Advertisement

ಮಾನವೀಯತೆಯಿಂದ ಹಾನಿ ವರದಿ ಸಿದ್ಧಪಡಿಸಿ

11:00 AM Aug 15, 2019 | Naveen |

ಹೊನ್ನಾಳಿ: ಅವಳಿ ತಾಲೂಕು ಕಳೆದ ಐದಾರು ವರ್ಷಗಳಿಂದಲೂ ಬರ ಎದುರಿಸುತ್ತಿದ್ದರೆ, ಈ ವರ್ಷ ಬರ ಹಾಗೂ ನೆರೆ ಹಾವಳಿಯಿಂದ ಅವಳಿ ತಾಲೂಕಿನ ಜನ ಜರ್ಜರಿತರಾಗಿದ್ದಾರೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಬೇಸರ ವ್ಯಕ್ತಪಡಿಸಿದರು.

Advertisement

ಪಟ್ಟಣದ ಸಾಮರ್ಥ್ಯಸೌಧದಲ್ಲಿ ಏರ್ಪಡಿಸಿದ್ದ ಜನಪ್ರತಿನಿಧಿಗಳು ಹಾಗೂ ತಾಲೂಕಿನ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಕಳೆದ ವರ್ಷ ಅವಳಿ ತಾಲೂಕನ್ನು ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಿತ್ತು. ಈ ವರ್ಷ ಬರದ ಜತೆಗೆ ಕಳೆದ ಹತ್ತು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನ, ರೈತರು ನಲುಗಿ ಹೋಗಿದ್ದಾರೆ. ಆದ್ದರಿಂದ ಅಧಿಕಾರಿಗಳು ಸಮಯ ವ್ಯರ್ಥ ಮಾಡದೆ ಬರ ಹಾಗೂ ನೆರೆ ಹಾವಳಿ ಪ್ರದೇಶದಲ್ಲಿ ಶೀಘ್ರ ಜಂಟಿ ಸಮೀಕ್ಷೆ ಮಾಡಿ ಪರಿಹಾರಕ್ಕೆ ಕೂಡಲೆ ವರದಿ ಸಿದ್ಧಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಎಲ್ಲದಕ್ಕೂ ಕಾನೂನು ತೋರಿಸದೇ ಮಾನವೀಯತೆ ಆಧಾರದ ಮೇಲೆ ವರದಿ ತಯಾರು ಮಾಡಿ. ಪ್ರತಿಯೊಂದಕ್ಕೂ ಕಾನೂನು ಎಂದರೆ ಬಡವರಿಗೆ ಯಾವ ಪರಿಹಾರವೂ ಸಿಗುವುದಿಲ್ಲ. ಆದ್ದರಿಂದ ನಿಮ್ಮ ಅಂತಃಕರಣದಲ್ಲಿ ಮಾನವೀಯತೆ ಇರಲಿ ಎಂದರು.

ಪ್ರತಿವರ್ಷ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ನೆರೆ ಹಾವಳಿ ಉಂಟಾದಾಗಲೆಲ್ಲ ಹೊನ್ನಾಳಿಯಲ್ಲೂ ಪ್ರವಾಹ ಪರಿಸ್ಥಿತಿ ಉಂಟಾಗುವುದರಿಂದ ಸರ್ಕಾರ ಅವಳಿ ತಾಲೂಕುಗಳನ್ನು ನೆರೆ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು. ಹಾಗೂ ನೆರೆಪೀಡಿತ ಪ್ರದೇಶಗಳಿಗೆ ನೀಡುವ ಪರಿಹಾರವನ್ನು ಅವಳಿ ತಾಲೂಕುಗಳಿಗೂ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಲ್ಲಿ ಮನವಿ ಮಾಡುತ್ತೇನೆ ಎಂದರು. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ತಾಲೂಕಿನ 29,276 ರೈತರು ಅರ್ಜಿ ಸಲ್ಲಿಸಿದ್ದಾರೆ. ತಹಶೀಲ್ದಾರ್‌ ಶೇ 103ರಷ್ಟು ಸಾಧನೆ ಮಾಡಿದ್ದಾರೆ. ಈಗಾಗಲೆ ರೈತರ ಖಾತೆಗೆ ಹಣ ಬಿಡುಗಡೆಯಾಗುತ್ತಿದೆ ಎಂದರು.

