Advertisement

ಶರಣರ ತತ್ವಾದರ್ಶ ಇಂದಿಗೂ ಪ್ರಸ್ತುತ

10:04 AM Jul 17, 2019 | Naveen |

ಹೊನ್ನಾಳಿ: ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಂಯುಕ್ತಾಶ್ರಯದಲ್ಲಿ ಪ.ಪಂ ಸಭಾಂಗಣದಲ್ಲಿ ಮಂಗಳವಾರ ಶಿವಶರಣ ಹಡಪದ ಅಪ್ಪಣ್ಣ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿತ್ತು.

Advertisement

ಸಮಾರಂಭ ಉದ್ಘಾಟಿಸಿ ಮಾತನಾಡಿದ ಜಿ.ಪಂ ಉಪಾಧ್ಯಕ್ಷ ಸುರೇಂದ್ರನಾಯ್ಕ, ಎಲ್ಲಾ ಜನಾಂಗದ ಜಯಂತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಜನಾಂಗದಲ್ಲಿ ಒಗ್ಗಟ್ಟು ಮೂಡಿ ಸಮಾಜಕ್ಕೆ ದೊರಕುವ ಸೌಲಭ್ಯಗಳು ಲಭ್ಯವಾಗುತ್ತವೆ ಎಂದು ಹೇಳಿದರು.

ಪ್ರತಿ ಜಯಂತಿ ಕಾರ್ಯಕ್ರಮದಲ್ಲಿ ಮಹಾನ್‌ ದಾರ್ಶನಿಕರ ಬಗ್ಗೆ ಮಾಹಿತಿ ದೊರೆತು ಅವುಗಳನ್ನು ಅನುಸರಿಸಲು ಸಹಾಯಕವಾಗುತ್ತದೆ. ಉತ್ತಮ ನಡೆ-ನುಡಿಯ ಶರಣರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ ಎಂದು ಹೇಳಿದರು.

ಸಂಘಟನೆಯಲ್ಲಿ ಶಕ್ತಿ ಇದೆ. ಈ ಶಕ್ತಿ ಇತ್ತೀಚಿನ ದಿನಗಳಲ್ಲಿ ಜಯಂತಿ ಕಾರ್ಯಕ್ರಮಗಳನ್ನು ಆಚರಿಸುವುದರ ಮೂಲಕ ಹೊರಹೊಮ್ಮುತ್ತಿದೆ ಎಂದು ಹೇಳಿದರು.

ಜಿ.ಪಂನಿಂದ ಹಡಪದ ಸಮಾಜಕ್ಕೆ ಸಹಾಯ, ಸಹಕಾರ ಮಾಡಲು ನಾನು ಸದಾ ಸಿದ್ಧ. ಸಮಾಜದ ಮುಖಂಡರು ಮುಂದೆ ಬರಬೇಕು ಎಂದು ಹೇಳಿದರು.

Advertisement

ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ ಕೆ.ಎಸ್‌. ತಿಪ್ಪೇಶಿ ಮಾತನಾಡಿ, ನಮ್ಮ ಸಮಾಜಕ್ಕೆ 2ಎ ವರ್ಗದ ಪ್ರಮಾಣ ಪತ್ರ ನೀಡಬೇಕೆಂದು ಹಲವಾರು ಬಾರಿ ಸರ್ಕಾರಕ್ಕೆ ಒತ್ತಾಯಿಸಿದ್ದರೂ ಇದುವರೆಗೂ ಕಾರ್ಯಗತವಾಗಿಲ್ಲ. ತಕ್ಷಣ ನಮ್ಮ ಸಮಾಜವನ್ನು 2ಎ ವರ್ಗಕ್ಕೆ ಸೇರಿಸಿ ಪ್ರಮಾಣ ಪತ್ರ ನೀಡಬೇಕು ಎಂದು ಒತ್ತಾಯಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್‌ ತುಷಾರ್‌ ಬಿ.ಹೊಸೂರು ಮಾತನಾಡಿ, ಮಹಾತ್ಮರು ನಡೆದ ದಾರಿಯಲ್ಲಿ ನಾವು ಸಾಗಬೇಕಿದೆ. ಜಯಂತಿ ಕಾರ್ಯಕ್ರಮಗಳ ಮೂಲಕ ನಾವೆಲ್ಲರೂ ಆದರ್ಶ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಎಚ್.ಬಸವರಾಜು ಶಿವಶರಣ ಹಡಪದ ಅಪ್ಪಣ್ಣ ಜೀವನ ಚರಿತ್ರೆ ಬಗ್ಗೆ ಉಪನ್ಯಾಸ ನೀಡಿದರು. ತಾ.ಪಂ ಸದಸ್ಯ ಸಿದ್ದಲಿಂಗಪ್ಪ, ಪ.ಪಂ ಸದಸ್ಯ ಬಾವಿಮನೆ ರಾಜಪ್ಪ, ಪ.ಪಂ ಮುಖ್ಯಾಧಿಕಾರಿ ಎಸ್‌.ಆರ್‌. ವೀರಭದ್ರಯ್ಯ, ಪಿಎಸ್‌ಐ ತಿಪ್ಪೇಸ್ವಾಮಿ, ಇಸಿಒ ಸಿದ್ದಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸಣ್ಣ ಉಪಸ್ಥಿತರಿದ್ದರು.

ಸಮಾಜದ ಗಣ್ಯರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಿಕ್ಷಕ ಪ್ರೇಮಕುಮಾರ್‌ ಸ್ವಾಗತಿಸಿದರು. ಇದಕ್ಕೂ ಮುನ್ನ ಪಟ್ಟಣದಲ್ಲಿ ಹಡಪದ ಅಪ್ಪಣ್ಣ ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ಜರುಗಿತು.

Advertisement

Udayavani is now on Telegram. Click here to join our channel and stay updated with the latest news.

Next