ಹರಿಯದೆ ರೈತರಿಗೆ ಸಮಸ್ಯೆಯಾಗಿತ್ತು. ನನ್ನ ಹಿಂದಿನ ಶಾಸಕತ್ವದ ಅವಧಿಯಲ್ಲಿ ತುಂಗಾ ನಾಲಾ ಆಧುನೀಕರಣಗೊಳಿಸುವಂತೆ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಮಾಡಿದ ಫಲವಾಗಿ ಯಡಿಯೂರಪ್ಪನವರು ಆಧುನಿಕರಣ ಯೋಜನೆಗೆ 348 ಕೋಟಿ ರೂ. ಮೀಸಲಿರಿಸಿ ಆದೇಶ ಹೊರಡಿಸಿದ್ದರು. ಆದರೆ ಕೇಂದ್ರ ಯುಪಿಎ ಸರ್ಕಾರ ಯೋಜನೆಯ ಕಡತವನ್ನು ಮೂಲೆಗುಂಪು ಮಾಡಿದ ಪರಿಣಾಮ ಕಾಮಗಾರಿ ವಿಳಂಬವಾಗಿತ್ತು. ಮೋದಿ ಸರ್ಕಾರ ಆಡಳಿತಕ್ಕೆ ಬಂದ ಪ್ರಾರಂಭದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್‌ ಜೊತೆಗೂಡಿ ದೆಹಲಿಗೆ ನಿಯೋಗ ತೆರಳಿ ಪ್ರಧಾನಿ ನರೇಂದ್ರ ಮೋದಿ ಮತ್ತು ಹಿಂದಿನ ಜಲ ಸಂಪನ್ಮೂಲ ಸಚಿವೆ ಉಮಾಭಾರತಿ ಇವರಿಗೆ ಯೋಜನೆಗೆ ತಾಂತ್ರಿಕ ಮಂಜೂರಾತಿ ನೀಡುವಂತೆ ಮನವಿ ಪತ್ರ ನೀಡಿದ ಪರಿಣಾಮ ಕಾಮಗಾರಿ ಜಾರಿಗೆ ಬಂತು. ಶೀಘ್ರವೇ ನಾಲೆಗಳಲ್ಲಿ ಸರಾಗವಾಗಿ ನೀರು ಹರಿದು ಕೊನೆಯ ಭಾಗದ ರೈತರಿಗೆ ಯಾವುದೇ ತೊಂದರೆಯಿಲ್ಲದೆ ನೀರು ದೊರೆಯಲಿದೆ ಎಂದರು.

ಗುಣಮಟ್ಟದ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ ಶಾಸಕರು, ಕಾಮಗಾರಿ ಕಳಪೆಯಾದಲ್ಲಿ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಜಿ.ಪಂ ಉಪಾಧ್ಯಕ್ಷ ಸಿ.ಸುರೇಂದ್ರನಾಯ್ಕ, ಕಾಮಗಾರಿ ಗುತ್ತಿಗೆದಾರರು ಹಾಗೂ ಬಿಜೋಗಟ್ಟೆ ಸುತ್ತಮುತ್ತಲ ಗ್ರಾಮದ ರೈತರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next