ಹೊನ್ನಾಳಿ: ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನಾದ್ಯಂತ ಕಳೆದ 7 ದಿನಗಳಿಂದ ಸುರಿಯುತ್ತಿರುವ ಮಳೆ ಅವಳಿ ತಾಲೂಕುಗಳಲ್ಲಿ ಭಾನುವಾರ ಸಂಪೂರ್ಣವಾಗಿ ನಿಂತಿತ್ತು.
ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಮಲೆನಾಡು ಹಾಗೂ ಅಚ್ಚುಕಟ್ಟು ಪ್ರದೇಶಗಳಲ್ಲಿ ಮಳೆ ಪ್ರಮಾಣ ಕಡಿಮೆಯಾದ ಕಾರಣ ಹೊನ್ನಾಳಿ ಪಟ್ಟಣ ಹಾಗೂ ನದಿ ತಟದ ಎಲ್ಲಾ ಗ್ರಾಮಗಳಲ್ಲಿ ಶನಿವಾರ ನುಗ್ಗಿದ್ದ ನದಿ ನೀರು ಭಾನುವಾರ ಸಂಪೂರ್ಣ ಇಳಿದು ಜನರು ನಿಟ್ಟುಸಿರು ಬಿಡುವಂತಾಯಿತು.
ಮಲೆನಾಡು ಹಾಗೂ ಅಚ್ಚುಕಟ್ಟು ಪ್ರದೇಶಗಳಲ್ಲಿ ಮಳೆ ಕ್ಷೀಣಿಸಿದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಶನಿವಾರ ರಾತ್ರಿ 12.300 ಮೀ. ಇದ್ದ ತುಂಗಭದ್ರಾ ನದಿ ಮಟ್ಟ ಭಾನುವಾರ 11.350 ಮೀ. ಗೆ ಇಳಿದಿದೆ. ಇದರಿಂದ ತಾಲೂಕಿನ ಬೇಲಿಮಲ್ಲೂರು, ಕೋಟೆಮಲ್ಲೂರು, ಕ್ಯಾಸಿನಕೇರಿ, ಹುಣಸಗಟ್ಟೆ, ಸಾಸ್ವೆಹಳ್ಳಿ ಸೇರಿದಂತೆ ಇತರ ಗ್ರಾಮಗಳ ನದಿ ತಟದಲ್ಲಿರುವ ನೂರಾರು ಎಕರೆ ಜಮೀನುಗಳ ಭತ್ತ, ತೆಂಗು, ಅಡಕೆ ತೋಟಗಳಿಗೆ ನುಗ್ಗಿದ್ದ ನೀರಿನ ಪ್ರಮಾಣ ತಗ್ಗಿದೆ.
ತಾಲೂಕಿನ ಬೆನಕನಹಳ್ಳಿ, ಕ್ಯಾಸಿನಕೇರಿ, ಸಾಸ್ವೆಹಳ್ಳಿ, ನ್ಯಾಮತಿ ತಾಲೂಕಿನ ಚೀಲೂರು, ಗೋವಿನಕೋವಿ ಸೇರಿದಂತೆ ಇತರೆ ಗ್ರಾಮಗಳಿಗೆ ನುಗ್ಗಿದ್ದ ನೀರು ಸಂಪೂರ್ಣ ಇಳಿಮುಖವಾಗಿದೆ.
ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಮತ್ತು ಹೊನ್ನಾಳಿ ಪಟ್ಟಣದಲ್ಲಿ ಎರಡು ಗಂಜೀಕೇಂದ್ರಗಳು ಈಗ ನಡೆಯುತ್ತಿವೆ. ಶಾಸಕ ಎಂ.ಪಿ. ರೇಣುಕಾಚಾರ್ಯ ಚೀಲೂರು, ಸಾಸ್ವೆಹಳ್ಳಿ ಭಾಗಕ್ಕೆ ಭಾನುವಾರ ಭೇಟಿ ನೀಡಿ ನೆರೆ ಹಾವಳಿ ಪರಿಶೀಲಿಸಿದರು.
ಮಳೆ ವಿವರ: ಹೊನ್ನಾಳಿ-6.4ಮಿ.ಮೀ., ಸೌಳಂಗ-6.4ಮಿ.ಮೀ., ಬೆಳಗುತ್ತಿ-5.2ಮಿ.ಮೀ., ಹರಳಹಳಿ-1.2ಮಿ.ಮೀ., ಗೋವಿನಕೋವಿ-0.6ಮಿ.ಮೀ., ಕುಂದೂರು-2ಮಿ.ಮೀ., ಸಾಸ್ವೆಹಳ್ಳಿ-1.2ಮಿ.ಮೀ., ಸರಾಸರಿ-3.2ಮಿ.ಮೀ..