Advertisement

ನ್ಯಾಮತಿ ತಾಲೂಕು ಶಿವಮೊಗ್ಗ ಜಿಲ್ಲೆಗೆ ಮರು ಸೇರ್ಪಡೆ?

09:52 AM Aug 01, 2019 | Naveen |

ಎಂ.ಪಿ.ಎಂ.ವಿಜಯಾನಂದಸ್ವಾಮಿ.
ಹೊನ್ನಾಳಿ:
ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್‌.ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆಯೇ ಇತ್ತ ನ್ಯಾಮತಿ ತಾಲೂಕು ಶಿವಮೊಗ್ಗ ಜಿಲ್ಲೆಗೆ ಮರು ಸೇರ್ಪಡೆ ವಿಚಾರ ತಾಲೂಕಿನಾದ್ಯಂತ ಹರಿದಾಡುತ್ತಿದೆ.

Advertisement

ನೂತನ ತಾಲೂಕು ಕೇಂದ್ರವಾಗಿರುವ ನ್ಯಾಮತಿಯನ್ನು ದಾವಣಗೆರೆ ಜಿಲ್ಲೆಯಿಂದ ಶಿವಮೊಗ್ಗ ಜಿಲ್ಲೆಗೆ ಮರುಸೇರ್ಪಡೆ ಮಾಡುವ ಬಗ್ಗೆ ಸಾರ್ವಜನಿಕರಿಂದ‌ ಅಭಿಪ್ರಾಯ ಸಂಗ್ರಹಿಸಿ ವರದಿ ನೀಡುವಂತೆ ನ್ಯಾಮತಿ ತಹಶೀಲ್ದಾರ್‌ ಗ್ರಾಮ ಪಂಚಾಯಿತಿಗಳಿಗೆ ಸೂಚಿಸಿರುವುದು ಈ ವಿಷಯಕ್ಕೆ ಮತ್ತಷ್ಟು ರೆಕ್ಕೆಪುಕ್ಕ ಹುಟ್ಟಿಸಿದೆ.

ನ್ಯಾಮತಿ ತಾಲೂಕಿನ ಕುಗೋನಹಳ್ಳಿ ತಾಂಡದ ಬಿ. ರಾಮಾನಾಯ್ಕ, ತಾ.ಪಂ. ಸದಸ್ಯ ಬಿ.ವಿ.ಹನುಮಂತಪ್ಪ ಹಾಗೂ ಹಾಗೂ ನ್ಯಾಮತಿ ತಾಲೂಕಿನ ಚೀಲೂರು ಗ್ರಾ.ಪಂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿ ನ್ಯಾಮತಿ ತಾಲೂಕನ್ನು ಶಿವಮೊಗ್ಗ ಜಿಲ್ಲೆಗೆ ಸೇರಿಸುವಂತೆ ಕೋರಿದ್ದವು. ನ್ಯಾಮತಿ ತಾಲೂಕಿನಿಂದ ದಾವಣಗೆರೆ 120 ಕಿ.ಮಿ. ದೂರ ಇದೆ. ಆದರೆ ಶಿವಮೊಗ್ಗ ಜಿಲ್ಲಾ ಕೇಂದ್ರವು ನ್ಯಾಮತಿ ತಾಲೂಕು ಕೇಂದ್ರ ಹಾಗೂ ವಿವಿಧ ಗ್ರಾಮಗಳಿಂದ ಕೇವಲ 25 ರಿಂದ 35 ಕಿ.ಮಿ. ದೂರದ ವ್ಯಾಪ್ತಿಯಲ್ಲಿದೆ ಎಂದು ಮನವಿಯಲ್ಲಿ ಹೇಳಲಾಗಿತ್ತು.

