Advertisement

ಸಾಮಾಜಿಕ ಅಂತರವೇ ಕೋವಿಡ್ ಗೆ ಮದ್ದು

11:58 AM Jun 29, 2020 | Naveen |

ಹೊನ್ನಾಳಿ: ಕೋವಿಡ್ ನಿಯಂತ್ರಣಕ್ಕೆ ಸಾಮಾಜಿಕ ಅಂತರವೊಂದೇ ಮದ್ದು. ಹಾಗಾಗಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಿಕೊಂಡು ಜೀವನ ಸಾಗಿಸಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

Advertisement

ತಾಲೂಕಿನ ಕ್ಯಾಸಿನಕೆರೆ ಗ್ರಾಮದಲ್ಲಿ ಎರಡು ಕೋವಿಡ್ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಶನಿವಾರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ 3 ಸಾವಿರ ಮಾಸ್ಕ್ ವಿತರಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಕೋವಿಡ್ ಬಗ್ಗೆ ಸತತ ಜನ ಜಾಗೃತಿ ಮೂಡಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಲಾಕ್‌ಡೌನ್‌ ವಿಚಾರವನ್ನು ಆಯಾ ರಾಜ್ಯಗಳಿಗೆ ಬಿಟ್ಟಿದ್ದು, ಕೋವಿಡ್  ಗೆ ಲಾಕ್‌ಡೌನ್‌ ಒಂದೇ ಪರಿಹಾರವಲ್ಲ ಎಂದು ಅಭಿಪ್ರಾಯಪಟ್ಟರು.

ಕೋವಿಡ್ ವಾರಿಯರ್ ಸತತ ಎರಡು ತಿಂಗಳಿನಿಂದ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ನಾನೂ ಕೂಡಾ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ ಮಾಸ್ಕ್ ವಿತರಿಸಿ ಸಾಮಾಜಿಕ ಅಂತರ ಕಾಪಾಡುವಂತೆ ಮನವಿ ಮಾಡಿದ್ದೇನೆ. ಈ ಮೂಲಕ ಕೋವಿಡ್  ವಾರಿಯರ್‌ನಂತೆ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದರು.

ದೇಹದಲ್ಲಿ ಕೋವಿಡ್ ಲಕ್ಷಣಗಳು ಕಂಡು ಬಂದರೆ ಯಾವುದೇ ಕಾರಣಕ್ಕೂ ಮುಚ್ಚಿಡಬೇಡಿ. ಇದಕ್ಕೆ ತಾಜಾ ಉದಾಹರಣಯೊಂದು ನನ್ನ ಗಮನಕ್ಕೆ ಬಂದಿದೆ. ತಾಲೂಕಿನ ಗ್ರಾಮವೊಂದರ ವ್ಯಕ್ತಿಗೆ ಕೋವಿಡ್ ಬಂದ ಸಮಯದಲ್ಲಿ ಆ ವ್ಯಕ್ತಿಯ ಸಹೋದರ ನನಗೆ ಫೋನ್‌ ಮಾಡಿದ್ದ. ನನ್ನ ತಮ್ಮನಿಗೆ ಕೋವಿಡ್  ಬಂದಿದ್ದು ಯಾರಿಗೂ ಹೇಳಿಲ್ಲ, ನೀವು ಯಾರಿಗೂ ಹೇಳಬೇಡಿ. ಬೈಕ್‌ನಲ್ಲಿ ತಮ್ಮನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಅಳಲು ತೋಡಿಕೊಂಡಿದ್ದ. ನಾನು ಎಚ್ಚರಿಕೆ ನೀಡಿ ತಕ್ಷಣ ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ದಾಖಲಿಸಲು ಸೂಚಿಸಿ ಕ್ರಮ ಕೈಗೊಂಡಿದ್ದೇನೆ ಎಂದು ತಿಳಿಸಿದರು. ತಾಪಂ ಪ್ರಭಾರಿ ಅಧ್ಯಕ್ಷ ಕೆ.ಎಲ್‌. ರಂಗಪ್ಪ, ಗ್ರಾಮದ ಮುಖಂಡ ಹರ್ಷ ಪಾಟೀಲ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next