ಹೊನ್ನಾಳಿ: ಕಳೆದ ಮೂರ್‍ನಾಲ್ಕು ವರ್ಷಗಳಿಂದ ಮಳೆ ಇಲ್ಲದೆ ಭೀಕರ ಬರಗಾಲ ಎದುರಿಸಿದ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ರೈತರು ಈ ಬಾರಿಯಾದರೂ ಉತ್ತಮ ಮಳೆ ಸುರಿಯಬಹುದೆಂಬ ಆಶಾಭಾವನೆಯಲ್ಲಿದ್ದ ರೈತರಿಗೆ ಜೂನ್ ತಿಂಗಳು ಮುಗಿಯುತ್ತಾ ಬಂದರೂ ಬಿತ್ತನೆಗೂ ಕೂಡ ಭೂಮಿ ಹಸಿಯಾಗುವಷ್ಟು ಮಳೆ ಬಾರದೆ ಜಂಘಾಬಲವೇ ಉಡುಗುವಂತಾಗಿದೆ.
Advertisement
ವಾಡಿಕೆಯಂತೆ ಸಕಾಲದಲ್ಲಿ ಮಳೆಯಾಗದೆ ದಿಕ್ಕು ತೋಚದ ರೈತರು ದಿನವೂ ಆಕಾಶದತ್ತ ಮುಖಮಾಡಿ ಕುಳಿತುಕೊಳ್ಳುವಂತಾಗಿದೆ.
Related Articles
Advertisement
ತಾಲೂಕಿನಲ್ಲಿ 28,250 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಮಳೆಯಾಗದೆ ಇರುವುದರಿಂದ ಮುಸುಕಿನ ಜೋಳ 250, ಹತ್ತಿ 282, ಶೇಂಗಾ 110 ಹಾಗೂ ತೊಗರೆ 2 ಹೆಕ್ಟರ್ ಸೇರಿದಂತೆ 650 ಹೆಕ್ಟರ್ ಪ್ರದೇಶದಲ್ಲಿ ರೈತರು ಭಿತ್ತನೆ ಕಾರ್ಯ ಮಾಡಿದ್ದಾರೆ. ಆದರೆ ಬಿತ್ತಿದ ಬೀಜ ಮೊಳಕೆಯೊಡೆದು ಹೊರ ಬಂದು ಒಣಗಲು ಪ್ರಾರಂಭವಾಗಿದೆ.
ತಾಲೂಕಿನ ಸಾಸ್ವೇಹಳ್ಳಿ ಹೋಬಳಿಯಲ್ಲಿ ಸಾಧಾರಣ ಮಳೆಯಾಗಿರುವುದರಿಂದ ಬಿತ್ತನೆ ಮಾಡಲಿಕ್ಕೆ ತೊಂದರೆ ಇಲ್ಲ ಆದರೆ ಬೆಳಗುತ್ತಿ, ಕಸಬಾ, ಗೋವಿನಕೋವಿ, ನ್ಯಾಮತಿ ಹಾಗೂ ಕುಂದೂರು ಭಾಗದಲ್ಲಿ ಮಳೆಯಾಗದೆ ಇರುವುದರಿಂದ ಬಿತ್ತನೆ ಕಾರ್ಯ ಪ್ರಾರಂಭ ಮಾಡಲು ರೈತರು ಹಿಂದುಮುಂದು ನೋಡುತ್ತಿದ್ದಾರೆ.
ಹಳ್ಳದಂತಾದ ನದಿ: ತುಂಬಿ ಹರಿಯಬೇಕಿದ್ದ ತುಂಗಭದ್ರಾ ನದಿ ಮಲೆನಾಡು ಪ್ರದೇಶದಲ್ಲಿ ಮಳೆ ಇಲ್ಲದೆ ಹಳ್ಳದಂತೆ ಹರಿಯುತ್ತಿದೆ. ಕಾರಹುಣ್ಣಿಮೆ ಸಂದರ್ಭದಲ್ಲಿ ತುಂಬಿದ ನದಿಯನ್ನು ಕಾಗೆ ದಾಟಲೂ ಹೆದರಬೇಕು ಎನ್ನುವ ನಾಣ್ಣುಡಿ ಇಂದು ಉಲ್ಟಾ ಆಗಿರುವುದು ವಿಷಾದನೀಯ.
ಜು. 15 ರವರೆಗೂ ಬಿತ್ತನೆ ಮಾಡಲಿಕ್ಕೆ ರೈತರಿಗೆ ಅವಕಾಶ ಇದೆ. ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ. ಹವಾಮಾನ ಇಲಾಖೆ ವರದಿಯಂತೆ ಇಷ್ಟರಲ್ಲೇ ಮಳೆಯಾಗುವ ಸೂಚನೆ ಇದ್ದು, ಸಾಸ್ವೇಹಳ್ಳಿ ಭಾಗದಲ್ಲಿ ಮಳೆಯಾಗಿದೆ. ಇನ್ನು ಬಾಕಿ ಹೋಬಳಿಗಳಲ್ಲಿ ಮಳೆಯಾಗಿಲ್ಲ.•ವಿಶ್ವನಾಥ್,
ಪ್ರಭಾರಿ ಸಹಾಯಕ ಕೃಷಿ ನಿರ್ದೇಶಕರು, ಹೊನ್ನಾಳಿ. ಕಳೆದ ಮೂರ್‍ನಾಲ್ಕು ವರ್ಷಗಳಿಂದ ವಾಡಿಕೆಯಂತೆ ಮಳೆಯಾಗದೆ ರೈತರು ಬೆಳೆ ಬೆಳೆಯಲಿಕ್ಕೆ ಆಗದೆ ಮತ್ತಷ್ಟು ಸಾಲಗಾರರಾಗಿದ್ದಾರೆ. ಈಗ ಮತ್ತೆ ಮಳೆ ಕಣ್ಣಾಮುಚ್ಚಾಲೆಯಾಟ ಆಡುತ್ತಿರುವುದರಿಂದ ಈ ಬಾರಿಯೂ ರೈತರ ಬದುಕು ದುಸ್ತರವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಸರ್ಕಾರ ಪ್ರತಿ ಎಕರೆಗೆ ಪರಿಹಾರ ನೀಡಬೇಕು.
•ಜಗದೀಶ್ ಕಡದಕಟ್ಟೆ,
ರೈತ ಮುಖಂಡ, ಹೊನ್ನಾಳಿ.