ಹೊನ್ನಾಳಿ: ಹಸಿರೇ ನಮ್ಮ ಉಸಿರು. ಭೂಮಿಯ ಮೇಲೆ ಜೀವ ಸಂಕುಲ ಉಳಿಯಬೇಕೆಂದರೆ ಹಸಿರು ಅನಿವಾರ್ಯ. ಕಾಡು ಮತ್ತು ನೀರಿನ ಮಹತ್ವವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಂಡು ಪ್ರಕೃತಿ ಸಂರಕ್ಷಣೆಗೆ ಮುಂದಾಗಬೇಕಿದೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ತಾಲೂಕು ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಹಸಿರು ಕರ್ನಾಟಕ ಯೋಜನೆಯಡಿ ಸಸ್ಯ ಸಂತೆ ಕಾರ್ಯಕ್ರಮದಡಿಯಲ್ಲಿ ಸಾರ್ವಜನಿಕರು, ರೈತರಿಗೆ ಉಚಿತವಾಗಿ ವಿವಿಧ ಜಾತಿಯ ಸಸಿಗಳನ್ನು ವಿತರಿಸುವ ಮೂಲಕ ಸಸ್ಯ ಸಂತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಇಂದು ಎಷ್ಟೇ ಮುಂದುವರಿದಿದ್ದರೂ ಕೂಡ ಪ್ರಕೃತಿ ಮುಂದೆ ಮನುಷ್ಯ ಕುಬ್ಜನಾಗಿದ್ದಾರೆ ಇಂದು ಅಭಿವೃದ್ಧಿ ಹೆಸರಿನಲ್ಲಿ ನಿರಂತರವಾಗಿ ಕಾಡು ನಾಶವಾಗುತ್ತಿದ್ದು, ಇದರ ಪರಿಣಾಮ ಇಂದು ಕಾಡು ಪ್ರಾಣಿಗಳು ಕಾಡಿನಲ್ಲಿ ತಮ್ಮ ನೆಲೆ ಕಳೆದುಕೊಂಡು ನಾಡಿಗೆ ನುಗ್ಗುತ್ತಿವೆ. ಇನ್ನೊಂದೆಡೆ ಮಳೆ ಅಭಾವದಿಂದ ರೈತ ಬೆಳೆ ಬೆಳೆಯಲಾರದ ಪರಿಸ್ಥಿತಿಗೆ ತಲುಪುತ್ತಿದ್ದಾರೆ. ಜತೆಗೆ ಜಾಗತಿಕ ತಾಪಮಾನ ಕೂಡ ಹೆಚ್ಚಾಗುತ್ತಿದೆ. ಒಟ್ಟಾರೆಯಾಗಿ ಈ ಎಲ್ಲ ಬೆಳವಣಿಗೆಗಳು ಜೀವ ಸಂಕುಲಕ್ಕೆ ಮಾರಕವಾಗಿವೆ ಎಂದು ಹೇಳಿದರು.
ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ದೇವರಾಜ್ ಮಾತನಾಡಿ, ಹೊನ್ನಾಳಿಯಲ್ಲಿ ಇಂದಿನಿಂದ ಒಂದು ವಾರಗಳ ಕಾಲ ಸಸ್ಯ ಸಂತೆ ಕಾರ್ಯಕ್ರಮದ ಮೂಲಕ ಜನರಿಗೆ ಸಸಿಗಳನ್ನು ಉಚಿತವಾಗಿ ವಿತರಿಸಲಾಗುವುದು. ಮುಂದಿನ ವಾರ ನ್ಯಾಮತಿಯಲ್ಲಿ ಕಾರ್ಯಕ್ರಮ ನಡೆಸುವ ಮೂಲಕ ಜನರಲ್ಲಿ ಸಸ್ಯ ಪ್ರೀತಿ ಬೆಳೆಸುವ ಯೋಜನೆ ಹಾಕಿಕೊಳ್ಳಲಾಗಿದೆ. ತಾಲೂಕಿನಲ್ಲಿ ಎರಡು ಲಕ್ಷ ಸಸಿ ವಿತರಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಹಸಿರು ಕರ್ನಾಟಕ ಯೋಜನೆಯಡಿ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆ ಮುಂದೆ ಕನಿಷ್ಟ 2 ಸಸಿಗಳನ್ನು ನಡೆಸುವ ಕೆಲಸ ಮಾಡಲಾಗುವುದು. ಈ ಕೆಲಸಕ್ಕೆ ಆರಣ್ಯ ಇಲಾಖೆ ಸಿಬ್ಬಂದಿ ಕೂಡ ಕೈ ಜೋಡಿಸಲಿದ್ದಾರೆ. ಕನಿಷ್ಠ ಒಂದು ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಜಿಪಂ ಉಪ ಕಾರ್ಯದರ್ಶಿ ಭೀಮಾನಾಯ್ಕ, ಮುಖ್ಯ ಲೆಕ್ಕಾಧಿಕಾರಿ ಜಗನ್ನಾಥ್, ತಾಪಂ ಅಧಿಕಾರಿ ರಾಘವೇಂದ್ರ, ಜಿಪಂ ಉಪಾಧ್ಯಕ್ಷ ಸಿ. ಸುರೇಂದ್ರನಾಯ್ಕ, ಯೋಜನಾಧಿಕಾರಿ ಶಾರದಾ, ಜಿಪಂ ಅಧಿಕಾರಿ ಶಶಿಧರ, ವಲಯ ಅರಣ್ಯಾಧಿಕಾರಿ ಕಿಶೋರ್, ಧನ್ಯಕುಮಾರ್, ಈಶ್ವರನಾಯ್ಕ, ತಾ.ಪಂನ ಕೆ.ರಂಗಪ್ಪ, ಮುಖಂಡ ಮಹೇಶ್ವರ ಗೌಡ ಸೇರಿದಂತೆ ಅರಣ್ಯ ಇಲಾಖೆಯ ವಿವಿಧ ಅಧಿಕಾರಿಗಳು ಇದ್ದರು.