Advertisement

ಸೂರಗೊಂಡನಕೊಪ್ಪ ಅಭಿವೃದ್ಧಿಯಾಗಲಿ

11:32 AM Jan 20, 2020 | Naveen |

ಹೊನ್ನಾಳಿ: ಸಂತ ಸೇವಾಲಾಲ್‌ರ ಜನ್ಮಸ್ಥಳ, ಪವಿತ್ರ ಕ್ಷೇತ್ರ ಸೂರಗೊಂಡನಕೊಪ್ಪ ಸರ್ವತೋಮುಖ ಅಭಿವೃದ್ಧಿಯಾಗಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

Advertisement

ಫೆ.13ರಿಂದ ಮೂರು ದಿನಗಳ ಕಾಲ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪ ಕ್ಷೇತ್ರದಲ್ಲಿ ನಡೆಯಲಿರುವ ಸಂತ ಸೇವಾಲಾಲ್‌ ಜಯಂತ್ಯುತ್ಸವ ಅಂಗವಾಗಿ ಭಾನುವಾರ ಸೂರಗೊಂಡನಕೊಪ್ಪ ಕ್ಷೇತ್ರದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂತ ಸೇವಾಲಾಲರ ಪುಣ್ಯ ಕ್ಷೇತ್ರ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಂಡಿದೆ. ಅಭಿವೃದ್ಧಿಗೆ ಮೂಲ ಕಾರಣ ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌ .ಯಡಿಯೂರಪ್ಪ. ನಂತರ ಬಂದಂತಹ ಸರ್ಕಾರಗಳು ಸಹ ಅಭಿವೃದ್ಧಿಯನ್ನು ಮುಂದುವರಿಸಿಕೊಂಡು ಹೋಗಿವೆ ಎಂದು ಹೇಳಿದರು.

ಕ್ಷೇತ್ರದಲ್ಲಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು. ದೇಶದ ಮೂಲೆ ಮೂಲೆಗಳಿಂದ ಬರುವಂತಹ ಮಾಲಾಧಾರಿಗಳು, ಭಕ್ತರು ಹಾಗೂ ಸಾರ್ವಜನಿಕರಿಗೆ ರಸ್ತೆ ಸಮಸ್ಯೆ ಇದ್ದು, ಶಿವಮೊಗ್ಗ ಕಡೆಯಿಂದ, ಶಿಕಾರಪುರ ಕಡೆಯಿಂದ, ದಾವಣಗೆರೆ ಕಡೆಯಿಂದ ಹಾಗೂ ಹಾವೇರಿ ಕಡೆಯಿಂದ ಸೂರಗೊಂಡನಕೊಪ್ಪ ಕ್ಷೇತ್ರಕ್ಕೆ ಸೇರುವ ರಸ್ತೆಗಳ ಅಭಿವೃದ್ಧಿಯಾಗಬೇಕಿದೆ. ಚತುಷ್ಪಥ ರಸ್ತೆ ನಿರ್ಮಾಣ ಮಾಡುವ ಗುರಿ ಇದೆ ಎಂದು ಹೇಳಿದರು.

ಈ ಪೂರ್ವಭಾವಿ ಸಭೆಗೆ ನಾನೊಬ್ಬ ಶಾಸಕನಾಗಿ ಬಂದಿಲ್ಲ. ಸಂತ ಸೇವಾಲಾಲ್‌ರ ಭಕ್ತನಾಗಿ ಬಂದಿದ್ದೇನೆ. ಸೇವಾಲಾಲ್‌ರ ಜಾತ್ರಾ ಮಹೋತ್ಸವದ ವಿವಿಧ ಕಾಮಗಾರಿಗಳಿಗೆ ಸಿಎಂ ಬಿಎಸ್‌ವೈ 1ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಅವರಿಗೆ ತುಂಬು ಹೃದಯದಿಂದ ಅಭಿನಂದಿಸುತ್ತೇನೆ ಎಂದು ಹೇಳಿದರು.