ವಿವಿಧ ಸರ್ಕಾರಿ ಕೆಲಸಗಳಿಗೆ ಈಗಿನ ಜಿಲ್ಲಾ ಕೇಂದ್ರ ದಾವಣಗೆರೆಗೆ ನಾವು ಹೋಗಿ ಬರುವುದಕ್ಕೆ ಒಂದು ದಿನ ಬೇಕಾಗುತ್ತದೆ. ಆದ್ದರಿಂದ ಸರ್ಕಾರ ಕೂಡಲೆ ನಮ್ಮ ಮನವಿಯನ್ನು ಪುರಸ್ಕರಿಸಿ ನ್ಯಾಮತಿ ತಾಲೂಕನ್ನು ಶಿವಮೊಗ್ಗ ಜಿಲ್ಲೆಗೆ ಮರು ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾಧಿಕಾರಿಗಳು ಉಪವಿಭಾಗಾಧಿಕಾರಿಗಳಿಗೆ ಪತ್ರ ಬರೆದು ಕೂಲಂಕುಶವಾಗಿ ಪರಿಶೀಲಿಸಿ, ಸ್ಥಾನಿಕ ವಿಚಾರಣೆ ನಡೆಸಿ, ಸ್ಪಷ್ಟ ಅಭಿಪ್ರಾಯವನ್ನು ಪೂರಕ ದಾಖಲೆಗಳ ಸಹಿತ ವರದಿ ಮಾಡುವಂತೆ ಸೂಚಿಸಿದ್ದರು. ಉಪವಿಭಾಗಾಧಿಕಾರಿ ಸೂಚನೆಯಂತೆ ಈಗ ನ್ಯಾಮತಿ ತಾಲೂಕು ತಹಶೀಲ್ದಾರ್‌ ಎಲ್ಲಾ ಗ್ರಾ.ಪಂ.ಗಳಿಗೆ ಪತ್ರ ಬರೆದು ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಹೇಳಿದ್ದಾರೆ.

ಶಿಕಾರಿಪುರ ಜಿಲ್ಲೆ?: ಹಿಂದೆ 2010-2011ರಲ್ಲಿ ಬಿ.ಎಸ್‌.ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಶಿಕಾರಿಪುರ ಜಿಲ್ಲೆಯನ್ನಾಗಿ ಮಾಡಲು ಎಲ್ಲಾ ಸರ್ಕಾರಿ ಕಚೇರಿಗಳನ್ನು ಜಿಲ್ಲಾ ಕೇಂದ್ರದ ಅಗತ್ಯಗಳಿಗೆ ತಕ್ಕಂತೆ ನಿರ್ಮಾಣ ಮಾಡಿಸಿದ್ದರು. ಆದರೆ ಅಷ್ಟು ಹೊತ್ತಿಗಾಗಲೇ ಸರ್ಕಾರ ಬಿದ್ದುಹೋಗಿದ್ದರಿಂದ ಶಿಕಾರಿಪುರ ಜಿಲ್ಲೆಯಾಗಲಿಲ್ಲ, ಆದರೆ ಈಗ ಮತ್ತೆ ಯಡಿಯೂರಪ್ಪ ಸಿಎಂ ಆಗಿರುವುದರಿಂದ ಶಿಕಾರಿಪುರ ಜಿಲ್ಲೆಯಾಗಬಹುದು. ಆಗ ನ್ಯಾಮತಿ ತಾಲೂಕನ್ನು ಶಿಕಾರಿಪುರಕ್ಕೆ ಸೇರಿಸಿದರೆ ಅನುಕೂಲವಾಗಬಹುದು ಎಂಬ ಮಾತೂ ಸಹ ನ್ಯಾಮತಿ ತಾಲೂಕಿನಲ್ಲಿ ಕೇಳಿಬರುತ್ತಿದೆ.

