ಹೊನ್ನಾಳಿ: ಈಚೆಗೆ 8-10 ದಿನ ಸುರಿದ ಹದ ಮಳೆಗೆ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನಾದ್ಯಂತ ಬೆಳೆಗಳು ನಳನಳಿಸುತ್ತಿವೆ.
ಕೇವಲ 10 ದಿನಗಳ ಹಿಂದೆ ಮಳೆ ಕೊರತೆಯಿಂದ ಮೊಣಕಾಲು ಉದ್ದ ಬೆಳೆದಿದ್ದ ಮೆಕ್ಕೆಜೋಳ, ಊಟದಜೋಳ, ಸೂರ್ಯಕಾಂತಿ, ಹತ್ತಿ, ಚೋಟುದ್ದ ಬೆಳೆದಿದ್ದ ಶೇಂಗಾ, ರಾಗಿ, ಹುರುಳಿ ಬೆಳೆಗಳು ಒಣಗಲು ಪ್ರಾರಂಭವಾಗಿದ್ದವು. ಆದರೆ ವರುಣನ ಕೃಪೆಯಾಗಿ ಸತತ ಒಂದು ವಾರ ಮಳೆ ಸುರಿದು ಎಲ್ಲಾ ಬೆಳೆಗಳಿಗೆ ಜೀವಕಳೆ ಬಂದು ಈಗ ಹಚ್ಚಹಸಿರಿನಿಂದ ಕಂಗೊಳಿಸುತ್ತಿವೆ.
ಹೊನ್ನಾಳಿ ತಾಲೂಕಿನ ಮಳೆಯಾಶ್ರಿತ ಕತ್ತಿಗೆ, ಮಾರಿಕೊಪ್ಪ, ಹರಳಹಳ್ಳೆ, ದಿಡಗೂರು, ಬಳ್ಳೇಶ್ವರ, ಸೇರಿದಂತೆ ಇತರ ಗ್ರಾಮಗಳ ಜಮೀನುಗಳು ಹಾಗೂ ನ್ಯಾಮತಿ ತಾಲೂಕಿನ ನ್ಯಾಮತಿ, ಸುರಹೊನ್ನೆ, ಸೌಳಂಗ, ಚಿನ್ನಿಕಟ್ಟೆ, ಜೋಗ, ಆರುಂಡಿ, ಕೆಂಚಿಕೊಪ್ಪ ಗ್ರಾಮಗಳ ಮಳೆಯಾಶ್ರಿತ ಜಮೀನುಗಳು ನಳನಳಿಸುತ್ತಿವೆ.
ರೈತರು ಬೆಳೆಗಳ ಮಧ್ಯೆ ಬೆಳೆದಿರುವ ಕಳೆ ತೆಗೆಯಲು ಎಡೆಕುಂಟಿ ಹೊಡೆಯುವುದು, ಕ್ರಿಮಿನಾಶಕ ಸಿಂಪಡಿಸುವ ಕಾರ್ಯ ಶುರು ಮಾಡಿದ್ದಾರೆ. ಉತ್ತಮ ಮಳೆಯಿಂದ ಬೆಳೆ ಮೇಲೆ ಬಂದಿರುವ ಕಾರಣ ರೈತರು ನಗು ಮುಖದಿಂದಲೇ ಜಮೀನುಗಳ ಕೆಲಸ ಮಾಡುತ್ತಿದ್ದಾರೆ. ಇನ್ನೊಂದು ವಾರ ಬಿಸಿಲು ಬಿದ್ದು ನಂತರ ಬೆಳೆಗಳು ಕಾಳು ಕಟ್ಟುವ ಸಮಯದಲ್ಲಿ ಮಳೆಯಾದರೆ ನಾವು ಗೆದ್ದಂತೆ ಎಂದು ರೈತರು ಹೇಳುತ್ತಾರೆ.
ಮುಂದಿನ ದಿನಗಳಲ್ಲಿ ಕೈಕೊಡದೆ ಮಳೆ ಬಂದರೆ ಪ್ರಸ್ತುತ ವರ್ಷದ ಎರಡು ಬೆಳೆಗಳನ್ನು ಬೆಳೆಯಲು ಅವಕಾಶವಿದೆ. ಚಳಿಗಾಲದಲ್ಲಿ ಬಿಳಿಜೋಳ, ಗೋಧಿ, ನೆಲಗಡಲೆ ಸೇರಿದಂತೆ ಇತರ ಚಳಿಗಾಲದ ಬೆಳೆಗಳನ್ನು ಬೆಳೆಯಬಹುದಾಗಿದೆ ಎಂದು ರೈತರು ಹೇಳುತ್ತಾರೆ.