Advertisement

ಬಂಜಾರ ಸಮಾಜದಲ್ಲಿ ಮತಾಂತರ ನಡೆಯುತ್ತಿದ್ದು, ಇದರ ಬಗ್ಗೆ ಸಮಾಜದ ಜನಪ್ರತಿನಿಧಿಗಳು, ಮುಖಂಡರು ಚಿಂತಿಸಿ ಇಂತಹ ಅವಘಡಗಳಿಗೆ ತಡೆಯೊಡ್ಡಬೇಕಿದೆ ಎಂದು ಹೇಳಿದರು. ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಕುಡಚಿ ಶಾಸಕ ರಾಜೀವ್‌ ಮಾತನಾಡಿ, ಈ ಬಾರಿ ಸಂತ ಸೇವಾಲಾಲರ ಜಾತ್ರಾ ಮಹೋತ್ಸವವನ್ನು ಪ್ಲಾಸ್ಟಿಕ್‌ ರಹಿತ ಜಾತ್ರೆ ಮಾಡುವ ಉದ್ದೇಶ ನಮ್ಮದಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
280 ವರ್ಷಗಳ ಹಿಂದೆ ಈ ಕ್ಷೇತ್ರದಲ್ಲಿ ಸಂತ ಸೇವಾಲಾಲರು ಜನಿಸಿದ್ದು, ಇಲ್ಲಿ ಆತ್ಮ ವಂಚನೆ ಇಲ್ಲದೆ ಕಾಯಕ ಮಾಡಿದರೆ ಪುಣ್ಯದ ಠೇವಣಿ ಜಮಾ ಆಗುತ್ತದೆ ಎಂದು ಹೇಳಿದರು.

ಸೇವಾಲಾಲ್‌ ಕ್ಷೇತ್ರದ ಸಮಿತಿ ಅಧ್ಯಕ್ಷ, ಮಾಜಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ಹಿಂದಿನ ಜಾತ್ರಾ ಮಹೋತ್ಸವದಲ್ಲಾದ ತೊಂದರೆಗಳನ್ನು ನೀಗಿಸಿ, ಯಾವುದೇ ತೊಂದರೆ-ಸಮಸ್ಯೆಗಳಿಲ್ಲದೆ ಈ ಬಾರಿಯ ಜಾತ್ರೆ ನಡೆಯಬೇಕು. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ, ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಹನುಮಂತರಾಯ ಇದುವರೆಗಿನ ಕೆಲಸಗಳ ಬಗ್ಗೆ ವಿವರಿಸಿದರು. ಹೂವಿನಹಡಗಲಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕ, ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕನಾಯ್ಕ ಮಾತನಾಡಿದರು.

ಜಿ.ಪಂ ಉಪಾಧ್ಯಕ್ಷ ಸುರೇಂದ್ರ ನಾಯ್ಕ, ಸದಸ್ಯೆ ಉಮಾ ರಮೇಶ್‌, ತಾ.ಪಂ ಸದಸ್ಯ ಪೀರ್ಯಾನಾಯ್ಕ, ಜಿ.ಪಂ ಸಿಇಒ ಪದ್ಮಾ ಬಸವಂತಪ್ಪ, ಉಪ ವಿಭಾಗಾಧಿ ಕಾರಿ ಮಮತಾ, ತಹಶೀಲ್ದಾರ್‌ ತುಷಾರ್‌ ಬಿ.ಹೊಸೂರು, ನ್ಯಾಮತಿ ತಾಲೂಕು ಪ್ರಭಾರಿ ತಹಶೀಲ್ದಾರ್‌ ನಾಗರಾಜ್‌, ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕ ಮಾರುತಿನಾಯ್ಕ, ಮಾಜಿ ಶಾಸಕ ಬಸವರಾಜನಾಯ್ಕ ಇತರರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಜನಪ್ರತಿನಿಧಿಗಳು, ಅಧಿಕಾರಿಗಳು ಕ್ಷೇತ್ರವನ್ನು ಸುತ್ತಿ ಅಭಿವೃದ್ಧಿ ಕೆಲಸಗಳನ್ನು ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next