Advertisement

ತಾಲೂಕಿನ ಹನಗವಾಡಿಯಿಂದ ಕೋಣನತಲೆ ಗ್ರಾಮದವರೆಗೆ ನದಿಪಾತ್ರದಲ್ಲಿ ತಡೆಗೋಡೆ ನಿರ್ಮಾಣಕ್ಕೆ 450 ಕೋಟಿ ವೆಚ್ಚದ ಪ್ರಸ್ತಾವನೆ ಕಳುಹಿಸಲಾಗಿದೆ. ಮುಖ್ಯಮಂತ್ರಿಗಳು ಬೆಂಗಳೂರಿಗೆ ಬಂದ ಕೂಡಲೇ ಅನುಮೋದನೆ ಸಿಗಲಿದೆ. ಅಧಿಕಾರಿಗಳು ಕಚೇರಿಗಳಲ್ಲಿ ಸಿಗುತ್ತಿಲ್ಲ. ಇದರಿಂದ ನಮ್ಮ ಕೆಲಸಗಳಾಗುತ್ತಿಲ್ಲ ಎಂದು ಸಾರ್ವಜನಿಕರು ಹಾಗೂ ರೈತರು ದೂರುತ್ತಿದ್ದಾರೆ. ಇದು ಯಾವುದೇ ಕಾರಣಕ್ಕೂ ಮುಂದುವರೆಯಬಾರದು. ಬಹುಮುಖ್ಯವಾಗಿ ಸಾರ್ವಜನಿಕರ ಜತೆ ಸೌಜನ್ಯದಿಂದ ವರ್ತಿಸಿ ಎಂದು ಕಿವಿಮಾತು ಹೇಳಿದರು.

ತಹಶೀಲ್ದಾರ್‌ ತುಷಾರ್‌ ಬಿ ಹೊಸೂರ ಮಾತನಾಡಿ, ಅವಳಿ ತಾಲೂಕುಗಳಲ್ಲಿ ಬರ ಹಾಗೂ ನೆರೆ ಹಾವಳಿಯಿಂದ ರೈತರ ಬದುಕು ದುಸ್ತರವಾಗಿದೆ. ಆದ್ದರಿಂದ ತಕ್ಷಣ ಬೆಳೆಹಾನಿ ಬಗ್ಗೆ ವರದಿ ನೀಡಬೇಕು. ಇದರಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಭಾವನೆ ತೋರಬಾರದು ಎಂದು ಎಚ್ಚರಿಕೆ ನೀಡಿದರು.

ಜಿ.ಪಂ.ಉಪಾಧ್ಯಕ್ಷ ಸುರೇಂದ್ರ ನಾಯ್ಕ, ಜಿ.ಪಂ. ಸದಸ್ಯ ವೀರಶೇಖರಪ್ಪ, ತಾಪಂ.ಉಪಾಧ್ಯಕ್ಷ ರವಿಕುಮಾರ್‌, ತಾ.ಪಂ.ಸದಸ್ಯ ಶಿವಾನಂದ್‌ ಮಾತನಾಡಿದರು. ತಾ.ಪಂ. ಅಧ್ಯಕ್ಷೆ ಚಂದ್ರಮ್ಮ ಹಾಲೇಶ್‌, ದೀಪಾ ಜಗದೀಶ್‌, ಡಿ.ಜಿ.ವಿಶ್ವನಾಥ್‌, ಎಂ.ಆರ್‌. ಮಹೇಶ್‌, ತಹಶೀಲ್ದಾರ್‌ ರಶ್ಮೀ ಜೆ. ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next