Advertisement

ಮರಳು ಅಕ್ರಮವಾಗಿ ಸಾಗಿಸಿದರೆ ಕ್ರಮ

11:47 AM Dec 22, 2019 | |

ಹೊನ್ನಾಳಿ: ನನ್ನ ಹೆಸರನ್ನು ಬಳಸಿಕೊಂಡು ತಾಲೂಕಿನಲ್ಲಿ ಯಾರಾದರೂ ಅಕ್ರಮದ ಮರಳು ಸಾಗಾಟ ಮಾಡಿದರೆ ಸಂಬಂಧಿಸಿದ ಅಧಿಕಾರಿಗಳು ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣಾ ಪೂರ್ವದಲ್ಲಿ ಕಡು ಬಡವರು, ಜನಸಾಮಾನ್ಯರಿಗೆ ಮುಕ್ತವಾಗಿ ಮರಳು ದೊರಕುವಂತೆ ಮಾಡುವುದಾಗಿ ಭರವಸೆ ನೀಡಿದ್ದು, ಅದರಂತೆ ಇಂದು ಮುಕ್ತವಾಗಿ ಮರಳು ದೊರಕುವಂತೆ ಕ್ರಮ ಕೈಗೊಳ್ಳಲಾಗಿದ್ದು, ಡಿ.23ರ ಸೋಮವಾರದಿಂದ ತಾಲೂಕಿನ 11 ಮರಳು ಕ್ವಾರಿಗಳಲ್ಲಿ ಮರಳು ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

ತಾಲೂಕಿನಲ್ಲಿ ಶಾಸಕರ ಹೆಸರನ್ನು ಹೇಳಿಕೊಂಡು ಪಕ್ಷಾತೀತವಾಗಿ ಹಲವಾರು ಜನ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೆ ಎಂಬ ಅನೇಕ ದೂರುಗಳು ತಮಗೆ ಬಂದಿದ್ದು, ತಾವು ಯಾವುದೇ ಕಾರಣಕ್ಕೂ ಅಕ್ರಮ ಮರುಳ ದಂಧೆಗೆ ಅವಕಾಶ ಮಾಡಿಕೊಡುವುದಿಲ್ಲ, ಯಾರಾದರೂ ಅಕ್ರಮವಾಗಿ ಮರಳು ಸಾಗಿಸುತ್ತಿದ್ದರೆ ಅಂತಹವರ ವಿರುದ್ಧ ಅಧಿಕಾರಿಗಳು ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದರು ತಾಲೂಕಿನ ಹರಳಹಳ್ಳಿ, ಗೋವಿನಕೋವಿ, ಬಿದರಗಡ್ಡೆ, ಹೊಳೆಮಾದಾಪುರ ಈ ಮರಳು ಕ್ವಾರಿಗಳಲ್ಲಿ ಜಿಲ್ಲಾ ಟಾಸ್ಕ್ಫೋರ್ಸ್‌ ಸಮಿತಿಯಲ್ಲಿ ಚರ್ಚೆಯಾಗಿಲ್ಲದ ಕಾರಣ ಸದ್ಯ ವಿತರಣೆ ಇರುವುದಿಲ್ಲ. ಈ ಕ್ವಾರಿಗಳಲ್ಲಿ ಮರಳು ಸರ್ಕಾರಿ ಕಾಮಗಾರಿಗಳಿಗಾಗಿ ಕಾಯ್ದಿರಿಸಲು ಯೋಚಿಸಲಾಗಿದೆ ಎಂದರು.

ಇಲ್ಲಿಯವರೆಗೆ ಜಿ.ಪಿ.ಎಸ್‌ ಹೊಂದಿದ ವಾಹನಗಳ ಮಾಹಿತಿ ಲಾಕ್‌ ಆಗಿದ್ದು, ಇದೀಗ ಇದನ್ನು ಕೂಡ ಲಾಕ್‌ ಮುಕ್ತವನ್ನಾಗಿಸಿ ಡಿ.23ರ ಸೋಮವಾರದಿಂದ ಜಿಪಿಎಸ್‌ ವಾಹನಗಳ ಮೂಲಕ ಮರಳು ಸಾಗಾಣಿಕೆಗೆ ಜಿಲ್ಲಾ ಭೂ ವಿಜ್ಞಾನ ಮತ್ತು ಗಣಿ ಇಲಾಖೆ ಅವಕಾಶ ಮಾಡಿದೆ ಎಂದು ತಿಳಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಅನಗತ್ಯ ಗಲಾಟೆ: ಭಾರತೀಯರ ಹಿತ ಕಾಯುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಪೌರತ್ವ ಕಾಯ್ದೆ ಜಾರಿಗೆ ತಂದಿದ್ದು, ಕೇಂದ್ರ ಸರ್ಕಾರದ ವಿರುದ್ಧ ಯಾವುದೇ ವಿಷಯದಲ್ಲಿ ಟೀಕಿಸುವ ಪರಿಸ್ಥಿತಿ ಇಲ್ಲದ ಕಾರಣ ಕಾಂಗ್ರೆಸ್‌ನವರು ಪೌರತ್ವ ಕಾಯ್ದೆ ಬಗ್ಗೆ ಜನ ಸಾಮಾನ್ಯರಲ್ಲಿ ಇಲ್ಲಸಲ್ಲದ ತಪ್ಪು ತಿಳಿವಳಿಕೆ ತುಂಬಿ ರಾಜ್ಯದಲ್ಲಿ ಅನಗತ್ಯ ಗಲಾಟೆ ಗೊಂದಲಗಳಿಗೆ ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ದೂರಿದರು.

Advertisement

ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಕಾಂಗ್ರೆಸ್‌ ಜನಮನ್ನಣೆ ಕಳೆದುಕೊಂಡು ವಿನಾಶದ ಅಂಚಿಗೆ ತಲುಪಿದ್ದು, ಏನಾದರೂ ಮಾಡಿ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳುವ ಭರಾಟೆಯಲ್ಲಿ ಜನರನ್ನು ಗಲಾಟೆಗೆ ಪ್ರಚೋದಿಸುವ ಕೆಲಸ ಮಾಡುತ್ತಿದ್ದು, ಇದಕ್ಕೆ ಮಾಜಿ ಸಚಿವ ಯು.ಟಿ.ಖಾದರ್‌ ಅವರ ನಡವಳಿಕೆ ಮತ್ತು ಹೇಳಿಕೆಗಳೇ ಸಾಕ್ಷಿಯಾಗಿದೆ ಎಂದು ಹೇಳಿದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಕೋದಂಡರಾಮ, ಸಹಾಯಕ ಅಧಿಕಾರಿ ವಿನಯ್‌ ಬಣಕಾರ್‌, ಸರ್ಕಲ್‌ ಇನ್ಸಪೆಕ್ಟರ್‌ ಟಿ.ವಿ.ದೇವರಾಜ್‌, ಸಬ್‌ಇನ್ಸಪೆಕ್ಟರ್‌ ತಿಪ್ಪೇಸ್ವಾಮಿ, ತಾ.ಪಂ ಅಧಿ ಕಾರಿ ಗಂಗಾಧರಮೂರ್ತಿ, ಬಿಇಒ ಜಿ.ಇ. ರಾಜೀವ್‌, ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next