ಹೊನ್ನಾಳಿ: ಕನಕದಾಸರ ಸಾಹಿತ್ಯದಲ್ಲಿ ನೈತಿಕ ಮೌಲ್ಯಗಳು ಬೀಜಮಂತ್ರದಂತೆ ಬಿತ್ತರಗೊಂಡಿವೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಪಟ್ಟಣದ ಪ.ಪಂ.ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನಕದಾಸರು ದಾಸರಲ್ಲಿ ಕವಿ, ಕವಿಗಳಲ್ಲಿ ದಾಸರೆಂಬ ಹೆಗ್ಗಳಿಕೆಗೆ ಪಾತ್ರರಾದವರು. ಇಂತಹ ದಾರ್ಶನಿಕರು ಸಮಾಜದ ಅಂಕುಡೊಂಕುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.
ಕೇವಲ ವೇದಿಕೆಗಳಲ್ಲಿ ಬರೀ ಭಾಷಣ ಮಾಡದೆ ಅವರ ಆದರ್ಶಗಳನ್ನು ಮೊದಲು ಮೈಗೂಡಿಸಿಕೊಂಡು, ಅವರು ಹಾಕಿಕೊಟ್ಟ ಮೇಲ್ಪಂಕ್ತಿ ಯಲ್ಲಿ ನಡೆದಾಗ ಮಾತ್ರ ಅವರ ಜಯಂತಿ ಆಚರಣೆಗೆ ಸಾರ್ಥಕತೆ ಬರುತ್ತದೆ ಎಂದರು. ಕನಕದಾಸ, ಬುದ್ಧ, ಬಸವ,ಅಂಬಿಗರ ಚೌಡಯ್ಯ, ಕಿತ್ತೂರುರಾಣಿ ಚೆನ್ನಮ್ಮ, ವಿವೇಕಾನಂದ ಇನ್ನೂ ಅನೇಕ ಅವತಾರ ಪುರುಷರು ಜನಿಸಿದ್ದಾರೆ. ಅಂತಹ ಮಹನೀಯರನ್ನು ಒಂದೇ ಜಾತಿಗೆ ಸೀಮಿತ ಮಾಡಬೇಡಿ. ಅವರು ಸರ್ವಜನರಿಗೂ ಸಲ್ಲುವ ಆದರ್ಶ ಪುರುಷರು. ಅವರ ಜಯಂತಿತ್ಯುತ್ಸವದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಮಾಡಬೇಕು ಎಂದರು.
ದಾಸ ಸಾಹಿತ್ಯದಲ್ಲಿ ಅತೀ ಶ್ರೇಷ್ಠವಾದ ಕನಕದಾಸರ ಕೀರ್ತನೆಗಳನ್ನು ಮಕ್ಕಳಿಗೆ ಪರಿಚಯ ಮಾಡುವ ರೀತಿಯಲ್ಲಿ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕು. ಕೀರ್ತನೆಗಳನ್ನು ಅಭ್ಯಾಸ ಮಾಡುವ ಮಕ್ಕಳು ಸಂಸ್ಕಾರವಂತರಾಗಿ ಸನ್ಮಾರ್ಗದಲ್ಲಿ ನಡೆಯುತ್ತಾರೆ ಎಂದರು.
ಉಪನ್ಯಾಸಕ ಬಸವರಾಜ್ ಕನಕದಾಸರ ಬಗ್ಗೆ ಉಪನ್ಯಾಸ ನೀಡಿ, ಕನಕದಾಸರು ರಚಿಸಿದ ಹರಿಭಕ್ತಸಾರ ಕನ್ನಡ ಭಗವದ್ಗೀತೆ ಎಂದು ಚಿರಪರಿಚಿತವಾಗಿದೆ ಎಂದರು. ತಾಲೂಕು ಕುರುಬ ಸಮಾಜದ ಮುಖಂಡರಾದ ಕುಂಬಳೂರು ಹಾಲಪ್ಪ, ತಹಶೀಲ್ದಾರ್ ತುಷಾರ್ ಬಿ ಹೊಸೂರ, ಜಿ.ಪಂ ಸದಸ್ಯರಾದ ಎಂ.ಆರ್. ಮಹೇಶ್, ಡಿ.ಜಿ. ವಿಶ್ವನಾಥ್ ಮಾತನಾಡಿದರು.
ತಾ.ಪಂ.ಅಧ್ಯಕ್ಷೆ ಚಂದ್ರಮ್ಮ ಹಾಲೇಶಪ್ಪ, ಜಿ.ಪಂ. ಉಪಾಧ್ಯಕ್ಷ ಸುರೇಂದ್ರನಾಯ್ಕ, ಪ.ಪಂ. ಸದಸ್ಯರಾದ ಧರ್ಮಪ್ಪ, ಸುರೇಶ್ ಹೊಸಕೇರಿ, ಕೆ.ವಿ. ಶ್ರೀಧರ್, ಪ.ಪಂ. ಮುಖ್ಯಾಧಿಕಾರಿ ವೀರಭದ್ರಯ್ಯ, ಕುರುಬ ಸಮಾಜದ ಮುಖಂಡರಾದ ಕತ್ತಿಗೆ ನಾಗರಾಜ್, ವಾಸಪ್ಪ, ರಾಜು ಕಣಗಣ್ಣಾರ್, ಬಿಇಒ ರಾಜೀವ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸಣ್ಣ ಹಾಗೂ ಇತರರು ಇದ್ದರು.