Advertisement

ದಾವಣಗೆರೆ ಜಿಲ್ಲೆಗೆ ನಮ್ಮ ತಾಲೂಕಿನ ಜನತೆ ಹೋಗಿ ಬರಲಿಕ್ಕೆ ಒಂದು ದಿನ ಪೂರ್ತಿ ಬೇಕು. ವಯಸ್ಸಾದವರು ಹೋಗಲು ತೊಂದರೆಯಾಗುತ್ತದೆ. ಆದ್ದರಿಂದ ನ್ಯಾಮತಿ ತಾಲೂಕನ್ನು ಶಿವಮೊಗ್ಗ ಜಿಲ್ಲೆಗೆ ಸೇರ್ಪಡೆ ಮಾಡಿದರೆ ತುಂಬಾ ಅನುಕೂಲವಾಗಲಿದೆ ಎಂಬ ದೃಷ್ಟಿಯಿಂದ ಸರ್ಕಾರಕ್ಕೆ ಪತ್ರ ಬರೆದು ಶಿವಮೊಗ್ಗ ಜಿಲ್ಲೆಗೆ ಸೇರ್ಪಡೆ ಮಾಡುವಂತೆ ಮನವಿ ಮಾಡಿದ್ದೇನೆ.
ಬಿ.ವಿ.ಹನುಮಂತಪ್ಪ.,
ತಾ.ಪಂ.ಸದಸ್ಯ, ಚಟ್ನಹಳ್ಳಿ.

ನ್ಯಾಮತಿ ತಾಲೂಕು ಶಿವಮೊಗ್ಗ ಜಿಲ್ಲೆಗೆ ಸೇರ್ಪಡೆ ವಿಚಾರ ಹಾಗೂ ಜನರ ಆಶಯವನ್ನು ತಿಳಿದುಕೊಂಡಿದ್ದೇನೆ. ನ್ಯಾಮತಿ ಭಾಗದ ಸಾರ್ವಜನಿಕರೊಂದಿಗೆ ಮಾತನಾಡಿ ನಿರ್ಧರಿಸಲಾಗುವುದು. ವೈಯಕ್ತಿಕವಾಗಿ ನಾನು ಒಬ್ಬನೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ.
ಎಂ.ಪಿ.ರೇಣುಕಾಚಾರ್ಯ,
 ಶಾಸಕರು, ಹೊನ್ನಾಳಿ.

ನ್ಯಾಮತಿ ತಾಲೂಕು ಕೇಂದ್ರ ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ಕೇವಲ 30 ಕಿ.ಮೀ. ದೂರವಿದ್ದು ನ್ಯಾಮತಿ ತಾಲೂಕನ್ನು ಶಿವಮೊಗ್ಗ ಜಿಲ್ಲೆಗೆ ಸೇರಿಸುವುದು ನ್ಯಾಮತಿ ತಾಲೂಕಿನ ಜನತೆಯ ಆಶಯವಾಗಿದೆ.
ಡಿ.ಎಂ.ಹಾಲಾರಾಧ್ಯ,
ಹಿರಿಯ ಪತ್ರಕರ್ತ, ನ್ಯಾಮತಿ.

ಶಿವಮೊಗ್ಗ ಭಾಗ
ಹೊನ್ನಾಳಿ ತಾಲೂಕು 1997ಕ್ಕಿಂತ ಮೊದಲು ಶಿವಮೊಗ್ಗ ಜಿಲ್ಲೆಯ ಭಾಗವಾಗಿತ್ತು. ಈಗಿನ ನ್ಯಾಮತಿ ತಾಲೂಕು ಹೊನ್ನಾಳಿ ತಾಲೂಕಿನ ಹೋಬಳಿ ಕೇಂದ್ರವಾಗಿತ್ತು. ಜೆ.ಎಚ್. ಪಟೇಲ್ ಸರ್ಕಾರ 1997ರಲ್ಲಿ ದಾವಣಗೆರೆ ಜಿಲ್ಲೆ ರಚಿಸಿದಾಗ ಹೊನ್ನಾಳಿ ತಾಲೂಕನ್ನು ನೂತನ ಜಿಲ್ಲೆಗೆ ಸೇರಿಸಲಾಯಿತು.
Advertisement

Udayavani is now on Telegram. Click here to join our channel and stay updated with the latest news.

Next