ಹೊನ್ನಾಳಿ: ಕಳೆದ ವರ್ಷ ಮಳೆ ಕೊರತೆಯಾದ ಕಾರಣ ಮಾವು ಇಳುವರಿ ಕಡಿಮೆಯಾಗಿದ್ದು, ಮಾರ್ಕೇಟ್‌ಗೆ ಹೆಚ್ಚು ಮಾವು ಬಾರದೆ ವ್ಯಾಪಾರ, ವಹಿವಾಟು ಕ್ಷೀಣಿಸಿದೆ. ಏ.10ರ ನಂತರ ಎಲ್ಲಾ ಜಾತಿಯ ಮಾವಿನ ಹಣ್ಣು ಮಾರ್ಕೇಟ್‌ಗೆ ಬರಬೇಕಿತ್ತು. ಆದರೆ ಮೇ ತಿಂಗಳು ಬಂದರೂ ಕೇವಲ ರಸಪೂರಿ(ಕಸಿ), ಸಿಂಧೂರ ಜಾತಿ ಮಾವಿನಹಣ್ಣುಗಳು ಮಾತ್ರ ಮಾರ್ಕೇಟ್‌ಗೆ ಬಂದಿವೆ.
ಮೇ ತಿಂಗಳ ಕೊನೆ ವಾರದಲ್ಲಿ ಮುಂಗಾರು ಪ್ರಾರಂಭವಾಗಿ ಮಳೆ ಬೀಳಲು ಪ್ರಾರಂಭವಾಗುತ್ತದೆ. ಆಗ ಮಳೆ ಬಿದ್ದ ನಂತರ ಮಾವು ತಿನ್ನಬಾರದೆಂದು ಜನರು ಖರೀದಿ ನಿಲ್ಲಿಸುತ್ತಾರೆ. ಅಷ್ಟರಲ್ಲಿಯೇ ಮಾವಿನ ವ್ಯವಹಾರ ಮುಗಿಯಬೇಕು.
ಈಗಾಗಲೇ ಮಾರ್ಕೇಟ್‌ಗೆ ಮಾವಿನ ಅತಿ ಬೇಡಿಕೆಯ ತಳಿಗಳಾದ ಮಲ್ಲಿಕಾ, ಬಾದಾಮು, ರತ್ನಾಗಿರಿ ಆಪೂಸ್, ಮಲಗೋವಾ ಸೇರಿದಂತೆ ಇತರ ಜಾತಿಯ ಹಣ್ಣುಗಳು ಬಂದು ರಾರಾಜಿಸಬೇಕಿತ್ತು. ಆದರೆ ಈ ಜಾತಿಯ ಹಣ್ಣುಗಳು ಮಾರ್ಕೇಟ್‌ನಲ್ಲಿ ಕಾಣುತ್ತಿಲ್ಲ. ನ್ಯಾಮತಿ ತಾಲೂಕಿನ ಕೆಲ ಹಳ್ಳಿಗಳಲ್ಲಿ ಮಾವು ಬೆಳೆಯಲಾಗುತ್ತದೆ. ಅಲ್ಲಿಂದ ನೇರವಾಗಿ ಹುಬ್ಬಳ್ಳಿ, ಗೋವಾ ಮತ್ತು ಮುಂಬೈ ನಗರಗಳಿಗೆ ಕಳಿಸಿಕೊಡಲಾಗುತ್ತದೆ. ಹೀಗಾಗಿ ನಮಗೆ ಮಾವು ಸಿಗುತ್ತಿಲ್ಲ ಎನ್ನುತ್ತಾರೆ ಪಟ್ಟಣದ ಬೀದಿ ಬದಿ ವ್ಯಾಪಾರಿಗಳು.
ಸದ್ಯಕ್ಕೆ ಮಾರ್ಕೇಟ್‌ನಲ್ಲಿ ದೊರೆಯುವ ರಸಪೂರಿ(ಕಸಿ) ರೂ.60ರಿಂದ 70, ಸಿಂಧೂರ ರೂ.50ರಿಂದ 60, ಬೆನೀಷಾ ರೂ.60ರಿಂದ 70 ದರದಲ್ಲಿ ಮಾರಾಟವಾಗುತ್ತಿವೆ.
ಬಾದಾಮು, ಮಲ್ಲಿಕಾ ಮಾವಿನ ಹಣ್ಣುಗಳ ದರ ಹೆಚ್ಚಾಗಿದ್ದು ಪಟ್ಟಣದಲ್ಲಿ ಅವುಗಳನ್ನು ಕೊಳ್ಳಲಿಕ್ಕೆ ಗ್ರಾಹಕರು ಇಷ್ಟಪಡುವುದಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಮಳೆ ಕೊರತೆ ಹಾಗೂ ಇಳುವರಿ ಇಲ್ಲದ ಕಾರಣ ಈ ವರ್ಷ ಮಾವಿನ ವ್ಯಾಪಾರ ಕ್ಷೀಣಿಸಿದೆ. ಮೇ 10ರಿಂದ ಜೂನ್ ತಿಂಗಳಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಬಹುದು ಎಂದು ನಂಬಿದ್ದೇವೆ.
•
ಮುಬಾರಕ್, ಹಣ್ಣಿನ ವ್ಯಾಪಾರಿ.